ಮೂಢನಂಬಿಕೆಗೆ ಸೆಡ್ಡುಹೊಡೆಯುತ್ತಾರಾ ಸಿಎಂ ಕುಮಾರಸ್ವಾಮಿ!
ಮೂಢನಂಬಿಕೆ ವಿರುದ್ಧ ನಿಲ್ಲಲು ಹೊರಟಿರುವ ಸಿಎಂ ಹೆಚ್.ಡಿ. ಕುಮಾರಸ್ವಾಮಿ.
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಯಾವುದೇ ದಿನ, ನಕ್ಷತ್ರ ನೋಡುವವರಲ್ಲ ಎಂಬ ವಿಚಾರ ಎಲ್ಲರಿಗೂ ಗೊತ್ತಿರುವುದೇ. ಆದರೆ ಸಿಎಂ ಹೆಚ್.ಡಿ. ಕುಮಾರಸ್ವಾಮಿ ದಿನ, ನಕ್ಷತ್ರ ನೋಡದೆ ಯಾವ ಶುಭಕಾರ್ಯವನ್ನೂ ಮಾಡುವುದಿಲ್ಲ. ಕುಮಾರಸ್ವಾಮಿಯವರು ಮಾತ್ರವಲ್ಲ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರಿಂದಾದಿಯಾಗಿ ಅವರ ಕುಟುಂಬದಲ್ಲಿ ಎಲ್ಲರೂ ಜ್ಯೋತಿಷ್ಯ, ದಿನ, ಘಳಿಗೆ, ನಕ್ಷತ್ರ ಎಲ್ಲವನ್ನೂ ನಂಬುತ್ತಾರೆ. ಇದೀಗ ಸಿಎಂ ಮೂಢನಂಬಿಕೆಗಳ ವಿರುದ್ಧ ನಿಲ್ಲಲು ಹೊರಟಿದ್ದಾರೆ.
ದೈವ ನಂಬಿಕೆಯಿರಬೇಕು, ಆದರೆ ಮೂಢನಂಬಿಕೆ ಇರಬಾರದು ಎಂದು ಸಾಮಾನ್ಯವಾಗಿ ಕೆಲವರು ಹೇಳುತ್ತಾರೆ. ಅಂತಹವರಲ್ಲಿ ನಮ್ಮ ಹಿಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೂಡಾ ಒಬ್ಬರು. ಅಧಿಕಾರದಲ್ಲಿರುವ ಸಿಎಂ ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದರೆ ಅವಧಿಗೂ ಮುನ್ನವೇ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೂಢನಂಬಿಕೆ ಇತ್ತು. ಮೊದಲೇ ಮೂಢನಂಬಿಕೆಗಳಲ್ಲಿ ನಂಬಿಕೆ ಇಲ್ಲದ ಸಿದ್ದರಾಮಯ್ಯ ಈ ಹಿಂದೆ ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಚಾಮರಾಜನಗರ ಜಿಲ್ಲೆಗೆ ಹಲವು ಬಾರಿ ಭೇಟಿ ನೀಡಿ ಆ ಜಿಲ್ಲೆಗೆ ಭೇಟಿ ನೀಡಿದರೇ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೂಢನಂಬಿಕೆಯನ್ನು ಹುಸಿಗೊಳಿಸಿ ಯಶಸ್ವಿಯಾಗಿ ಐದು ವರ್ಷವನ್ನೂ ಪೂರ್ಣಗೊಳಿಸಿದರು.
