ಯಲ್ಲಾಪುರ: 'ನಾವು ಅತೃಪ್ತರಲ್ಲ, ಅಸಹಾಯಕ ಶಾಸಕರು'. ಹಾಗಾಗಿಯೇ ಅಸಹಾಯಕರಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆ ಎಂದು ರಾಜೀನಾಮೆ ನೀಡಿರುವ ಶಾಸಕರಲ್ಲಿ ಒಬ್ಬರಾದ ಯಲ್ಲಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಗುರುವಾರ ಬೆಳಿಗ್ಗೆ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾಮ್ ಹೆಬ್ಬಾರ್, ನಮ್ಮ ರಾಜೀನಾಮೆ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ರಾಜೀನಾಮೆ ನೀಡಿ ನಾವು ಸಮಾಧಾನವಾಗಿಲ್ಲ. ಇಂತಹ ನಿರ್ಧಾರ ಕೈಗೊಳ್ಳಬೇಕಾದರೆ ಅದು ಒಂದೆರಡು ದಿನಗಳ ನಿರ್ಧಾರವಲ್ಲ, ಹಲವು ದಿನಗಳಿಂದ ನಮ್ಮ ನೆರವಿಗೆ ಯಾರೂ ಬಾರದ ಹಿನ್ನೆಲೆಯಲ್ಲಿ ರಾಜೀನಾಮೆ ನಿರ್ಧಾರ ಕೈಗೊಂಡೆವು ಎಂದು ಮೈತ್ರಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.


ರಾಜೀನಾಮೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನಮ್ಮ ರಾಜೀನಾಮೆ ನಿಲುವಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಸ್ಪಷ್ಟಪಡಿಸಿದ ಶಿವರಾಮ್ ಹೆಬ್ಬಾರ್, ರಾಜೀನಾಮೆ ಅಂಗೀಕಾರಕ್ಕೆ ನಾವು ಒತ್ತಾಯಿಸುತ್ತಿದ್ದೇವೆ. ವಕೀಲರ ಮೂಲಕ ಸ್ಪೀಕರ್​ ನೋಟಿಸ್​ಗೆ ಉತ್ತರವನ್ನೂ ನೀಡಿದ್ದೇವೆ ಎಂದು ತಿಳಿಸಿದರು.


ಹಣದಾಸೆಗೆ ರಾಜೀನಾಮೆ ನೀಡಿಲ್ಲ:
ನಾವು ಅತೃಪ್ತರಲ್ಲ, ಅಸಹಾಯಕ ಶಾಸಕರು. ಆಕಾರಣಕ್ಕಾಗಿಯೇ ಇಂತಹ ನಿರ್ಣಯ ತೆಗೆದುಕೊಂಡಿದ್ದೇವೆ. ಈ ಘಟನಾವಳಿಗಾಗಿ ಕ್ಷೇತ್ರದ ಮತದಾರರಲ್ಲಿ ಕ್ಷಮೆ ಕೇಳುತ್ತೇನೆ. ಅಸಹಾಯಕರಾಗಿ ರಾಜೀನಾಮೆ ನೀಡಿರುವ ಶಾಸಕರೆಲ್ಲರು ಅನುಭವಿಗಳು. ಎಲ್ಲಾ ಶಾಸಕರು ಆರ್ಥಿಕವಾಗಿ ಸಬಲರಾಗಿದ್ದು ಹಣದಾಸೆಗೆ ರಾಜೀನಾಮೆ ನೀಡಿಲ್ಲ. ನಮ್ಮೆಲ್ಲರಿಗೂ ಸ್ವೀಕರ್ ಅವರ ಮೇಲೆ ಅಪಾರ ನಂಬಿಕೆ ಇದ್ದು, ರಾಜೀನಾಮೆ ಅಂಗೀಕರಿಸುವ ವಿಶ್ವಾಸವಿದೆ. ರಾಜೀನಾಮೆ ಅಂಗೀಕಾರವಾಗುವವರೆಗೆ ಯಾವುದೇ ರಾಜಕೀಯ ನಿರ್ಣಯ ತೆಗೆದುಕೊಳ್ಳುವುದಿಲ್ಲ. ಎಂದು ತಿಳಿಸಿದರು.