ಯಾರು ಈ ಜಮೀರ್ ಅಹಮದ್ ಖಾನ್? ಹೆಚ್.ಡಿ.ದೇವೇಗೌಡರು ಖಾನ್ ವಿರುದ್ಧ ಗರಂ ಆಗಿರೋದ್ಯಾಕೆ?
ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರ ಆಪ್ತರಾಗಿದ್ದ ಜಮೀರ್ ಅಹಮದ್ ಖಾನ್ ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.
ಬೆಂಗಳೂರು : ಇತ್ತೀಚೆಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರಿದ 7 ಬಂಡಾಯ ಶಾಸಕರಲ್ಲಿ ಜಮೀರ್ ಅಹಮದ್ ಖಾನ್ ಕೂಡ ಒಬ್ಬರು. ಅವರೇ ಈ ಬಂಡಾಯ ಶಾಸಕರ ನಾಯಕರೂ ಹೌದು.
ನ್ಯಾಷನ್ ಟ್ರಾವೆಲ್ಸ್ ಉದ್ಯಮದಲ್ಲಿ ಪಾಲು ಹೊಂದಿರುವ ಜಮೀರ್ ಅಹಮದ್ ಖಾನ್, ಬಹಳ ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿದ್ದರು. ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರ ಆಪ್ತರಾಗಿದ್ದ ಜಮೀರ್ ಅಹಮದ್ ಖಾನ್ ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಅವರು ಪ್ರಬಲ ಮುಸ್ಲಿಂ ನಾಯಕರೂ ಹೌದು.
2004ರಲ್ಲಿ ಎಸ್.ಎಂ.ಕೃಷ್ಣ ಅವರು ರಾಜ್ಯಪಾಲರಾಗಿ ಆಯ್ಕೆಗೊಂಡು ಕ್ಷೇತ್ರ ತೊರೆದ ಮೇಲೆ ಚಾಮರಾಪೇಟೆಯಲ್ಲಿ ನಡೆದ ಉಪ ಚುನಾವಣೆಯಲ್ಲಿ ಜಮೀರ್ ಆಯ್ಕೆಯಾದರು. ನಂತರ 2008, 2013 ಸೇರಿ ಮೂರು ಬಾರಿ ಚಾಮರಾಜಪೇಟೆ ಕ್ಷೇತ್ರದಿಂದ ಸತತವಾಗಿ ಗೆಲುವು ಸಾಧಿಸಿದವರು. ಅಲ್ಲದೆ, ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದಾಗ ಹಜ್ ಮತ್ತು ವಕ್ಫ್ ಖಾತೆ ಸಚಿವರಾಗಿಯೂ ಖಾನ್ ಕಾರ್ಯನಿರ್ವಹಿಸಿದ್ದರು.
ಆದರೆ, 2016ರಲ್ಲಿ ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡಲು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ ಕ್ರಾಸ್ ವೋಟಿಂಗ್ ಮಾಡಿದ್ದ ಜಮೀರ್ ಅಹಮದ್ ಖಾನ್, ಪಕ್ಷದ ವಿಪ್ ಉಲ್ಲಂಘನೆ ಮಾಡಿದ್ದರಿಂದ ಅವರನ್ನು, ಜೆಡಿಎಸ್ ಪಕ್ಷದಿಂದ ಅಮಾನತುಗೊಳಿಸಿತ್ತು.
ನಂತರ ಅವರು ಕಾಂಗ್ರೆಸ್ ಪಕ್ಷದ ನಾಯಕರೊಂದಿಗೆ ಒಡನಾಟ ಬೆಳೆಸಿಕೊಂಡು ಕಾಂಗ್ರೆಸ್ ಪರ ಕಾರ್ಯಗಳಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದ್ದಾರೆ. ಇದೀಗ ಮೊನ್ನೆ ರಾಹುಲ್ ಗಾಂಧಿ ಅವರು ಮೈಸೂರಿಗೆ ಆಗಮಿಸಿದ ಸಂದರ್ಭದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಇವರೊಂದಿಗೆ ಹೆಚ್.ಸಿ ಬಾಲಕೃಷ್ಣ, ಚಲುವರಾಯ ಸ್ವಾಮಿ, ಅಖಂಡ ಶ್ರೀನಿವಾಸ ಮೂರ್ತಿ, ಇಕ್ಬಾಲ್ ಅನ್ಸಾರಿ, ಭೀಮಾ ನಾಯಕ್ ಮತ್ತು ರಮೇಶ್ ಬಂಡಿಸಿದ್ದೇಗೌಡ ಸೇರಿ ಒಟ್ಟು 7 ಬಂಡಾಯ ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಹಾಗಾಗಿ ಈ ಬಾರಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಜಮೀರ್ ಅಹಮದ್ ಖಾನ್'ಗೆ ಕಾಂಗ್ರೆಸ್'ನಿಂದ ಟಿಕೇಟ್ ದೊರೆಯುವುದು ಬಹುತೇಕ ಖಚಿತವಾಗಿದೆ. ಈ ಮಧ್ಯೆ ಸಿದ್ದರಾಮಯ್ಯ ಅವರು ದೇವೇಗೌಡರ ಜೆಡಿಎಸ್ ಪಕ್ಷದ ಬಗ್ಗೆ ಮಾಡುತ್ತಿರುವ ಟೀಕೆಗಳು ಹೆಚ್.ಡಿ.ದೇವೇಗೌಡರ ಪಿತ್ತ ನೆತ್ತಿಗೇರುವಂತೆ ಮಾಡಿದೆ. ತಮ್ಮ ಪಕ್ಷದಿಂದಲೇ ಅಧಿಕಾರಕ್ಕೆ ಬಂದು ಇದೀಗ ತಮ್ಮನ್ನೇ ಅವಹೇಳನ ಮಾಡುತ್ತಿರುವ ಬಂಡಾಯ ಶಾಸಕರ ವಿರುದ್ಧ, ಹಾಗೇ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆದುಕೊಂಡು ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಕೆಂಡಾಮಂಡಲವಾಗಿದ್ದಾರೆ. ಹಾಗಾಗಿಯೇ ಜಮೀರ್ ಅಹಮದ್ ಖಾನ್'ಗೆ ಸರಿಸಮನಾದ ಪೈಲ್ವಾನ್'ನನ್ನು ಬೆಂಗಳೂರಿನ ಚಾಮರಾಜ ಕ್ಷೇತ್ರದಿಂದ ಕಣಕ್ಕಿಳಿಸುವುದಾಗಿ ದೇವೇಗೌಡರು ಹೇಳಿರುವುದು ಈ ಬಾರಿಯ ಚುನಾವಣೆಯಲ್ಲಿ ನೀನೋ? ನಾನೋ? ನೋಡಿಯೇ ಬಿಡೋಣ ಎಂದು ತೊಡೆ ತಟ್ಟಿ ನಿಂತಂತಿದೆ.