ಬೆಂಗಳೂರು: ಈ ರಾಜ್ಯದ ಜನರ ನೋವಿಗೆ ಗೌರವ ಕೊಡುವುದು ನನ್ನ ಆದ್ಯ ಕರ್ತವ್ಯ. ಸಂವಿಧಾನಕ್ಕೆ ಅಪಚಾರ ಮಾಡಲ್ಲ. ಯಾರ ಖುಷಿಗೂ ಅಥವಾ ಅಸಂತೋಷಕ್ಕೆ ಕುಣಿಯಲು ನಾನು ನೃತ್ಯಗಾರ್ತಿ ಅಲ್ಲ. ಯಾರ ಒತ್ತಡಕ್ಕೂ ಮಣಿಯಲ್ಲ ಎಂದು ವಿಧಾನಸಭಾ ಸಭಾಪತಿ ರಮೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಇಂದು ಬೆಳಿಗ್ಗೆ ವಿಧಾನಸೌಧದ ಬಳಿ ವಿಧಾನಸಭಾ ಅಧಿವೇಶನ ಆರಂಭವಾಗುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್, ನಿನ್ನೆ ಶಾಸಕರು ಕ್ರಮಬದ್ಧವಾಗಿ ರಾಜೀನಾಮೆ ನೀಡಿದ್ದಾರೆ. ಇಂದು ಮೂವರು ಶಾಸಕರಿಗೆ ವೈಯಕ್ತಿಕ ಭೇಟಿಗೆ ಸಮಯ ನೀಡಿದ್ದೇನೆ. ಇಂದು ಯಾವುದೇ ಹೊಸ ಬೆಳವಣಿಗೆಗಳು ನಡೆದಿಲ್ಲ ಎಂದು ತಿಳಿಸಿದರು.


ಅತೃಪ್ತ ಶಾಸಕರ ಅರ್ಜಿ ಬಗ್ಗೆ ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಲಿದೆ. ಈ ದೇಶ ಉಳಿಯಬೇಕು, ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಉಳಿಯಬೇಕು ಎಂದರು.


ಈ ಸಂದರ್ಭದಲ್ಲಿ ಸ್ಪೀಕರ್ ತೇಜೋವಧೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಗಾಂಧಿಯನ್ನೇ ಕೊಂದ ದೇಶ. ಇನ್ನು ರಮೇಶ್​ಕುಮಾರ್​ನನ್ನು ಬಿಡುತ್ತಾರಾ. ಆದರೆ, ನಿಜವಾಗಿಯೂ ಗಾಂಧಿ ಸತ್ತಿದ್ದಾರಾ, ಅವರ ಮೌಲ್ಯಗಳು ಸತ್ತಿವೆಯಾ. ಗಾಂಧಿ ದೈಹಿಕವಾಗಿ ಇಲ್ಲದಿರಬಹುದು. ಆದರೆ, ಅವರ ಮೌಲ್ಯ, ಆದರ್ಶಗಳು ಯಾವಾಗಲೂ ಇರುತ್ತದೆ. ನಾವು ಆ ದಾರಿಯಲ್ಲೇ ನಡೆದುಕೊಂಡು ಬಂದವರು. ಬಹಳ ಹಿಂದಿನಿಂದಲೂ ನನ್ನ ತೇಜೋವಧೆಗೆ ಪ್ರಯತ್ನಗಳು ನಡೆಯುತ್ತಿವೆ, ಮಾಡಲಿ. ಅವರಿಗೆಲ್ಲ ಒಳ್ಳೇದಾಗಲಿ ಎಂದು ಅವರು ತಮ್ಮ ಅಸಮಾಧಾನವನ್ನು  ಹೊರಹಾಕಿದರು.