ಜನರ ಮೇಲೆ ಮಾನಸಿಕ ದೌರ್ಜನ್ಯ ಎಸಗಿದರೆ ರಾಜ್ಯವ್ಯಾಪಿ ಆಂದೋಲನ: ಸಿಎಂಗೆ ಯಡಿಯೂರಪ್ಪ ಎಚ್ಚರಿಕೆ
ಹಳ್ಳಿಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಜನರ ಭಾವನೆಗಳನ್ನು ಹತ್ತಿಕ್ಕಿ ಸಿಎಂ ಗ್ರಾಮ ವಾಸ್ತವ್ಯ ಮಾಡುತ್ತಿರುವುದು ಪ್ರಜಾಪ್ರಭುತ್ವ ವಿರೋಧಿ ಮತ್ತು ಜನ ವಿರೋಧಿ ಕ್ರಮ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಜನರ ಮೇಲೆ ಮಾನಸಿಕ ದೌರ್ಜನ್ಯ ಎಸಗಿದರೆ ರಾಜ್ಯಾದ್ಯಂತ ಆಂದೋಲನ ಹಮ್ಮಿಕೊಳ್ಳುತ್ತೇವೆ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.
ರಾಯಚೂರು ಜಿಲ್ಲೆಯಲ್ಲಿ ಗ್ರಾಮವಾಸ್ತವ್ಯಕ್ಕಾಗಿ ತೆರಳುತ್ತಿದ್ದ ವೇಳೆ ಸಿಎಂ ಬಸ್ ತಡೆದು ಪ್ರತಿಭಟಿಸಿದ ವೈಟಿಪಿಎಸ್ ಕಾರ್ಮಿಕರಿಗೆ "ವೋಟ್ ಮೋದಿಗೆ ಹಾಕ್ತೀರ, ಕೆಲ್ಸಕ್ಕೆ ನಾನ್ ಬೇಕಾ, ಇದು ಕೇಳೋ ರೀತಿನಾ, ಲಾಠಿಚಾರ್ಜ್ ಮಾಡಬೇಕಾ? ಎಂದು ಪ್ರತಿಭಾಟನಾಕಾರರ ವಿರುದ್ಧ ಕಿಡಿ ಕಾರಿದ್ದ ಸಿಎಂ ಕುಮಾರಸ್ವಾಮಿ ವರ್ತನೆಗೆ ಪ್ರತಿಕ್ರಿಯಿಸಿರುವ ಯಡಿಯೂರಪ್ಪ ಅವರು, ಸಿಎಂ ವರ್ತನೆ ಹೀಗೇ ಮುಂದುವರೆದರೆ ಗ್ರಾಮ ವಾಸ್ತವ್ಯಕ್ಕೂ ಅಡ್ಡಿಪಡಿಸಬೇಕಾಗುತ್ತದೆ. ಜನತೆ ಮೋದಿ ಅವರಿಗೆ ಬಿಜೆಪಿಗೆ ಮತ ಹಾಕಿದರು ಎಂಬ ಕಾರಣಕ್ಕೆ ಅವರನ್ನು ಹೀಯಾಳಿಸಿ ಮಾತನಾಡುವುದು ಮುಖ್ಯಮಂತ್ರಿಗಳು ತಮಗೆ ತಾವೇ ಮಾಡಿಕೊಳ್ಳುತ್ತಿರುವ ಅಪಮಾನ ಎಂದು ಬಿ.ಎಸ್.ಯಡಿಯೂರಪ್ಪ ಅವರು ಪತ್ರಿಕಾ ಪ್ರಕಟಣೆಯಲ್ಲಿ ಟೀಕಿಸಿದ್ದಾರೆ.
ಗ್ರಾಮವಾಸ್ತವ್ಯಕ್ಕೂ ಅಡ್ಡಿ!
ಹಳ್ಳಿಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಜನರ ಭಾವನೆಗಳನ್ನು ಹತ್ತಿಕ್ಕಿ ನೀವು ಗ್ರಾಮ ವಾಸ್ತವ್ಯ ಮಾಡುತ್ತಿರುವುದು ಪ್ರಜಾಪ್ರಭುತ್ವ ವಿರೋಧಿ ಮತ್ತು ಜನ ವಿರೋಧಿ ಕ್ರಮ. ಈ ರೀತಿ ದೌರ್ಜನ್ಯದಿಂದ ಕೂಡಿದ ನಿಮ್ಮ ಗ್ರಾಮ ವಾಸ್ತವ್ಯವನ್ನು ಜನ ಸಹಿಸುವುದಿಲ್ಲ. ಇದೇ ರೀತಿ ನೀವು ಜನರ ಮೇಲೆ ಮಾನಸಿಕ ದೌರ್ಜನ್ಯ ಮುಂದುವರಿಸಿದರೆ ನಾವು ಸಹಿಸುವುದಿಲ್ಲ. ಅಷ್ಟೇ ಅಲ್ಲದೇ ನಾವು ರಾಜ್ಯವ್ಯಾಪಿ ಆಂದೋಲನ ಹಮ್ಮಿಕೊಳ್ಳುತ್ತೇವೆ. ಸಮಯ ಬಂದರೆ ನಿಮ್ಮ ಗ್ರಾಮ ವಾಸ್ತವ್ಯವೂ ನಡೆಯದಂತೆ ನೋಡಿಕೊಳ್ಳುತ್ತೇವೆ. ನಿಮ್ಮ ಜನವಿರೋಧಿ ಗ್ರಾಮ ವಾಸ್ತವ್ಯಕ್ಕೆ ನಮ್ಮ ಧಿಕ್ಕಾರ ಎಂದಿದ್ದಾರೆ.
ಸಿಎಂ ಸಂಯಮ ಕಳೆದುಕೊಳ್ಳುತ್ತಿದ್ದಾರೆ
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಈ ರೀತಿ ಸಂಯಮ ಕಳೆದುಕೊಳ್ಳುತ್ತಿರುವುದು ಇದು ಮೊದಲಲ್ಲ. ಜನರೆಂದರೆ ಯಾವಾಗಲೂ ಅವರಿಗೆ ಅಲರ್ಜಿ. ಅದರಲ್ಲೂ ಉತ್ತರ ಕರ್ನಾಟಕದ ಜನತೆ ಕಂಡರೆ ಆಗುವುದಿಲ್ಲ. ಅವರ ಗ್ರಾಮ ವಾಸ್ತವ್ಯ ಬೂಟಾಟಿಕೆ ಎಂಬುದನ್ನು ಮುಖ್ಯಮಂತ್ರಿಯವರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಜನರ ಬಗ್ಗೆ ಇರುವ ಅದರಲ್ಲೂ ರಾಜ್ಯದಲ್ಲಿ ಬಿಜೆಪಿ ಗೆದ್ದ ಕಾರಣ ಸಂಯಮ ಕಳೆದುಕೊಳ್ಳುತ್ತಿರುವುದು ಅವರ ಕೊಳಕು ಮನಸ್ಸನ್ನು ಎತ್ತಿ ತೋರಿಸುತ್ತದೆ ಎಂದು ಟೀಕಿಸಿದ್ದಾರೆ.