ಐಎಂಎ ವಂಚನೆ ಪ್ರಕರಣ: ಆರೋಪಿ ಮನ್ಸೂರ್ ಶರಣಾದರೆ ಪೋಲಿಸರಿಂದ ರಕ್ಷಣೆ- ಸಚಿವ ಜಮೀರ್ ಖಾನ್
ಮನ್ಸೂರ್ ಖಾನ್ ಕೂಡಲೇ ಪೊಲೀಸರಿಗೆ ಶರಣಾಗಿ ಎಲ್ಲ ಮಾಹಿತಿ ನೀಡಿದರೆ ಸೂಕ್ತ ರಕ್ಷಣೆ ಒದಗಿಸುವುದಾಗಿ ವಕ್ಫ್ ಮತ್ತು ಅಲ್ಪಸಂಖ್ಯಾತ ಸಚಿವ ಜಮೀರ್ ಅಹ್ಮದ್ ಖಾನ್ ಒತ್ತಾಯಿಸಿದ್ದಾರೆ.
ಬೆಂಗಳೂರು: ಐಎಂಎ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ಕೂಡಲೇ ಪೊಲೀಸರಿಗೆ ಶರಣಾಗಿ ಎಲ್ಲ ಮಾಹಿತಿ ನೀಡಿದರೆ ಸೂಕ್ತ ರಕ್ಷಣೆ ಒದಗಿಸುವುದಾಗಿ ವಕ್ಫ್ ಮತ್ತು ಅಲ್ಪಸಂಖ್ಯಾತ ಸಚಿವ ಜಮೀರ್ ಅಹ್ಮದ್ ಖಾನ್ ಒತ್ತಾಯಿಸಿದ್ದಾರೆ.
ಐಎಂಎ ಮಾಲೀಕ ಮನ್ಸೂರ್ ಖಾನ್ ವಿಡಿಯೋ ಬಿಡುಗಡೆ ಹಿನ್ನೆಲೆಯಲ್ಲಿ ವಿಕಾಸಸೌಧದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಹಿಂದೆಯೇ ಮಾಧ್ಯಮಗಳ ಮೂಲಕ ಮನ್ಸೂರ್ ಖಾನ್ ಗೆ ಹೇಳಿದ್ದೆ. ಈ ಪ್ರಕರಣದಲ್ಲಿ ಯಾವ ಯಾವ ರಾಜಕಾರಣಿಗಳು ಭಾಗಿಯಾಗಿದ್ದಾರೆ ಎಂಬ ಪಟ್ಟಿ ಕೊಡಿ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಧೈರ್ಯವಾಗಿ ಬಂದು ಸತ್ಯ ಹೇಳಿ ಎಂದಿದ್ದೆ ಎಂದು ಜಮೀರ್ ಖಾನ್ ತಿಳಿಸಿದರು.
ಭಾನುವಾರ ವೀಡಿಯೋವೊಂದನ್ನು ಬಿಡುಗಡೆ ಮಾಡಿದ್ದ ಐಎಂಎ ಮಾಲೀಕ ಮನ್ಸೂರ್ ಖಾನ್, ನಾನು ಭಾರತಕ್ಕೆ ಬಂದು ಹೂಡಿಕೆದಾರರ ಹಣ ಹಿಂದಿರುಗಿಸಲು ಸಿದ್ಧನಿದ್ದೇನೆ. ಹಾಗೆಯೇ ಕಾನೂನು ಕ್ರಮಕ್ಕೆ ಒಳಪಡಲೂ ಸಿದ್ಧನಿದ್ದೇನೆ. ಸಚಿವ ಜಮೀರ್ ಅಹಮದ್ ಅವರು ವಾಪಸ್ ಬಾ. ನಿನ್ನ ನೆರವಿಗೆ ನಾವಿದ್ದೇವೆ ಎಂದು ಹೇಳಿದ್ದನ್ನು ನೋಡಿದೆ. ಆದರೆ, ಅವರಿಂದ ನನಗೆ ಸಹಾಯ ಮಾಡಲು ಸಾಧ್ಯವೇ ಇಲ್ಲ ಎನ್ನುವುದು ನನಗೆ ಗೊತ್ತಿದೆ. ಪ್ರಕರಣವನ್ನು ಸಿಬಿಐಗೆ ವಹಿಸಿದರೆ ನಾನೂ ಎಲ್ಲಾ ದಾಖಲೆ, ವಿವರಗಳನ್ನು ಬ್ಲ್ಯಾಕ್ ಆಂಡ್ ವೈಟ್ ಆಗಿ ಬಿಚ್ಚಿಡಲು ಸಿದ್ಧನಿದ್ದೇನೆ'' ಎಂದು ಹೇಳಿದ್ದರು.