ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಮಹೂರ್ತ ಫಿಕ್ಸ್ ಆಗುತ್ತಿದ್ದಂತೆ ರಾಜ್ಯದಲ್ಲಿ ರಾಜಕೀಯ ಚಟುವಟಿಕೆ ರಂಗೇರಿದೆ. ಈ ಮಧ್ಯೆ ಕಾಂಗ್ರೆಸ್ ಜೊತೆ ಮೈತ್ರಿ ಸಾಧ್ಯವೇ ಇಲ್ಲ ಎನ್ನುತ್ತಿದ್ದ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಇದೀಗ ಇದ್ದಕ್ಕಿದ್ದಂತೆ ಕಾಂಗ್ರೆಸ್ ಜೊತೆ ಚುನಾವಣಾ ಪೂರ್ವ ಮೈತ್ರಿಗೆ ಸಿದ್ಧ ಎಂದಿದ್ದಾರೆ. 


COMMERCIAL BREAK
SCROLL TO CONTINUE READING

ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಅನ್ನು ಬೆಂಬಲಿಸಿ ನನ್ನ ಬೆರಳುಗಳನ್ನು ನಾನೇ ಸುಟ್ಟುಕೊಂಡಿದ್ದೇನೆ. ಹಾಗಾಗಿ ಈ ಬಾರಿ ನಮ್ಮ ಪಕ್ಷದ ನೀತಿಗಳು ಮತ್ತು ಸಿದ್ಧಾಂತಗಳೊಂದಿಗೆ ಜನರ ಮುಂದೆ ಹೋಗುತ್ತೇವೆ. ಅಂತಿಮ ತೀರ್ಪು ಮತದಾರರಿಗೆ ಬಿಡುತ್ತೇವೆ. ಕಾಂಗ್ರೆಸ್ ಜೊತೆಯಾಗಲೀ, ಬಿಜೆಪಿ ಜೊತೆಗಾಗಲೀ ಮೈತ್ರಿ ಪ್ರಶ್ನೆಯೇ ಇಲ್ಲ ಎಂದಿದ್ದರು.


ರಾಹುಲ್ ಗಾಂಧಿ ಬಗ್ಗೆ ಹೆಚ್.ಡಿ. ದೇವೇಗೌಡ ವಾಗ್ದಾಳಿ


ಅಷ್ಟೇ ಏಕೆ, ನಿನ್ನೆವರೆಗೂ ರಾಹುಲ್ ಗಾಂಧಿ ಓರ್ವ ಅಪ್ರಭುದ್ಧ, ಸಿದ್ಧರಾಮಯ್ಯ ಹೇಳಿದಂತೆ ರಾಹುಲ್ ಕೇಳುತ್ತಾರೆ, ಕಾಂಗ್ರೆಸ್ ಧರ್ಮದ ವಿಚಾರದಲ್ಲಿ ಹಿಂದುಗಳನ್ನು ಒಡೆಯುವ ಕೆಲಸ ಮಾಡುತ್ತಿದೆ, ಕೇವಲ ಕೋಮುವಾದದ ಬಗ್ಗೆ ಚರ್ಚಿಸುತ್ತದೆ, ದೇಶ ಒಡೆಯುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ, ಕಾಂಗ್ರೆಸ್ ಭ್ರಷ್ಟ ಸರ್ಕಾರ, ಎಂದೆಲ್ಲಾ ಹೇಳುತ್ತಿದ್ದ ಹೆಚ್.ಡಿ.ದೇವೇಗೌಡರು ಇದೀಗ ಕಾಂಗ್ರೆಸ್ ಜೊತೆ ಚುನಾವಣಾ ಪೂರ್ವ ಮೈತ್ರಿಗೆ ಇಂಗಿತ ವ್ಯಕ್ತಪಡಿಸಿರುವುದು ಹಲವು ಪ್ರಶ್ನೆಗಳನ್ನು ಮೂಡಿಸಿದೆ. 


ಕಾಂಗ್ರೆಸ್ ಜೊತೆ ಚುನಾವಣಾ ಪೂರ್ವ ಮೈತ್ರಿಗೆ ಜೆಡಿಎಸ್ ಸಿದ್ಧ : ಹೆಚ್.ಡಿ.ದೇವೇಗೌಡ


ಒಂದೆಡೆ ಅಪ್ಪ ಕಾಂಗ್ರೆಸ್ ಎಂದರೆ ಮಗ ಹೆಚ್.ಡಿ.ಕುಮಾರಸ್ವಾಮಿ ಅವರ ಮಾತುಗಳು ಬಿಜೆಪಿ ಕಡೆ ಒಲವು ತೋರಿದಂತೆ ಕಾಣುತ್ತದೆ. ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದಲ್ಲಿ 128 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಷ್ಟೆಲ್ಲಾ ಗೊಂದಲಗಳ ನಡುವೆ, ಜೆಡಿಎಸ್'ನ 7 ಬಂಡಾಯ ಶಾಸಕರು ಇದೀಗ ಕಾಂಗ್ರೆಸ್ ಸೇರಿರುವುದರಿಂದ ಜೆಡಿಎಸ್'ಗೆ ಚುನಾವಣಾ ಭೀತಿ ಹೆಚ್ಚಾಗಿದೆಯೇ? ಅಥವಾ ಕಾಂಗ್ರೆಸ್ ಜೊತೆ ಚುನಾವಣಾ ಪೂರ್ವ ಮೈತ್ರಿ ಹೊಂದಿ ಸರ್ಕಾರ ರಚಿಸುವ ಮುಂದಾಲೋಚನೆಯೇ? ಎಂಬೆಲ್ಲಾ ಪ್ರಶ್ನೆಗಳು ರಾಜಕೀಯ ಪಾಳಯದಲ್ಲಿ ಮೂಡಿವೆ. 


ಈಗಾಗಲೇ ಜೆಡಿಎಸ್ ಬಿಎಸ್ಪಿ ಜೊತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದೆ. ಆದರೆ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಚುನಾವಣಾ ಪೂರ್ವ ಮೈತ್ರಿ ಇಂಗಿತದ ಸಂಬಂಧ ಕಾಂಗ್ರೆಸ್ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹಾಗಾಗಿ ಕಾಂಗ್ರೆಸ್ ಪಕ್ಷ ಜೆಡಿಎಸ್ ಇಂಗಿತಕ್ಕೆ ಸಾಥ್ ಕೊಟ್ಟು ಸಹಕರಿಸುವುದೇ, ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.