ಬೆಂಗಳೂರು: ಕಳೆದ ವರ್ಷ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಾದ ಏರಿಕೆಯನ್ನು ಗಮನಿಸಿ, ರಾಜ್ಯ ಸರ್ಕಾರ ತೈಲಗಳ ಮೇಲಿನ ತೆರಿಗೆಯನ್ನು ಕಡಿತಗೊಳಿಸಿತ್ತು. ಆದರೀಗ ಮತ್ತೆ ತೈಲಗಳ ಮೇಲಿನ ತೆರಿಗೆಯನ್ನು ಏರಿಕೆ ಮಾಡಿ ಶುಕ್ರವಾರ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ರಾಜ್ಯದ ಜನರಿಗೆ ಕೆಎಸ್​ಆರ್​ಟಿಸಿ ಬಸ್ ಪ್ರಯಾಣ ಶುಲ್ಕ ಹೆಚ್ಚಳವಾಗುವ ಆತಂಕ ಎದುರಾಗಿದೆ.


COMMERCIAL BREAK
SCROLL TO CONTINUE READING

ಈಗಾಗಲೇ ಸಾರಿಗೆ ಇಲಾಖೆ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯಾಪ್ತಿಯ ಬಸ್​ಗಳ ಪ್ರಯಾಣ ದರವನ್ನು ಶೇ.14ರಿಂದ 18ರವರೆಗೆ ಹೆಚ್ಚಿಸುವ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಿದೆ. ಪ್ರಯಾಣದರ ಹೆಚ್ಚಳಕ್ಕೆ ಸಮ್ಮತಿ ನೀಡುವಂತೆ ಹಣಕಾಸು ಇಲಾಖೆ ಸಿಎಂ ಕುಮಾರಸ್ವಾಮಿಗೆ ಸಲಹೆ ನೀಡಿದೆ ಎನ್ನಲಾಗಿದೆ.


ಈ ಹಿಂದೆ ಕೆಎಸ್​ಆರ್​ಟಿಸಿ, ಬಿಎಂಟಿಸಿ, ವಾಯುವ್ಯ ಮತ್ತು ಈಶಾನ್ಯ ಸಾರಿಗೆಗಳು ಮೂರು ತಿಂಗಳ ಹಿಂದೆಯೇ ಶೇ. 18 ರಷ್ಟು ಪ್ರಯಾಣ ದರ ಹೆಚ್ಚಿಸುವಂತೆ ಪ್ರಸ್ತಾವ ಸಲ್ಲಿಸಿದ್ದವು. ನಂತರ ದರ ಏರಿಕೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಸಿಎಂ ಕುಮಾರಸ್ವಾಮಿ ಕೂಡ ಸಾರಿಗೆ ಇಲಾಖೆ ಪ್ರಸ್ತಾಪ ತಿರಸ್ಕರಿಸಿದ್ದರು.  


ಇದೀಗ ಕಳೆದ 10 ವಾರಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ದರ ಇಳಿಕೆಯಾಗುತ್ತಿದ್ದು ಸರ್ಕಾರದ ಆದಾಯಕ್ಕೆ ಹೊಡೆತ ಬೀಳುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತೆರಿಗೆ ಏರಿಕೆ ಮಾಡಿದ್ದು, ಪೆಟ್ರೋಲ್ ಮೇಲಿನ ತೆರಿಗೆಯನ್ನು ಶೇ.32 ಕ್ಕೆ ಏರಿಕೆ ಮಾಡಲಾಗಿದ್ದು, ಡೀಸೆಲ್​ ಮೇಲಿನ ತೆರಿಗೆಯನ್ನು ಶೇ.21ಕ್ಕೆ ಏರಿಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಜನತೆಗೆ ಮತ್ತೆ ಪ್ರಯಾಣ ದರ ಹೆಚ್ಚಳದ ಬಿಸಿ ತಟ್ಟಲಿದೆಯೇ ಎಂಬ ಆತಂಕ ಎದುರಾಗಿದೆ.