ಬೆಂಗಳೂರು (ಮೇ 24):- ರಾಜ್ಯದಲ್ಲಿ ಡ್ರಗ್ಸ್ ದಂಧೆಯನ್ನು ಸಂಪೂರ್ಣವಾಗಿ ಮಟ್ಟಹಾಕುವ ನಿಟ್ಟಿನಲ್ಲಿ ಇಲಾಖೆಯು ಕಟ್ಟುನಿಟ್ಟಿನ‌ ಕ್ರಮ ತೆಗೆದುಕೊಂಡಿದ್ದು, ಬೆಂಗಳೂರಿಗೆ ಅಪಕೀರ್ತಿ ತರುವಂತಹ ಮಾತುಗಳನ್ನಾಡುವುದು ಸರಿಯಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.


COMMERCIAL BREAK
SCROLL TO CONTINUE READING

ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾದಕದ್ರವ್ಯ ಮುಕ್ತ ರಾಜ್ಯ ನಿರ್ಮಾಣದ ನಿಟ್ಟಿನಲ್ಲಿ ನಾನು ಮತ್ತು ಮುಖ್ಯಮಂತ್ರಿಯವರು ಘೋಷಿಸಿದ್ದೇವೆ.‌ ರಾಜ್ಯದಲ್ಲಿ ಸಾವಿರಾರು ಕೆಜಿ ಗಾಂಜಾ, ಎಂಡಿಎಂಎ, ಸಿಂಥೆಟಿಕ್ ಡ್ರಗ್ಸ್ ಜಪ್ತಿ ಮಾಡಲಾಗಿದೆ. ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ವಿದೇಶಿಗರನ್ನು ಗಡಿಪಾರು ಮಾಡಲಾಗಿದ್ದು, ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ ಎಂದರು‌.


ಇಷ್ಟೆಲ್ಲ ಕೆಲಸ ಮಾಡಿದಾಗಿಯೂ ಉಡ್ತಾ ಬೆಂಗಳೂರು ಅಂತ  ಮಾತನಾಡುವುದು ಸರಿಯಲ್ಲ. ಇನ್ನೂ ಹೆಚ್ಚು ನಿಯಂತ್ರಿಸುವ ನಿಟ್ಟಿನಲ್ಲಿ ಸಲಹೆಗಳನ್ನು ನೀಡಲಿ. ಆದರೆ, ಬೆಂಗಳೂರಿಗೆ ಅಪಕೀರ್ತಿ ತರುವಂತಹ ಮಾತನ್ನು ಆಡಬಾರದು ಎಂದು ಎಚ್ಚರಿಸಿದರು.


ಕಾನೂನು ಸುವ್ಯವಸ್ಥೆ ಕಾಪಾಡಲು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಕಳೆದ ಒಂದು ವರ್ಷದಿಂದ ಯಾವುದೇ ರೀತಿಯ ಕಾನೂನು ಸುವ್ಯವಸ್ಥೆಯ ಸಮಸ್ಯೆಯಾಗದಂತೆ ನೋಡಿಕೊಂಡಿದ್ದೇವೆ ಎಂದು ತಿಳಿಸಿದರು


ಬಿಜೆಪಿಯವರ ಕಾಲದಲ್ಲಿ ಮರ್ಡರ್‌ಗಳಾಗಿರಲಿಲ್ಲವೇ? ಹಾಗಂತ ಮರ್ಡರ್‌ ಆಗಬೇಕು ಅಂತ ನಾವು ಆಪೇಕ್ಷೆ ಪಡುವುದಿಲ್ಲ. ಅರೋಪಿಗಳನ್ನು ಹಿಡಿದು ಕಾನೂನಿನ ಚೌಕಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುವಂತ‌ ಕೆಲಸವನ್ನು ತಕ್ಷಣವೇ ಮಾಡಿದ್ದೇವೆ. ಶೇ 95ರಷ್ಟು ಕೊಲೆ ಪ್ರಕರಣಗಳ ಆರೋಪಿಗಳನ್ನು 24 ಗಂಟೆಗಳಲ್ಲಿಯೇ ಹಿಡಿದಿದ್ದೇವೆ. ಸುಮ್ಮನೇ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂಬುದು ಸರಿಯಲ್ಲ ಎಂದರು.


