ಬೆಂಗಳೂರು : ಸಂಸದ ಹಾಗೂ ಪರಿಶಿಷ್ಟ ಪಂಗಡದ ಮುಖಂಡ ಬಿ.ಶ್ರೀರಾಮುಲು ಅವರನ್ನು ಮುಂಬರುವ ವಿಧಾನಸಭೆ ಚುನಾವಣೆಗೆ ಉಪಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಲು ಬಿಜೆಪಿ ಆಲೋಚಿಸಿದೆ. ಈ ಮೂಲಕ ಇದುವರೆಗೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿದ್ದ ದಲಿತ ಸಮುದಾಯದ ಬೆಂಬಲ ಪಡೆಯಲು ಬಿಜೆಪಿ ತಂತ್ರ ಹೆಣೆದಿದೆ ಎನ್ನಲಾಗಿದೆ. 


COMMERCIAL BREAK
SCROLL TO CONTINUE READING

ರಾಜ್ಯದ 6.5ಕೋಟಿ ಜನಸಂಖ್ಯೆಯಲ್ಲಿ ಶೇ.25ಭಾಗ ದಲಿತ ಸಮುದಾಯದವರಿದ್ದಾರೆ. ಹೀಗಾಗಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ದಲಿತ ಮತಗಳ ಮೇಲೆ ಹೆಚ್ಚು ಗಮನಹರಿಸಿವೆ. ಅಲ್ಲದೆ, ಬಿ.ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸುವುದರಿಂದ ದಲಿತ ಸಮುದಾಯದ ಮತಗಳನ್ನು ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಣೆ ಮಾಡುವುದರಿಂದ ಲಿಂಗಾಯತ ಮತದಾರರನ್ನು ಸೆಳೆಯುವ ಪ್ಲಾನ್ ಮಾಡಿದೆ ಎನ್ನಲಾಗಿದೆ. 


ಅಕ್ರಮ ಗಣಿಗಾರಿಕೆ ಆರೋಪ ಎದುರಿಸುತ್ತಿರುವ ಗಾಲಿ ಜನಾರ್ಧನರೆಡ್ಡಿ ಆಪ್ತರಾಗಿರುವ ಶ್ರೀರಾಮುಲು, ಕರ್ನಾಟಕದಲ್ಲಿ 25ಲಕ್ಷ ಜನಸಂಖ್ಯೆ ಹೊಂದಿರುವ ವಾಲ್ಮೀಕಿ ಸಮುದಾಯದ ನಾಯಕ ಎಂದೇ ಗುರುತಿಸಿಕೊಂಡಿದ್ದಾರೆ. ಈಗಾಗಲೇ ಚುನಾವಣೆಗೆ ಮೊದಲ ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಘೋಷಿಸಿದ್ದು, ಬಿ.ಶ್ರೀರಾಮುಲುಗೆ ಚಿತ್ರದುರ್ಗ ಜಿಲ್ಲೆಯ ಮೊಣಕಾಲ್ಮೂರು ಕ್ಷೇತ್ರದಿಂದ ಟಿಕೆಟ್ ನೀಡಿದೆ. ಅಲ್ಲದೆ, "ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಸಂಸದರಿಗೆ ಟಿಕೇಟ್ ನೀಡುತ್ತಿಲ್ಲ. ಆದರೆ ವಿಶೇಷ ಕಾರಣದಿಂದ ಶ್ರೀರಾಮುಲು ಅವರಿಗೆ ಟಿಕೇಟ್ ನೀಡಲಾಗಿದೆ" ಎಂದು ಬಿ.ಎಸ್.ಯಡಿಯೂರಪ್ಪ ನೀಡಿದ್ದ ಹೇಳಿಕೆ, ಉಪಮುಖ್ಯಮಂತ್ರಿ ಅಭ್ಯರ್ಥಿಯಾಗಿ ಶ್ರೀರಾಮುಲು ಅವರನ್ನು ಬಿಜೆಪಿ ಘೋಷಿಸಲಿದೆ ಎಂಬ ವದಂತಿಗೆ ಮತ್ತಷ್ಟು ಪುಷ್ಟಿ ನೀಡಿದೆ.
 
ಅಷ್ಟೇ ಅಲ್ಲದೆ, "ಪಕ್ಷ ನನಗೆ ಯಾವುದೇ ಅಧಿಕಾರ ನೀಡಿದರೂ ಅದನ್ನು ನಿಭಾಯಿಸಲು ಸಿದ್ಧವಾಗಿದ್ದೇನೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ರಾಜ್ಯಾದ್ಯಂತ ಪ್ರಚಾರ ಮಾಡುತ್ತೇನೆ" ಎಂದು ಶ್ರೀರಾಮುಲು ಹೇಳಿದ್ದಾರೆ.