ಬೆಂಗಳೂರು: ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಪುತ್ರ ಲೋಕಾಯುಕ್ತ ದಾಳಿಗೆ ತುತ್ತಾಗಿ, ಅವರ ಮನೆ ಮತ್ತು ಕಚೇರಿಗಳಲ್ಲಿ ಕಂತೆ ಕಂತೆ ಹಣ ಸಿಕ್ಕಿರುವ ಬಗ್ಗೆ ಬಿಜೆಪಿಗೆ ತರಾಟೆಗೆ ತೆಗೆದುಕೊಂಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಸದ್ಯ ರಾಜ್ಯ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಖಾರವಾಗಿ ಪ್ರಶ್ನಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ರಾಮರಾಜ್ಯವಾಗಿದ್ದ ಕರ್ನಾಟಕವನ್ನು ಬಿಜೆಪಿ ಪಕ್ಷವು ಕಮೀಷನ್ ರಾಜ್ಯ ಮಾಡಿದೆ ಎಂದು ಕಟುವಾಗಿ ಟೀಕಿಸಿದ್ದಾರೆ. ರಾಜ್ಯಕ್ಕೆ ಮತ್ತೆ ಇಂದು ಹಾರಿ ಬಂದ ಅಮಿತ್ ಶಾ ಅವರಿಗೆ ಹಾರ್ದಿಕ ಸ್ವಾಗತ.. ಸುಸ್ವಾಗತ. ನಿಮ್ಮ ಡಬಲ್ ಎಂಜಿನ್ ಬಿಜೆಪಿ ಸರಕಾರ ಭರ್ತಿ 40% ಕಮೀಷನ್ ಉಡಾಯಿಸುತ್ತಿದೆ ಎನ್ನುವುಕ್ಕೆ ನಿಮ್ಮ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಪುತ್ರನ ಕಂತೆ ಕಂತೆಗಳ ಪುರಾಣವೇ ದೊಡ್ಡ ಪುರಾವೆ ಎಂದು ಅವರು ಕೇಂದ್ರ ಸಚಿವರಿಗೆ ಟಾಂಗ್ ನೀಡಿದ್ದಾರೆ.


ರಿಸರ್ವ್ ಬ್ಯಾಂಕಿನಲ್ಲಿರುವುದಕ್ಕಿಂತ ಹೆಚ್ಚು ಹಣ ಬಿಜೆಪಿಗರ ಮನೆಯಲ್ಲಿದೆ!: ಕಾಂಗ್ರೆಸ್


ಅಮಿತ್ ಶಾ ಅವರೇ ಈಗ ಹೇಳಿ.. ಕರ್ನಾಟಕ ಯಾರ ಎಟಿಎಂ? ರಾಜ್ಯವನ್ನು ಭ್ರಷ್ಟಾಚಾರ ಮುಕ್ತ ಮಾಡುತ್ತೇವೆ ಎಂದು ನೀವು ಹೇಳಿದ್ದು ಈ ಅರ್ಥದಲ್ಲಿಯಾ? ಭ್ರಷ್ಟಾಚಾರ ಮುಕ್ತ ಮಾಡುವುದು ಎಂದರೆ ಅಪ್ಪನ ಪರವಾಗಿ ಪುತ್ರರತ್ನ ಕಂತೆಕಂತೆ ಕಟ್ಟುಗಳನ್ನು ಸ್ವಂತ ಎಟಿಎಂಗೆ ಇಳಿಸುವುದಾ? ಸಾಬೂನು ಕಾರ್ಖಾನೆಯನ್ನು ಸಖತ್ತಾಗಿ ಸಾರಿಸಿ ಗಂಡಾಂತರ ಮಾಡುವುದಾ? ಎಂದು ಪ್ರಶ್ನಿಸಿದ್ದಾರೆ.


ನಿಮ್ಮ ಡಬಲ್ ಎಂಜಿನ್ ಬಿಜೆಪಿ ಸರಕಾರ 40% ಕೊಚ್ಚೆಯಲ್ಲಿ ಉರುಳಾಡುತ್ತಿದೆ ಎನ್ನುವುದಕ್ಕೆ ಇದಕ್ಕಿಂತ ತಾಜಾ ಉದಾಹರಣೆ ಬೇಕಾ? ಕನ್ನಡಿಗರ ಹೆಮ್ಮೆಯ ಪ್ರತೀಕ  ಸಾಬೂನು ಕಾರ್ಖಾನೆಯನ್ನು 40% ಕಮೀಷನ್ ಸೋಪಿನಿಂದ ಭರ್ಜರಿಯಾಗಿ ತೊಳೆಯುತ್ತಿರುವ ಬಿಜೆಪಿ ಪಕ್ಷದ ಶಾಸಕರ ಬೆನ್ನು ತಟ್ಟುವಿರೋ ಅಥವಾ ಪಕ್ಷದಿಂದ ಹೊರಗಟ್ಟುವಿರೋ? ಎಂದು ಕುಮಾರಸ್ವಾಮಿ ಅವರು ಅಮಿತ್ ಶಾ ಅವರನ್ನು ಕೇಳಿದ್ದಾರೆ.