ರಾಜ್ಯದಲ್ಲಿ ಗುಂಪು-ಗಲಭೆಗಳಾಗಿಲ್ಲ. ರಾಜ್ಯದಲ್ಲಿ ನಡೆದ ಎರಡು ಹಂತದ ಲೋಕಸಭಾ ಚುನಾವಣೆಯನ್ನು ಶಾಂತಿಯುವಾಗಿ ನಡೆಸಲಾಗಿದೆ. ಗಣೇಶ ಹಬ್ಬದ ಸಂದರ್ಭದಲ್ಲಿ ಪ್ರತಿವರ್ಷ ಗಲಾಟೆಗಳಾಗುತ್ತಿದ್ದವು. ಈ ವರ್ಷ ಗಲಾಟೆಯಾಗದಂತೆ ಶಾಂತಿಯುತವಾಗಿ ಗಣೇಶ್ ಉತ್ಸವ ಆಚರಣೆ ನಡೆದಿದೆ. ಎಲ್ಲಿ ಕಾನೂನು ಸುವ್ಯವಸ್ಥೆಯ ಸಮಸ್ಯೆಯಾಗಿದೆ ಎಂಬುದನ್ನು ಹೇಳಲಿ. ಸುಮ್ಮನೆ ಇವರು ಹೇಳಿಬಿಟ್ಟರೆ ಕೇಳಲಾಗುತ್ತದೆಯೇ? ಎಂದು ಪ್ರಶ್ನಿಸಿದರು.


ಜನ ನಮಗೆ ಆಶೀರ್ವಾದ ಮಾಡಿದ್ದಾರೆ. ಸಮರ್ಥವಾದ ನಾಯಕತ್ವ ಇದೆ. ಒಳ್ಳೆ ಆಡಳಿತ ನೀಡುವುದಾಗಿ ಜನರಿಗೆ ಪ್ರಾಮಿಸ್ ಮಾಡಿದ್ದೇವೆ. ಅದರಂತೆ ನಡೆದುಕೊಳ್ಳುತ್ತೇವೆ ಎಂದರು.


ಎಚ್.ಡಿ.ದೇವೆಗೌಡರು ಪ್ರಜ್ವಲ್‌ಗೆ ಪತ್ರ ಬರೆದಿದ್ದಾರೆ ಎಂಬುದು ಗೊತ್ತಾಗಿದೆ. ಅದು ಅವರ ಕುಟುಂಬದ ಆಂತರಿಕ ವಿಚಾರ ಇರಬಹುದು.‌ ಪ್ರಜ್ವಲ್ ರೇವಣ್ಣ ಸಾರ್ವಜನಿಕ ದೃಷ್ಟಿಯಿಂದ ದೇವೇಗೌಡ ಅವರ ಪತ್ರಕ್ಕೆ ಗೌರವ ಕೊಟ್ಟು ದೇಶಕ್ಕೆ ವಾಪಸ್ ಆಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


ಇದನ್ನೂ ಓದಿ: Liquor Ban in Karnataka: ಜೂನ್ 1 ರಿಂದ ಐದು ದಿನ ಮದ್ಯ ಮಾರಾಟ ಬಂದ್‌ !


ಟ್ವೀಟ್‌ಗಳಿಗೆಲ್ಲ ಉತ್ತರಿಸಲಾಗದು-
ಪ್ರಜ್ವಲ್ ಎಲ್ಲಿದ್ದಾನೆ ಎಂಬುದು ಡಿ.ಕೆ.ಶಿವಕುಮಾರ್ ಅವರಿಗೆ ಗೊತ್ತು ಎಂದು ಜೆಡಿಎಸ್ ಟ್ವೀಟ್ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಟ್ವೀಟ್‌ಗಳಿಗೆ ಉತ್ತರ ಕೊಡುವುದೇ ನನ್ನ ಕೆಲಸವಲ್ಲ. ಕಾನೂನಿನ ಪ್ರಕಾರ ಏನು‌ ಕ್ರಮ ತೆಗೆದುಕೊಳ್ಳಬೇಕು ಅದನ್ನು ಮಾಡುತ್ತೇವೆ. ಅದರಲ್ಲಿ ತಪ್ಪಿದ್ದರೆ ಹೇಳಲಿ. ಎಸ್‌ಐಟಿಯ ದೋಷಗಳಿದ್ದರೆ ಅದನ್ನು ಹೇಳಲಿ. ಅದನ್ನು ಸರಿಪಡಿಸುವ ಕೆಲಸ‌ ಮಾಡುತ್ತೇನೆ. ಸುಮ್ಮನೆ ಅವರೊಂದು ಟ್ವೀಟ್, ಇವರೊಂದು ಟ್ವೀಟ್ ಮಾಡುವುದಕ್ಕೆಲ್ಲ‌ ಉತ್ತರ ಕೊಡಲು ಆಗುವುದಿಲ್ಲ ಎಂದು ಹೇಳಿದರು.


