ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು ಸಂಭ್ರಮಿಸುವವರು ಮತ್ತು ಹತ್ಯೆ ಖಂಡಿಸಿದ ಕಾರಣಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಹಾಕುವವರು ಮುಖ್ಯವಾಹಿನಿಗೆ ಬಂದು ಚರ್ಚಿಸಲಿ ಎಂದು ನಟ ಪ್ರಕಾಶ್ ರೈ ಸವಾಲು ಹಾಕಿದ್ದಾರೆ. 


COMMERCIAL BREAK
SCROLL TO CONTINUE READING

ಪ್ರಜಾಸತ್ತಾತ್ಮಕ ಯುವ ಜನ ಫೆಡರೇಶನ್(DYFI) 11 ನೇ ರಾಜ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ರೈ, "ಗೌರಿ ಹಂತಕರು ಯಾರೆಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ, ಆದರೆ ಅವರ ಹತ್ಯೆಯನ್ನು ಸಂಭ್ರಮಿಸುವವರನ್ನು ನಿತ್ಯ ಕಾಣುತ್ತಿದ್ದೇವೆ. ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಖಂಡಿಸಿದಕ್ಕೆ ಎಂದೂ ಕೇಳಿರದ ಭಾಷೆಗಳಲ್ಲಿ ನಿಂದಿಸಿದರು. ಅಂತಹವರು ಮುಖ್ಯವಾಹಿನಿಗೆ ಬಂದು ಮಾತನಾಡಲಿ" ಎಂದು ಪ್ರಕಾಶ್ ರೈ ಹೇಳಿದರು. 


ಇಂದು ಪ್ರತೀ ಹಂತದಲ್ಲಿ ನಾವು ರಾಜಕಾರಣವನ್ನು ಕಾಣುತ್ತಿದ್ದೇವೆ. ಇವತ್ತಿನ ಎಲ್ಲಾ ಸಮಸ್ಯೆಗೂ ಭಾರತ ದೇಶದ ಪ್ರತಿ ಪ್ರಜೆಯ ಮೂರ್ಖತನ ಕಾರಣ. ಅದಕ್ಕೆ ಕಾರಣ ನಾವೇ ಎಂಬ ಕಾರಣಕ್ಕಾಗಿ ಪ್ರತಿಯೊಬ್ಬರು ತಮ್ಮನ್ನು ತಾವು ನಿಂದಿಸಿಕೊಳ್ಳಬೇಕು ಎಂದು ರೈ ಆವೇಶ ವ್ಯಕ್ತಪಡಿಸಿದರು. 


ನಮ್ಮ ಸುತ್ತ ನಡೆಯುವ ಎಲ್ಲಾ ರಾದ್ಧಾಂತಕ್ಕೆ ನಾವೇ ಜವಾಬ್ದಾರರು ಎಂದು ನಮಗೆ ಅರ್ಥವಾಗುವ ವರೆಗೂ ಯಾವುದೇ ಪ್ರಗತಿಪರ ಚಿಂತನೆ ಆಗಲು ಸಾಧ್ಯವಿಲ್ಲ. ಒಂದು ಬಾರಿ ಇಂತಹ ಬದಲಾವಣೆ ಹೊಸ ನಾಯಕರು ಬಂದ ಮೇಲೆ ಈ ಸಮಸ್ಯೆಗಳನ್ನು ಹೇಗೆ ಬಗೆಹರಿಸಬೇಕು ಎಂಬುದು ಬೇರೆ ಸಂಗತಿ. 


ಗೌರಿ ಹತ್ಯೆ ಸಂಬಂಧಿಸಿದಂತೆ ಮಾತನಾಡಿದ ಅವರು ಜಾಲತಾಣಗಳನ್ನು ನೋಡಿದರೆ ನಮ್ಮ ರಾಷ್ಟ್ರದ ಪ್ರಧಾನ ಮಂತ್ರಿಗಳು ಮತ್ತು ಅವರನ್ನು ಅನುಸರಿಸುತ್ತಿರುವ ವ್ಯಕ್ತಿಗಳು ಸುತ್ತ ನಡೆಯುತ್ತಿರುವುದನ್ನು ನೋಡಿಯೂ ಸುಮ್ಮನಿರುವುದನ್ನು, ಧಾರುಣವಾಗಿರುವುದನ್ನು ನೋಡಿದರೆ ಬೇಸರವಾಗುತ್ತಿದೆ ಎಂದು ತಿಳಿಸಿದರು. 


ಎಲ್ಲಾ ಆಗುವುದೂ ಒಳ್ಳೆಯದಕ್ಕೇ, ಮೋದಿಗೆ ಬುದ್ದಿ ಹೇಳುವ, ಉತ್ತರ ಹೇಳುವ ಸಮಯ ಬಂದಾಯಿತು. ಜನಗಳು ಬದಲಾಗಬೇಕು. ಯುವ ಜನತೆಗೆ ನಮಸ್ಕಾರ ಮಾಡುವ ಸಮಯ ಮುಂದೆ ಬರುತ್ತದೆ. "ಯಾರೂ ಬಲಶಾಲಿಗಳಲ್ಲ, ಆದರೆ ನಮ್ಮ ಬಲಹೀನತೆ ಅವರ ಬಲ ಅಷ್ಟೇ." ಯಾರಿಗೂ ಹೆದರಬೇಡಿ, ಇರುವ ಸತ್ಯವನ್ನು ಧೈರ್ಯವಾಗಿ ಹೇಳಿ ಎಂದು ಯುವ ಜನತೆಗೆ ಬೆಂಬಲ ವ್ಯಕ್ತಪಡಿಸಿದರು.