ಕೇವಲ ಶಾಸಕನಾಗಲು ನಾನೇಕೆ ಚುನಾವಣೆಗೆ ಸ್ಪರ್ಧಿಸಲಿ: ಅಂಬರೀಶ್ ಪ್ರಶ್ನೆ
ಪಕ್ಷದ ನಾಯಕರಲ್ಲಿ ಟಿಕೆಟ್`ಗಾಗಿ ಗೋಗರೆಯುತ್ತಿರುವವರು ಒಂದೆಡೆಯಾದರೆ, ಬಿ ಫಾರಂ ಮನೆಗೇ ಬಂದರೂ ಅದನ್ನು ಸ್ವೀಕರಿಸದೆ ಅಂಬರೀಶ್ ಷರತ್ತು ವಿಧಿಸಿದ್ದಾರೆ.
ಬೆಂಗಳೂರು: ಸಿನಿಮಾ ರಂಗದಲ್ಲಿ ರೆಬಲ್ ಸ್ಟಾರ್ ಆಗಿರುವ ಅಂಬರೀಶ್ ರಾಜಕೀಯ ರಂಗದಲ್ಲೂ ರೆಬಲ್ ಸ್ಟಾರ್ ಎನಿಸಿಕೊಂಡಿದ್ದಾರೆ. ಪಕ್ಷದ ನಾಯಕರಲ್ಲಿ ಟಿಕೆಟ್'ಗಾಗಿ ಗೋಗರೆಯುತ್ತಿರುವವರು ಒಂದೆಡೆಯಾದರೆ, ಬಿ ಫಾರಂ ಮನೆಗೇ ಬಂದರೂ ಅದನ್ನು ಸ್ವೀಕರಿಸದೆ ಅಂಬರೀಶ್ ಷರತ್ತು ವಿಧಿಸಿದ್ದಾರೆ.
ಪಕ್ಷದ ಹಿರಿಯ ನಾಯಕ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರೇ ಸ್ವತಃ ಮನೆಗೆ ತೆರಳಿದರೂ, ಸರಿಯಾಗಿ ಪ್ರತಿಕ್ರಿಯಿಸದ ಅಂಬರೀಶ್, ಕೇವಲ ಶಾಸಕನಾಗಿ ನಾನೇಕೆ ಚುನಾವಣೆಗೆ ಸ್ಪರ್ಧಿಸಲಿ. ನನ್ನನ್ನು ಕೇವಲ ಶಾಸಕನಾಗಲು ನಾನೇಕೆ ಚುನಾವಣೆಗೆ ಸ್ಪರ್ಧೆ ಮಾಡಲಿ. ನನ್ನನ್ನ ಕೇಳದೇ ಸಚಿವ ಸ್ಥಾನದಿಂದ ತೆಗೆದಿದ್ದೀರಿ. ಬಳಿಕ ನನ್ನನ್ನು ಕ್ಯಾರೆ ಎನ್ನಲಿಲ್ಲ. ಒಂದು ವೇಳೆ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ ನನಗೆ ಏನು ಸ್ಥಾನಮಾನ ಕೊಡ್ತೀರಾ? ಈ ಬಗ್ಗೆ ಮೊದಲೇ ನಿರ್ಧಾರ ಮಾಡಿ ತಿಳಿಸಿ, ಜತೆಗೆ ಉಸ್ತುವಾರಿ ಸಹ ನನಗೆ ನೀಡಬೇಕು ಎಂದು ನಿನ್ನೆ ಮಾತುಕತೆಗೆ ಬಂದಿದ್ದ ಜಾರ್ಜ್ಗೆ ಅಂಬರೀಷ್ ಷರತ್ತು ಹಾಕಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಇಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಹೈಕಮ್ಯಾಂಡ್ ಜೊತೆ ಮಾತುಕತೆ ನಡೆಸಿದ್ದು, ನಾಳೆ ತಾವೇ ಸ್ವತಃ ಅಂಬರೀಶ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ.