`ರಾಜಕೀಯ ನಿವೃತ್ತಿ` ಘೋಷಿಸುವರೇ ಎಸ್.ಟಿ. ಸೋಮಶೇಖರ್!
ಕಾಂಗ್ರೆಸ್ ವಿರುದ್ಧ ಗುಡುಗಿದ ಎಸ್.ಟಿ. ಸೋಮಶೇಖರ್.
ಬೆಂಗಳೂರು: ಈ ರಾಜಕೀಯ ಚದುರಂಗದಾಟದಿಂದ ಬೇಸತ್ತಿದ್ದೇನೆ. ಇಂತಹ ರಾಜಕೀಯದಲ್ಲಿ ಕೆಲಸ ಮಾಡುವುದಕ್ಕಿಂತ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದು ಒಳ್ಳೆಯದು ಎಂದು ಯೋಚಿಸುತ್ತಿದ್ದೇನೆ ಎಂದು ರಾಜೀನಾಮೆ ನೀಡಿದ ಬಳಿಕ ಅನರ್ಹಗೊಂಡಿರುವ ಕಾಂಗ್ರೆಸ್ ಶಾಸಕ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.
ಖಾಸಗಿ ಸುದ್ದಿವಾಹಿಯೊಂದಿಗೆ ಮಾತನಾಡಿದ ಎಸ್.ಟಿ. ಸೋಮಶೇಖರ್, ಇಂತಹ ರಾಜಕೀಯದಲ್ಲಿ ಇರುವುದಕ್ಕಿಂತ ನಿವೃತ್ತಿ ಘೋಷಿಸುವುದು ಒಳ್ಳೆಯದೆಂದು ತೀರ್ಮಾನಿಸಿದ್ದೇನೆ. ಸದ್ಯದಲ್ಲಿಯೇ ಕ್ಷೇತ್ರದ ಜನತೆಯೊಂದಿಗೆ ಸಮಾಲೋಚನೆ ನಡೆಸಿ ರಾಜಕೀಯ ನಿವೃತ್ತಿ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.
ನಿನ್ನೆ ತಡರಾತ್ರಿಯಷ್ಟೇ ಮುಂಬೈನಿಂದ ಬೆಂಗಳೂರಿಗೆ ಹಿಂದಿರುಗಿದ ಎಸ್.ಟಿ. ಸೋಮಶೇಖರ್, ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದರು. ನಾವು ಅತೃಪ್ತರಾಗಿ ರಾಜೀನಾಮೆ ನೀಡಿದ್ದು ಯಾಕೆ ಎಂಬ ಬಗ್ಗೆ ಕ್ಷೇತ್ರದ ಜನತೆಗೆ ತಿಳಿಯಬೇಕಿದೆ. ಕೆಲವೇ ದಿನಗಳಲ್ಲಿ ಈ ಬಗ್ಗೆ ಚರ್ಚಿಸಿ ನನ್ನ ರಾಜಕೀಯ ನಿವೃತ್ತಿ ಘೋಷಣೆ ಮಾಡುವ ತೀರ್ಮಾನವನ್ನು ಘೋಷಿಸಲಾಗುತ್ತದೆ ಎಂದರು.
ನಿಮ್ಮ ರಾಜೀನಾಮೆಗೆ ಸಿದ್ದರಾಮಯ್ಯ ಅವರೇ ಕಾರಣ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾವು ರಾಜೀನಾಮೆ ನೀಡಿ ಹೋಗಲು ಯಾರೂ ಕಾರಣರಲ್ಲ. ಕಳೆದ ಒಂದು ವರ್ಷದಿಂದ ಯಾವುದೇ ಅಭಿವೃದ್ಧಿಯಾಗಿರಲಿಲ್ಲ. ಹೆಚ್.ಡಿ. ಕುಮಾರಸ್ವಾಮಿಯವರು ನಮಗೆ ಸಹಕಾರ ನೀಡುತ್ತಿರಲಿಲ್ಲ. ನಮ್ಮ ಸಮಸ್ಯೆ ಕುರಿತು ಹಲವು ಬಾರಿ ಸಿಎಲ್‌ಪಿ ಸಭೆಯಲ್ಲಿ ಚರ್ಚಿಸಿದ್ದೇವೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಬಗ್ಗೆ ನಮ್ಮ ಸಮಸ್ಯೆ ಬಗ್ಗೆ ಹೇಳಿ ಕೊಂಡಿದ್ದೇವೆ. ಅದಾಗ್ಯೂ, ಲೋಕಸಭೆ ಚುನಾವಣೆಯಾಗಲಿ ಮುಂದೆ ಬೇರೆಯಾಗೋಣ ಎಂದಿದ್ದರು. ನಂತರವೂ ಯಾವುದೇ ಪ್ರಯೋಜನವಾಗಿಲ್ಲ. ಡಿ.ಕೆ. ಶಿವಕುಮಾರ್ ಅವರು ಈಗ ಮಾತನಾಡುತ್ತಾರೆ, ಮುಂಬೈಗೆ ಬರುತ್ತಾರೆ ಆದರೆ ನಾವು ಅವರ ಬಳಿ ಹೋದ ಸಂದರ್ಭದಲ್ಲಿ ನಮ್ಮ ಕಷ್ಟಕ್ಕೆ ಯಾರೂ ಸ್ಪಂದಿಸಲಿಲ್ಲ ಎಂದು ಹೇಳಿದರು.
ಈ ವೇಳೆ ಲೋಕಸಭಾ ಚುನಾವಣೆ ಬಗ್ಗೆಯೂ ಪ್ರಸ್ತಾಪಿಸಿದ ಎಸ್.ಟಿ. ಸೋಮಶೇಖರ್, ಪಕ್ಷದಲ್ಲಿ ಬೇರೆ ನಾಯಕರಿದ್ದರೂ ಕೂಡ ದೇವೇಗೌಡರ ಮಾತಿಗೆ ಕಟ್ಟುಬಿದ್ದು ಬೆಂಗಳೂರು ಉತ್ತರ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಕೃಷ್ಣಭೈರೇಗೌಡ ಅವರನ್ನು ಕಣಕ್ಕಿಳಿಸಲಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ, ವಿಧಾನಸಭೆಯಲ್ಲಿ ಅತೃಪ್ತ ಶಾಸಕರ ವಿರುದ್ಧ ಕೃಷ್ಣಭೈರೇಗೌಡ ಅವರು ಮಾಡಿದ ಆರೋಪಗಳ ಹಿನ್ನೆಲೆಯಲ್ಲಿ ಅವರ ವಿರುದ್ಧ ವಾಗ್ಧಾಳಿ ನಡೆಸಿದರು.
ಮೈತ್ರಿ ಸರ್ಕಾರದ ಯಾವ ಯಾವ ನಾಯಕರು ನಮ್ಮ ಬಗ್ಗೆ ಏನೆಲ್ಲಾ ಮಾತನಾಡಿದ್ದಾರೆ ಎಂಬುದು ನನಗೆ ಗೊತ್ತಿದೆ. ಅದಕ್ಕೆಲ್ಲ ಉತ್ತರಿಸುವ ಅಗತ್ಯವಿದೆ. ಹೀಗಾಗಿ ಎರಡು ಮೂರು ದಿನದಲ್ಲಿಯೇ ಅನರ್ಹಗೊಂಡ ಎಲ್ಲಾ ಶಾಸಕರು ಚರ್ಚಿಸಿ, ಸುದ್ದಿಗೋಷ್ಠಿ ನಡೆಸಿ, ಅದಕ್ಕೆ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುತ್ತೇವೆ ಎಂದರು.