ಶಾಸಕರ ಪುತ್ರರತ್ನ ಪಸಂದಾಗಿರಿಸಿದ್ದ ಕಂತೆಗಳು ಯಾರ ಹುಂಡಿಗೆ? ಶಾಸಕರ ಮನೆಯಲ್ಲೇ 6 ಕೋಟಿ ಸಿಕ್ಕರೆ, ಇನ್ನು 40% ಪರ್ಸಂಟ್‌ ಚರಂಡಿಯಲ್ಲಿ ತೆವಳುತ್ತಿರುವ ಸಚಿವರ ಮನೆಗಳಲ್ಲಿ ಇನ್ನೆಷ್ಟು ಸಿಗಬಹುದು? ರಾಮರಾಜ್ಯ ಮಾಡುತ್ತೇವೆಂದು ಹೇಳಿ ಕರ್ನಾಟಕವನ್ನು ʼಕಮೀಷನ್‌ ರಾಜ್ಯʼ ಮಾಡಿದ್ದೀರಿ. ಹೌದಲ್ಲವೇ ಅಮಿತ್ ಶಾ ಅವರೇ? ಎಂದು ಮಾಜಿ ಮುಖ್ಯಮಂತ್ರಿ ಅವರು ಕುಟುಕಿದ್ದಾರೆ.


ಇದನ್ನೂ ಓದಿ- ಲೋಕಾಯುಕ್ತ ಸಂಸ್ಥೆ ಜನರ ಪರವಾಗಿದೆ, ಲಂಚ ಕೇಳಿದ್ರೆ ಮಾಹಿತಿ ನೀಡಿ: ನ್ಯಾ. ಬಿ.ಎಸ್.ಪಾಟೀಲ್


ಮೈಸೂರಿನಲ್ಲಿ ನಿನ್ನೆ ನಾನು ಹೇಳಿದ್ದೆ; ಈ ರೀತಿ ಪರ್ಸಂಟೇಜ್ ವ್ಯವಹಾರ ಮುಂದುವರಿದರೆ ಮುಂದೆ 10 ಪರಪ್ಪನ ಅಗ್ರಹಾರ ಜೈಲುಗಳಾನ್ನಾದರೂ ಕಟ್ಟಿಸಬೇಕಾಗುತ್ತದೆ ಎಂದು. ಕಳೆದ ಮೂರೂವರೆ ವರ್ಷದಿಂದ ಕಮೀಷನ್ ಕೊಚ್ಚೆಯಲ್ಲಿ ಉರುಳಾಡಿದ್ದ ಬಿಜೆಪಿ ಸರಕಾರ, ಈಗ ನೋಟಿನ ಕಂತೆಗಳೊಂದಿಗೆ ಆ ಅಸಹ್ಯದ ಪರಾಕಾಷ್ಠೆಯನ್ನು ದರ್ಶನ ಮಾಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಕಾಂಗ್ರೆಸ್‌ 20%, ಬಿಜೆಪಿ 40%. ಕರ್ನಾಟಕವನ್ನು 'ಕಮೀಷನ್‌ ರಾಜ್ಯ' ಮಾಡಿದ ಪಾಪ ಈ ರಾಷ್ಟ್ರೀಯ ಪಕ್ಷಗಳದ್ದು, ಇಂಥ ಪಾಪದ ದುಡ್ಡಿನಿಂದಲೇ ಚುನಾವಣೆ ನಡೆಸುವ ಕಮೀಷನ್‌ʼಗೇಡಿ ಪಕ್ಷಗಳ ಅಸಲಿ ಮುಖವನ್ನು ಕನ್ನಡಿಗರು ಅರ್ಥ ಮಾಡಿಕೊಳ್ಳಬೇಕು. ಇಲ್ಲವಾದರೆ ಕರ್ನಾಟಕಕ್ಕೆ ʼಕಮೀಷನ್‌ ರಾಜ್ಯʼ ಎಂಬ ಹಣೆಪಟ್ಟಿ ಶಾಶ್ವತವಾಗುವ ಅಪಾಯವಿದೆ ಎಂದು ಕುಮಾರಸ್ವಾಮಿ ಅವರು ಎಚ್ಚರಿಕೆ ನೀಡಿದ್ದಾರೆ.


ಇಂಥ ಪ್ರಕರಣಗಳೆಲ್ಲ ಕೊನೆಗೆ ಏನಾದವು ಎನ್ನುವುದು ಜನರಿಗೆ ಚೆನ್ನಾಗಿ ಗೊತ್ತು. ಸಾಂವಿಧಾನಿಕ ಸಂಸ್ಥೆಗಳನ್ನು ಹೇಗೆಲ್ಲಾ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ, ಅವು ತನಿಖೆ ನಡೆಸುತ್ತಿರುವ ಪ್ರಕರಣಗಳು ಯಾವ ರೀತಿ ಹಳ್ಳ ಹಿಡಿದು ಹೋಗಿವೆ ಎನ್ನುವುದು ಈಗಾಗಲೇ ಜಗಜ್ಜಾಹೀರಾಗಿರುವ ಸತ್ಯ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ- Karnataka Lokayukta : ಲಂಚ ಪಡೆಯುತ್ತಿದ್ದ ಬಿಜೆಪಿ ಶಾಸಕನ ಮಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ!


ಜನತಾ ನ್ಯಾಯಾಲಯದಲ್ಲೇ ಇಂಥ ನಿರ್ಲಜ್ಜ ಪ್ರಕರಣಗಳಿಗೆ ಮುಕ್ತಿ ಕಾಣಿಸಬೇಕು. ಜನರದ್ದೇ ಅಂತಿಮ ತೀರ್ಪು ಹಾಗೂ ಜನರೇ ಪ್ರಜಾಪ್ರಭುತ್ವ ಉಳಿಸಬೇಕು ಎನ್ನುವುದು ನನ್ನ ಅಭಿಪ್ರಾಯ. 2023ಕ್ಕೆ ಆರೂವರೆ ಕೋಟಿ ಕನ್ನಡಿಗರು ನೀಡುವ ಜನಾದೇಶ ಈ ದಿಕ್ಕಿನಲ್ಲೇ ಇರುತ್ತದೆ ಎಂಬ ವಿಶ್ವಾಸ ನನ್ನದು ಎಂದು ತಿಳಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.