ಪ್ರಜ್ವಲ್ ರೇವಣ್ಣ ಅವರ ಪಾಸ್‌ಪೋರ್ಟ್ ರದ್ದುಗೊಳಿಸುವ ಕುರಿತು ನಾವು ಬರೆದ ಪತ್ರಕ್ಕೆ ಕೇಂದ್ರ ಸರ್ಕಾರದಿಂದ ಈವರೆಗೂ ಪ್ರತಿಕ್ರಿಯೆ ಬಂದಿಲ್ಲ. ಪಾಸ್‌ಪೋರ್ಟ್ ರದ್ದುಗೊಳಿಸಲು ಪ್ರಕ್ರಿಯೆ ಆರಂಭಿಸಿದ್ದಾರೆ ಎಂಬ ಮಾಹಿತಿ ಬಂದಿದೆ ಎಂದರು. 


ಫೋನ್ ಟ್ಯಾಪಿಂಗ್ ಆರೋಪದ ಕುರಿತು ಪ್ರತಿಕ್ರಿಯಿಸಿ, ಸುಮ್ಮನೆ ಅವರು, ಇವರು ಬಾಯಿಗೆ ಬಂದಂತೆ ಮಾತನಾಡುವುದಲ್ಲ. ಫೋನ್ ಟ್ಯಾಪಿಂಗ್ ಯಾರು ಮಾಡುತ್ತಿದ್ದಾರೆ? ಯಾರದ್ದು ಮಾಡಿದ್ದಾರೆ ಎಂಬುದು ಗೊತ್ತಿದ್ದರೆ ಹೇಳಲಿ. ಬಾಯಿಗೆ ಬಂದಿದ್ದು ಹೇಳಿದರೆ ಯಾರು ಕೇಳುತ್ತಾರೆ? ದೇಶದಲ್ಲಿ, ರಾಜ್ಯದಲ್ಲಿ ಕಾನೂನು ಇದೆ. ಕಾನೂನು ಹೊರತುಪಡಿಸಿ ನಾವ್ಯಾರು ಏನು ಮಾಡಲಾಗುವುದಿಲ್ಲ ಎಂದು ಹೇಳಿದರು.


ಇದನ್ನೂ ಓದಿ: ಯುವ ಸಾಹಿತಿ ಸವಿರಾಜ್ ಆನಂದೂರಗೆ ವಿಭಾ ಸಾಹಿತ್ಯ ಪುರಸ್ಕಾರ


ಚೀನಾದಿಂದ ಮಷಿನ್‌ ತಂದಿದ್ದಾರೆ,
ಯಾರು ಚೀನಾದಿಂದ ತಂದಿದ್ದಾರೆ? ಯಾವ ಬ್ರ್ಯಾಂಡ್ ತಂದಿದ್ದಾರೆ? ಎಲ್ಲಿಟ್ಟಿದ್ದಾರೆ? ಯಾರದ್ದು ಟ್ಯಾಪಿಂಗ್ ಮಾಡುತ್ತಿದ್ದಾರೆ ಎಂಬುದು ಅವರಿಗೆ ಗೊತ್ತಿದೆಯಲ್ಲವೇ? ಅದನ್ನು ಪೊಲೀಸರಿಗೆ ಹೇಳಿದರೆ ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.


ಸುತ್ತೋಲೆ ಹೊರಡಿಸುವ ಅಗತ್ಯತೆ ಏನಿದೆ. ಪ್ರತಿನಿತ್ಯ ಯಾರು ಸುತ್ತೋಲೆ ಹೊರಡಿಸಲಾಗುವುದಿಲ್ಲ. ಯಾರೋ ಹೇಳಿದ್ದನ್ನು ನೀವು ಕೇಳಬೇಡಿ. ಕಳ್ಳತನಕ್ಕೊಂದು, ಕೊಲೆಗೊಂದು, ಯಾರೋ ಟ್ರಾಫಿಕ್‌ ಅಫೆನ್ಸ್‌ ಮಾಡಿದ್ರು ಅಂತ ಸುತ್ತೋಲೆ ಹೊರಡಿಸಲು ಆಗುತ್ತಾ?. ಕಾನೂನಿನ ಪ್ರಕಾರ‌ ಕೆಲಸ ಮಾಡುವಂತೆ ಪೊಲೀಸರಿಗೆ ತಿಳಿಸಿದ್ದೇವೆ. ಅವರು ತರಬೇತಿ ಪಡೆದಿದ್ದಾರೆ. ಅದರಂತೆ‌ ಕೆಲಸ‌ ಮಾಡದಿದ್ದರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.