ಯಡಿಯೂರಪ್ಪನವ್ರು ಪಾಪ, ಒಮ್ಮೆಯೂ ಜನಾದೇಶದಿಂದ ಸಿಎಂ ಆಗಲೇ ಇಲ್ಲ: ಸಿದ್ದರಾಮಯ್ಯ
ಸಿಎಂ ಯಡಿಯೂರಪ್ಪ ಇಂದು ಮಂಡಿಸುತ್ತಿರುವ ವಿಶ್ವಾಸಮತವನ್ನು ವಿರೋಧಿಸುತ್ತೇನೆ. ಅವರು ಜನಾದೇಶವಿಲ್ಲದೆ ಸಿಎಂ ಆಗಿದ್ದಾರೆ. ಇದು ಪ್ರಜಾಪ್ರಭುತ್ವ ವಿರೋಧಿ ಎಂದು ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು: ರಾಜ್ಯದಲ್ಲಿ ಇದೀಗ ಅಸ್ತಿತ್ವಕ್ಕೆ ಬಂದಿರುವ ಬಿಜೆಪಿ ಸರ್ಕಾರಕ್ಕೆ ಜನಾದೇಶವೇ ಇಲ್ಲ. ಪಾಪ, ಯಡಿಯೂರಪ್ಪನವ್ರು ಒಂದು ಬಾರಿಯೂ ಜನಾದೇಶದಿಂದ ಸಿಎಂ ಆಗಲೇ ಇಲ್ಲ ಎಂದು ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ವಿಧಾನಸಭೆಯಲ್ಲಿಂದು ಮುಖ್ಯಮಂತ್ರಿ ಯಡಿಯೂರಪ್ಪ ವಿಶ್ವಾಸಮತಯಾಚನೆಗೂ ಮುನ್ನ ಸದನದಲ್ಲಿ ಭಾಷಣ ಮಾಡಿದ ಸಿದ್ದರಾಮಯ್ಯ ಅವರು, ಸಿಎಂ ಯಡಿಯೂರಪ್ಪ ಇಂದು ಮಂಡಿಸುತ್ತಿರುವ ವಿಶ್ವಾಸಮತವನ್ನು ವಿರೋಧಿಸುತ್ತೇನೆ. ಅವರು ಜನಾದೇಶವಿಲ್ಲದೆ ಸಿಎಂ ಆಗಿದ್ದಾರೆ. ಇದು ಪ್ರಜಾಪ್ರಭುತ್ವ ವಿರೋಧಿ. ಆದರೂ, ಮುಖ್ಯಮಂತ್ರಿಯಾಗಿ ಒಳ್ಳೆಯ ಕೆಲಸ ಮಾಡುತ್ತೇನೆ, ದ್ವೇಷದ ರಾಜಕಾರಣ ಮಾಡುವುದಿಲ್ಲ ಅಂತ ಹೇಳಿದ್ದಾರೆ. ಅದನ್ನು ನಾನು ಸ್ವಾಗತಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.
ಇದೇ ವೇಳೆ, ನರೇಂದ್ರ ಮೋದಿ ಅವರು ರೈತರಿಗೆ ವಾರ್ಷಿಕ 6 ರೂ. ಕೊಡುವುದಾಗಿ ಹೇಳಿದ್ದಾರೆ. ಅದಕ್ಕೆ ಇನ್ನೂ 4 ಸಾವಿರ ಸೇರಿಸಿ ಕೊಡುವುದಾಗಿ ನೀವು ಹೇಳಿದ್ದೀರಿ. ಆದರೆ ರೈತರಿಗೆ ಅನುಕೂಲವಾಗುವ ರೈತ ಬೆಳಕು ಎನ್ನುವ ಯೋಜನೆಯನ್ನು ನಾವು ಈಗಾಗಲೇ ಜಾರಿಗೆ ತರಲಾಗಿದೆ. ನೇಕಾರರ ಸಾಲ ಸಹ ಮನ್ನಾ ಮಾಡಿದ್ದೇವೆ. ಈಗ ಮತ್ತೆ ನಮ್ಮ ಯೋಜನೆಯನ್ನೇ ಘೋಷಿಸಿರುವುದಕ್ಕೆ ಯಡಿಯೂರಪ್ಪ ಅವರಿಗೆ ಅಭಿನಂದನೆಗಳು ಎಂದು ಸಿದ್ದರಾಮಯ್ಯ ಹೇಳಿದರು.
ಸಮ್ಮಿಶ್ರ ಸರ್ಕಾರದಲ್ಲಿ ಕಾಮನ್ ಮಿನಿಮಮ್ ಪ್ರೋಗ್ರಾಮ್ ಅನ್ನು ಪ್ರಾಮಾಣಿಕವಾಗಿ ಜಾರಿಗೆ ತರುವ ಪ್ರಯತ್ನ ಮಾಡಿದ್ದೇವೆ. ಜನರು ಮೆಚ್ಚುವ ರೀತಿಯಲ್ಲಿ 14 ತಿಂಗಳು ಕೆಲಸ ಮಾಡಿದ್ದೇವೆ ಎಂದು ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಹೇಳಿದರು.