ಬೆಂಗಳೂರು: ರಾಜ್ಯದಲ್ಲಿ 10 ಪರ್ಸೆಂಟ್, 8 ಪರ್ಸೆಂಟ್ ಅಂತ ಹೇಳಿ ಪರ್ಸೆಂಟೇಜ್ ವ್ಯವಸ್ಥೆ ಆರಂಭಿಸಿದ್ದೇ ಬಿ.ಎಸ್.ಯಡಿಯೂರಪ್ಪ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ಅನಾರೋಗ್ಯದಿಂದ ನಗರದ ಅಪೋಲೋ ಆಸ್ಪತ್ರೆಗೆ ದಾಖಲಾಗಿರುವ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಗುರುವಾರ ಭೇಟಿ ಮಾಡಿ, ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ರಾಜ್ಯದಲ್ಲಿ ಪರ್ಸೆಂಟೇಜ್ ಸಿಸ್ಟಂ ತಂದವರೇ ಯಡಿಯೂರಪ್ಪ. ಈ ಹಿಂದೆ ಕಾಂಗ್ರೆಸ್ ಸರ್ಕಾರ ಸುದೀರ್ಘವಾಗಿ ಆಡಳಿತ ನಡೆಸಿದಾಗಲೂ ಯಡಿಯೂರಪ್ಪನವರಿಗೆ ಬರದ ಈ ಆಲೋಚನೆ, ತಾವು(ಬಿಜೆಪಿ) ಅಧಿಕಾರಕ್ಕೆ ಬಂದ ಕೂಡಲೇ ರಾಜ್ಯದಲ್ಲಿ ಪರ್ಸೆಂಟೇಜ್ ಸಿಸ್ಟಂ ಜಾರಿಗೆ ತಂದರು. ಯಡಿಯೂರಪ್ಪ ಪರ್ಸೆಂಟೇಜ್ ಸಿಸ್ಟಂ ಜನಕ ಎಂದು ಕಿಡಿ ಕಾರಿದರು.


ರಾಜಕೀಯದಲ್ಲಿ, ವಯಸ್ಸಿನಲ್ಲಿ ಮತ್ತು ಅನುಭವದಲ್ಲಿ ನನಗಿಂತ ಹಿರಿಯರಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಹಾಗು ಮಾಜಿ ಸಿಎಂ ಬಿ.ಎಸ್.ಯಡಿಯುರಪ್ಪ ಅವರು, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾದ ನಂತರ ಅವರ ಪದಬಳಕೆಯಲ್ಲಿ ಹಿಡಿತ ಸಾಧಿಸಿದರೆ ಒಳ್ಳೆಯದು. ಇಲ್ಲವಾದರೆ 2008ರಲ್ಲಿ ಹುಬ್ಬಳ್ಳಿ ಅವರು ಮಾತಿನ ಹಿಡಿತ ಕಳೆದುಕೊಂಡು 'ಅಪ್ಪ ಮಕ್ಕಳನ್ನು ಮುಗಿಸುವುದೇ ನನ್ನ ಗುರು, ಅವರನ್ನು ಜೈಲಿಗೆ ಕಳುಹಿಸುವುದೇ ನನ್ನ ಉದ್ದೇಶ' ಎಂದು ಹೇಳಿದ್ದರು. ಕಡೆಗೆ ಅವರೇ ಜೈಲಿಗೆ ಹೋದರು. ಇಂದು ಕೂಡ ಯಡಿಯೂರಪ್ಪ 'ಅಪ್ಪ-ಮಕ್ಕಳು ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೆ' ಎಂಬ ಹೇಳಿಕೆ ನೀಡಿದ್ದಾರೆ. ಆದರೆ ಅದು ಯಾವ ರೀತಿಯಲ್ಲಿ ಎಂಬುದನ್ನು ಬಹಿರಂಗಪಡಿಸಲಿ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.


ಅಂದು ನನ್ನನ್ನು ಜೈಲಿಗೆ ಕಳುಹಿಸುವುದಾಗಿ ಹೇಳಿಕೆ ನೀಡಿ ಅವರು ಜೈಲಿಗೆ ಹೋದರು. ನಿನ್ನೆ ಡಿ.ಕೆ.ಶಿವಕುಮಾರ್ ಅವರನ್ನು ಜೈಲಿಗೆ ಕಳುಹಿಸುವುದಾಗಿ ಹೇಳಿದ್ದಾರೆ. ಈ ರೀತಿಯ ಹೇಳಿಕೆಗಳು ಸಲ್ಲದು. ವಯಸ್ಸಿಗೆ ತಕ್ಕಂತೆ ಸಾರ್ವಜನಿಕವಾಗಿ ಮಾತನಾಡುವುದನ್ನು ಕಲಿಯಿರಿ. ರಾಜ್ಯದ ಜನ ನಿಮ್ಮನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಏನೇನೋ ಹೇಳಿಕೆ ನೀಡಿ ಇಕ್ಕಟ್ಟಿಗೆ ಸಿಲುಕಬೇಡಿ ಎಂದು ಬಿ.ಎಸ್.ಯಡಿಯೂರಪ್ಪ ಅವರಿಗೆ ಕಿವಿಮಾತು ಹೇಳಿದರು.