ಮಂಡ್ಯ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಯದುವೀರ್ ಸ್ಪರ್ಧೆ?
ಜೆಡಿಎಸ್ ಭದ್ರಕೋಟೆ ಎನಿಸಿಕೊಂಡಿರುವ ಮಂಡ್ಯದಲ್ಲಿ ಪ್ರಬಲ ಪೈಪೋಟಿ ನೀಡಲು ಬಿಜೆಪಿ ಚಿಂತನೆ ನಡೆಸಿದ್ದು, ಪೂರ್ವಸಿದ್ಧತೆ ನಡೆಸಿದೆ ಎನ್ನಲಾಗಿದೆ.
ಮಂಡ್ಯ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಕಣಕ್ಕಿಳಿಸಲು ಬಿಜೆಪಿ ಪ್ಲಾನ್ ಮಾಡಿದೆ ಎನ್ನಲಾಗಿದೆ.
ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಯದುವೀರ್ ಅವರನ್ನು ಕಣಕ್ಕಿಳಿಸಲು ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿರುವ ಬಿಜೆಪಿ, ಜೆಡಿಎಸ್ ಭದ್ರಕೋಟೆ ಎನಿಸಿಕೊಂಡಿರುವ ಮಂಡ್ಯದಲ್ಲಿ ಪ್ರಬಲ ಪೈಪೋಟಿ ನೀಡಲು ಬಿಜೆಪಿ ಚಿಂತನೆ ನಡೆಸಿದ್ದು, ಪೂರ್ವಸಿದ್ಧತೆ ನಡೆಸಿದೆ ಎನ್ನಲಾಗಿದೆ.
ಈ ಹಿಂದೆ ಯದುವೀರ್ ಅವರನ್ನು ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಮೈಸೂರು ಅರಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಆಗಲೇ ಯದುವಿರ್ ರಾಜಕೀಯಕ್ಕೆ ಬರುವ ಬಗ್ಗೆ ಸಾಕಷ್ಟು ಊಹಾಪೋಹಗಳು ಎದ್ದಿದ್ದವು. ಆದರೆ ಆ ವದಂತಿ ಈಗ ನಿಜವಾಗಲಿದೆ ಎನ್ನಲಾಗುತ್ತಿದೆ. ಆರಂಭದಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ಆಲೋಚನೆಯಲ್ಲಿದ್ದ ಬಿಜೆಪಿ, ಮೈಸೂರು-ಕೊಡಗು ಕ್ಷೇತ್ರದ ಹಾಲಿ ಸಂಸದ ಪ್ರತಾಪ್ ಸಿಂಹರಿಗೆ ತೊಂದರೆಯಾಗದಿರಲಿ ಎನ್ನುವ ಕಾರಣಕ್ಕಾಗಿ ಯದುವೀರ್ ಅವರನ್ನು ಮಂಡ್ಯದಲ್ಲಿ ಕಣಕ್ಕಿಳಿಸಿ, ಜೆಡಿಎಸ್ ಭದ್ರಕೋಟೆಯನ್ನು ವಶಪಡಿಸಿಕೊಳ್ಳಲು ಬಿಜೆಪಿ ಪ್ಲಾನ್ ಮಾಡಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.