ಸುಪ್ರೀಂ ಕೋರ್ಟಿನಲ್ಲಿ ಇಂದು ಯಡಿಯೂರಪ್ಪ ವಿಡಿಯೋ ಪ್ರಕರಣದ ವಿಚಾರಣೆ
ಸೋಮವಾರ ಕಾಂಗ್ರೆಸ್ ದಿಢೀರನೆ ಸುಪ್ರೀಂ ಕೋರ್ಟ್ ಮೆಟ್ಟಿಲು ಹೇರಿದ್ದರಿಂದ ಇನ್ನೇನೂ ತೀರ್ಪು ಬಂದೇ ಬಿಟ್ಟಿತು ಎಂದುಕೊಂಡಿದ್ದ ಅನರ್ಹರಿಗೆ ಮತ್ತು ತಮ್ಮ ಪಕ್ಷದ ಪಾತ್ರವಿಲ್ಲ ಎಂದು ಬೀಗುತ್ತಿದ್ದ ಬಿಜೆಪಿ ನಾಯಕರಿಗೆ ಹೊಸ ಆತಂಕ ಶುರುವಾಗಿದೆ.
ನವದೆಹಲಿ: ಕರ್ನಾಟಕದ ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಬರಲೆಂದೇ ರಾಜೀನಾಮೆ ನೀಡಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ 17ರನ್ನು ಅನರ್ಹ ಶಾಸಕರ ಭವಿಷ್ಯ ನಿರ್ಧರಿಸುವ ಸುಪ್ರೀಂಕೋರ್ಟ್ ತೀರ್ಪು ಪ್ರಕಟಣೆಗೆ ಕ್ಷಣಗಣನೆ ಆರಂಭವಾಗಿರುವ ನಡುವೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಅನರ್ಹ ಶಾಸಕರ ರಾಜೀನಾಮೆ ನೀಡಿದ್ದ ಆಡಿದ್ದಾರೆನ್ನಲಾದ ಮಾತುಗಳಿರುವ ವಿಡಿಯೋ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಇನ್ನೊಂದೆಡೆ ಯಡಿಯೂರಪ್ಪ ಅವರ ವಿಡಿಯೋ 'ಆಪರೇಷನ್ ಕಮಲ’ಕ್ಕೆ ಇದು ಸಾಕ್ಷಿ ಎಂಬ ವಾದ ಮುಂದಿಟ್ಟುಕೊಂಡು ಕಾಂಗ್ರೆಸ್ ಸುಪ್ರೀಂ ಕೋರ್ಟ್ ಮೆಟ್ಟಿಲು ತುಳಿದಿದ್ದು. ಕಾಂಗ್ರೆಸ್ ಸಲ್ಲಿಸಿರುವ ಹೊಸ ಅರ್ಜಿಯ ವಿಚಾರಣೆ ಇಂದು ನಡೆಯಲಿದೆ.
ಸೋಮವಾರ ಕಾಂಗ್ರೆಸ್ ದಿಢೀರನೆ ಸುಪ್ರೀಂ ಕೋರ್ಟ್ ಮೆಟ್ಟಿಲು ಹೇರಿದ್ದರಿಂದ ಇನ್ನೇನೂ ತೀರ್ಪು ಬಂದೇ ಬಿಟ್ಟಿತು ಎಂದುಕೊಂಡಿದ್ದ ಅನರ್ಹರಿಗೆ ಮತ್ತು ತಮ್ಮ ಪಕ್ಷದ ಪಾತ್ರವಿಲ್ಲ ಎಂದು ಬೀಗುತ್ತಿದ್ದ ಬಿಜೆಪಿ ನಾಯಕರಿಗೆ ಹೊಸ ಆತಂಕ ಶುರುವಾಗಿದೆ. ಯಡಿಯೂರಪ್ಪ ಅವರ ಮಾತುಗಳನ್ನು ಒಳಗೊಂಡ ವಿಡಿಯೋ ದಾಖಲೆಯನ್ನು ಸುಪ್ರೀಂಕೋರ್ಟ್ ಗಮನಕ್ಕೆ ತರುವ ಮೂಲಕ ಅನರ್ಹರ ಪ್ರಕರಣದ ದಿಕ್ಕುದೆಸೆಯನ್ನೇ ಬದಲಿಸಲು ಕಾಂಗ್ರೆಸ್ ಸಜ್ಜಾಗಿದೆ. ಸೋಮವಾರ ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್ ಸುಪ್ರೀಂ ಕೋರ್ಟಿಗೆ ಯಡಿಯೂರಪ್ಪ ಅವರ ವಿಡಿಯೋ ಸಲ್ಲಿಸಿದ್ದಾರೆ.