ಕೊಡಗಿನ ಕಾವೇರಿ ನದಿ ಉಗಮ ಸ್ಥಳಕ್ಕೆ ಭೇಟಿ ನೀಡಿದರೆ ಸಿಎಂ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮಾತಿದೆ. ಆ ಕಾರಣಕ್ಕಾಗಿಯೇ ಹಿಂದಿನ ಯಾವ ಮುಖ್ಯಮಂತ್ರಿಗಳೂ ತೀರ್ಥೋದ್ಭವದಲ್ಲಿ ಭಾಗವಹಿಸಿಲ್ಲ ಎಂದೂ ಸಹ ಹೇಳಲಾಗುತ್ತದೆ. ಈ ಹಿಂದೆ 1999ರಲ್ಲಿ ಮುಖ್ಯಮಂತ್ರಿಯಾಗಿದ್ದ ಜೆ.ಹೆಚ್. ಪಟೇಲ್ ತಲಕಾವೇರಿ ಉಗಮ ಸ್ಥಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಜ್ಯೋತಿಷಿಯೊಬ್ಬರ ಭವಿಷ್ಯದಂತೆ ಜೆ.ಹೆಚ್. ಪಟೇಲ್ ನಾಲ್ಕು ತಿಂಗಳಲ್ಲಿ ಅಧಿಕಾರ ಕಳೆದುಕೊಂಡಿದ್ದರು.
ಹೀಗಿರುವಾಗ ಜ್ಯೋತಿಷಿಗಳ ಸೂಚನೆಯಿಲ್ಲದೆ ಯಾವ ಕೆಲಸವನ್ನೂ ಮಾಡದ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮೌಢ್ಯವನ್ನು ಬದಿಗೊತ್ತಿ ಇಂದು ತಲಕಾವೇರಿಗೆ ಭೇಟಿ ನೀಡಿ ತೀರ್ಥೋದ್ಭವದಲ್ಲಿ ಪಾಲ್ಗೊಳ್ಳಲಿರುವ ವಿಷಯ ಈಗ ಚರ್ಚೆಗೆ ಗ್ರಾಸವಾಗಿರುವುದರ ಜೊತೆಗೆ, ಮೂಢನಂಬಿಕೆಗೆ ಸಿಎಂ ಕುಮಾರಸ್ವಾಮಿ ಸೆಡ್ಡುಹೊಡೆಯುತ್ತಾರಾ ಎಂಬ ಕುತೂಹಲ ಕೂಡ ಎಲ್ಲರಲ್ಲೂ ಹೆಚ್ಚಾಗಿದೆ.
ಇಂದು ಮಡಿಕೇರಿಗೆ ಭೇಟಿ ನೀಡಲಿರುವ ಸಿಎಂ ಕುಮಾರಸ್ವಾಮಿ, ಮೊದಲಿಗೆ ಪ್ರವಾಹ ಸಂತ್ರಸ್ತರೊಡನೆ ಸಂವಾದ ನಡೆಸಲಿದ್ದು, ಬಳಿಕ ಅಧಿಕಾರಿಗಳ ಸಭೆ ನಡೆಸಿ ಸಂಜೆ ಕಾವೇರಿ ತೀರ್ಥೊದ್ಭವದಲ್ಲಿ ಭಾಗಿಯಾಗಲಿದ್ದಾರೆ.
ದಕ್ಷಿಣ ಭಾರತದ ಪವಿತ್ರ ನದಿಗಳಲ್ಲೊಂದಾದ ಕಾವೇರಿ ತೀರ್ಥೋದ್ಭವದ ಅಮೃತ ಘಳಿಗೆ ತುಲಾ ಸಂಕ್ರಮಣ ಇಂದು ಸಂಜೆ 6:45ಕ್ಕೆ ಕೂಡಿ ಬರುವ ಶುಭ ಗಳಿಗೆಯಲ್ಲಿ ತಲಕಾವೇರಿ ತೀರ್ಥಕುಂಡದಿಂದ ತೀರ್ಥೋದ್ಭವವಾಗಲಿದೆ. ಕಾವೇರಿಯು ತೀರ್ಥರೂಪಿಣಿಯಾಗಿ ತುಲಾ ಸಂಕ್ರಮಣದಂದು ಕಾಣಿಸಿಕೊಳ್ಳುತ್ತಾಳೆ. ಇದನ್ನು ಕಣ್ತುಂಬಿಕೊಳ್ಳುವ ಸಲುವಾಗಿ ನಾಡಿನ ಎಲ್ಲಾ ಭಾಗಗಳಿಂದ ಸಾವಿರಾರು ಭಕ್ತರು ತಲಕಾವೇರಿಗೆ ಆಗಮಿಸಲಿದ್ದಾರೆ.