ವಿಧಾನಸಭೆ ಅಧಿವೇಶನದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ಶಾಸಕರಿಗೆ ವಿಪ್ ಜಾರಿ!
ಶಾಸಕರು ಸದನಕ್ಕೆ ಗೈರಾದರೆ ಅಥವಾ ಹಾಜರಿದ್ದು ಸರ್ಕಾರದ ಪರ ಮತ ಚಲಾಯಿಸದೆ ಇದ್ದರೆ ಪಕ್ಷಾಂತರ ವಿರೋಧಿ ಕಾನೂನಿನಡಿಯಲ್ಲಿ ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗುವುದು ಎಂದು ವಿಪ್ನಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ರಾಜಕೀಯ ಹೈಡ್ರಾಮ ಮುಂದುವರೆದ ಹಿನ್ನೆಲೆಯಲ್ಲಿ ಸುಕ್ರವಾರದಿಂದ ಆರಂಭವಾಗಲಿರುವ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ಎಲ್ಲಾ ಶಾಸಕರೂ ಹಾಜರಿರುವಂತೆ ಮೈತ್ರಿ ಪಕ್ಷಗಳ ಶಾಸಕರಿಗೆ ಕರ್ನಾಟಕ ವಿಧಾನಸಭೆಯ ಮುಖ್ಯ ಸಚೇತಕ ಗಣೇಶ್ ಹುಕ್ಕೇರಿ ವಿಪ್ ಜಾರಿ ಮಾಡಿದ್ದಾರೆ.
ನಾಳೆಯಿಂದ ಆರಂಭವಾಗಲಿರುವ ವಿಧಾನಸಭೆ ಮುಂಗಾರು ಅಧಿವೇಶನದಲ್ಲಿ ಹಣಕಾಸು ಮಸೂದೆ ಮತ್ತು ಇತರ ಮಸೂದೆಗಳನ್ನು ಅಂಗೀಕರಿಸಲು ಎಲ್ಲಾ ಶಾಸಕರು ತಪ್ಪದೇ ಸದನದಲ್ಲಿ ಹಾಜರಿರಬೇಕು ಮತ್ತು ಸರ್ಕಾರದ ಪರವಾಗಿ ಮತ ಚಲಾಯಿಸಬೇಕು. ಒಂದು ವೇಳೆ ಸದನಕ್ಕೆ ಗೈರಾದರೆ ಅಥವಾ ಹಾಜರಿದ್ದು ಸರ್ಕಾರದ ಪರ ಮತ ಚಲಾಯಿಸದೆ ಇದ್ದರೆ ಪಕ್ಷಾಂತರ ವಿರೋಧಿ ಕಾನೂನಿನಡಿಯಲ್ಲಿ ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗುವುದು ಎಂದು ವಿಪ್ನಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ.
ಮತ್ತೊಂದೆಡೆ ರಾಜೀನಾಮೆ ನೀಡಿ ಮುಂಬೈ ಹೋಟೆಲ್ ನಲ್ಲಿ ತಂಗಿದ್ದ ಅತೃಪ್ತ ಶಾಸಕರು ಇಂದು ಮತ್ತೊಮ್ಮೆ ರಾಜೀನಾಮೆ ಸಲ್ಲಿಸಲು ಬೆಂಗಳೂರಿಗೆ ಆಗಮಿಸಿ ಸ್ಪೀಕರ್ ಕಚೇರಿ ತಲುಪಿದ್ದಾರೆ. ಆದರೆ ಶಾಸಕರು ನಿಗದಿತ ಸಮಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅವರು ರಾಜೀನಾಮೆ ಸ್ವೀಕರಿಸುತ್ತಾರೆಯೇ, ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.
ಇಂದು ಬೆಳಿಗ್ಗೆಯಷ್ಟೇ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು, 'ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನವಾಗುವುದಿಲ್ಲ. ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ' ಎಂದು ಹೇಳಿದ್ದರು.