ತಮ್ಮ ವಿಧಾನಸಭಾ ಸದಸ್ಯತ್ವವನ್ನು ಅನರ್ಹಗೊಳಿಸಿದ್ದ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ (ಈಗ ಮಾಜಿ) ಆದೇಶ ಪ್ರಶ್ನಿಸಿ 17 ಮಂದಿ ಅನರ್ಹ ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಸಂಜೀವ್ ಖನ್ನಾ ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡ ನ್ಯಾಯಪೀಠ ವಿಚಾರಣೆ ನಡೆಸಿ ತೀರ್ಪನ್ನು ಕಾಯ್ದಿರಿಸಿತ್ತು. ಆದರೆ ಸೋಮವಾರ ಈ ನ್ಯಾಯಪೀಠ ಸಕ್ರಿಯವಾಗಿಲ್ಲದ ಕಾರಣ ಬೇರೆ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಎನ್.ವಿ. ರಮಣ ಮುಂದೆ ಕಪಿಲ್ ಸಿಬಲ್, ಯಡಿಯೂರಪ್ಪ ಅವರ ವಿಡಿಯೋ ಸಲ್ಲಿಸಿ ತೀರ್ಪು ಪ್ರಕಟಿಸುವ ಮುನ್ನ ಯಡಿಯೂರಪ್ಪ ಮಾತುಗಳನ್ನು ಪರಿಶೀಲಿಸಿ, ಪರಿಗಣಿಸಿ ಎಂದು ಮನವಿ ಮಾಡಿಕೊಂಡರು.
ಕಪಿಲ್ ಸಿಬಲ್ ಮನವಿಗೆ ಸ್ಪಂದಿಸಿದ ನ್ಯಾಯಮೂರ್ತಿ ಎನ್.ವಿ. ರಮಣ, ನಿಮ್ಮ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಅವರಿಗೆ ತಿಳಿಸುತ್ತೇನೆ. ವಿಡಿಯೋ ಪರಮಾರ್ಶೆ ಮಾಡಲು ಅವರು ಬಯಸಿದರೆ ಮತ್ತೆ ಅನರ್ಹ ಶಾಸಕರ ಮೂಲ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ರಚಿಸುವಂತೆ ಮನವಿ ಮಾಡುತ್ತೇನೆ. ಅವರು ಒಪ್ಪಿಗೆ ನೀಡಿದರೆ ಮಂಗಳವಾರ ವಿಚಾರಣೆ ನಡೆಸುತ್ತೇವೆ ಎಂದು ಹೇಳಿದ್ದರು.
ಮಂಗಳವಾರದ ಸುಪ್ರೀಂ ಕೋರ್ಟ್ ಕಲಾಪ ಪಟ್ಟಿಯಲ್ಲಿ ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಸಂಜೀವ್ ಖನ್ನಾ ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡ ನ್ಯಾಯಪೀಠ ರಚನೆಯಾಗಿದ್ದು ವಿಚಾರಣೆ ನಡೆಸುವುದಾಗಿ ಹೇಳಿದೆ. ಸುಪ್ರೀಂ ಕೋರ್ಟ್ ಈಗ ಕಾಂಗ್ರೆಸ್ನ ಮನವಿಗೆ ಸ್ಪಂದಿಸಿ ಯಡಿಯೂರಪ್ಪ ವಿಡಿಯೋ ಪ್ರಕರಣವನ್ನು ಪರಿಶೀಲಿಸಲು ಮುಂದಾಗಿರುವುದರಿಂದ ಪ್ರಕರಣ ಮತ್ತೊಂದು ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ. ಸಹಜವಾಗಿ ಈ ಬೆಳವಣಿಗೆ ಬಿಜೆಪಿ ಹಾಗೂ ಅನರ್ಹ ಶಾಸಕರಿಗೆ ಕಹಿ ಸುದ್ದಿಯಾಗಿ ಪರಿಣಮಿಸಿದೆ. ಈ ದಿಢೀರ್ ಬೆಳವಣಿಗೆಯಿಂದ ಅನರ್ಹ ಶಾಸಕರ ವಿಷಯದ ತೀರ್ಪು ಹೊರಬೀಳುವುದು ಇನ್ನಷ್ಟು ತಡವಾಗುವ ಸಾಧ್ಯತೆ ಇದೆ.