ಬೆಂಗಳೂರು: ಪ್ರಸ್ತುತ ಇರುವ ಮೋಟಾರು ವಾಹನ ಕಾಯ್ದೆಯು, ಸರಕು ಸಾಗಾಣಿಕೆ ವಾಹನಗಳ ಮಾಲೀಕರಿಗೆ ಸಂಪೂರ್ಣ ವಿರುದ್ಧವಾಗಿದೆ. ಇದು ಉದ್ದಿಮೆ ಏಳಿಗೆಗೆ ಮಾರಕವಾಗಿದೆ. ಸರ್ಕಾರವು ಉದ್ದಿಮೆಯ ಏಳಿಗೆಗೆ ಯೋಜನೆಗಳನ್ನು ರೂಪಿಸಿ ಯಾವುದೇ ನಿರ್ದಿಷ್ಟ ನಿರ್ದೇಶನಗಳನ್ನು ಕೊಡದೆ ಉದ್ದಿಮೆಯ ಅಭಿವೃದ್ಧಿಯನ್ನು ನಿರ್ಬಂಧಿಸುತ್ತಿದೆʼ ಎಂದು ಫೆಡರೇಶನ್‌ ಆಫ್‌ ಕರ್ನಾಟಕ ಲಾರಿ ಓನರ್ಸ್‌ ಅಸೋಸಿಯೇಷನ್‌ನ ಗೌರವ ಅಧ್ಯಕ್ಷರಾದ ಬಿ.ಚೆನ್ನಾರೆಡ್ಡಿ ಆರೋಪಿಸಿದರು. 


COMMERCIAL BREAK
SCROLL TO CONTINUE READING

ಭಾನುವಾರ ಬಸವನಗುಡಿ ರಸ್ತೆಯಲ್ಲಿರುವ ಮರಾಠಾ ಹಾಸ್ಟೆಲ್‌ ಆವರಣದಲ್ಲಿ ನಡೆದ ದಿ ಬೆಂಗಳೂರು ಲೋಕಲ್‌ ಲಾರಿ ಓನರ್ಸ್‌ ಅಸೋಸಿಯೇಷನ್‌ನ ಸುವರ್ಣ ಮಹೋತ್ಸವ ಆಚರಣೆ ಹಾಗೂ ರಾಜ್ಯ ಲಾರಿ ಮಾಲೀಕರ ಸಮ್ಮೇಳನದ ಸಂದರ್ಭದಲ್ಲಿ ಮಾತನಾಡುತ್ತಾ ಅವರು ಈ ವಿಷಯವನ್ನು ಪ್ರಸ್ತಾಪಿಸಿದರು. 


ಇದನ್ನೂ ಓದಿ: "ಯಾರು ಏನಾದರೂ ಪ್ರತಿಭಟನೆ ಮಾಡಲಿ, ನನ್ನ ಹೆಸರು ಪ್ರಚಾರ ಮಾಡಲಿ"


ʼಅಲ್ಲದೆ ಬದಲಾದ ಕೆಲವು ವ್ಯವಸ್ಥೆಗಳಿಂದಾಗಿ, ಲಾರಿ ಮಾಲೀಕರ ಮೇಲೆ ನಿರಂತರವಾಗಿ ಶೋಷಣೆ ನಡೆಯುತ್ತಿದೆ. ರಸ್ತೆ ಸುರಕ್ಷತೆಯ ಹೆಸರಲ್ಲಿ ಕೇಂದ್ರ ಸರ್ಕಾರ ದಂಡದ ಮೊತ್ತವನ್ನು ಕನಿಷ್ಠ 5000 ರೂಪಾಯಿಯಿಂದ 20000ರೂ ಗೆ ಅವೈಜ್ಞಾನಿಕವಾಗಿ ಏರಿಸಿದೆ. ಈ ಬದಲಾವಣೆಯ ನಂತರ ಪರಿಸ್ಥಿತಿ ಯಾವುದೇ ರೀತಿಯಲ್ಲಿಯೂ ಬದಲಾಗಿಲ್ಲ. ಅಪಘಾತ, ಸಾವು ನೋವುಗಳ ಪ್ರಮಾಣದಲ್ಲೂ ಯಾವುದೇ ನಿಯಂತ್ರಣ ಕಂಡುಬಂದಿಲ್ಲʼ ಎಂದರು. 


ʼಇತ್ತೀಚೆಗೆ ತೆರಿಗೆ ಪಾವತಿಯನ್ನು ಮಾತ್ರ ಗಣಕೀಕೃತ ಮಾಡಿದ್ದು, ಉಳಿದ ಎಲ್ಲಾ ಸೇವೆಗಳನ್ನೂ ಗಣಕೀಕೃತ ಗೊಳಿಸಬೇಕು. ಇದರಿಂದ ಲಾರಿ ಮಾಲೀಕರು ಪದೇ ಪದೇ ಸಾರಿಗೆ ಕಚೇರಿಗಳಿಗೆ ಅಲೆಯುವುದು ತಪ್ಪುತ್ತದೆ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕಿದೆʼ ಎಂದು ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು. 


ಮೋಟಾರ್‌ ವಾಹನ ಕಾಯ್ದೆಯ ಯಾವುದೇ ನಿಯಮಗಳನ್ನು ಉಲ್ಲಂಘಿಸದಂತೆ ನೋಡಿಕೊಳ್ಳುವ ಉದ್ದೇಶದಿಂದ ಗಡಿ ತನಿಖಾ ಠಾಣೆಗಳು ದಿನದ 24ಗಂಟೆ ಹಾಗೂ ವರ್ಷದ 365 ದಿನವೂ ನಿರಂತರವಾಗಿ ಕೆಲಸ ಮಾಡುತ್ತಿವೆ. ಇದು ಸಾಗಾಣಿಕೆ ಉದ್ಯಮಕ್ಕೆ ಹೊರೆಯಾಗಿ ಪರಿಣಮಿಸಿದೆಯೇ ಹೊರತು, ವರ್ಷದಿಂದ ವರ್ಷಕ್ಕೆ ಉಲ್ಲಂಘನೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆʼ ಎಂದು ವಾಸ್ತವವನ್ನು ಬಿಚ್ಚಿಟ್ಟರು. 


ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ವಾಹನಗಳು ಸುವ್ಯವಸ್ಥೆಯಲ್ಲಿವೆಯೋ ಇಲ್ಲವೋ ಎಂದು ನಿರ್ಧಾರ ಮಾಡಬಹುದಾಗಿದೆ. ಸುವ್ಯವಸ್ಥೆಯಲ್ಲಿರುವ ವಾಹನಗಳಿಗೆ ಮಾತ್ರ ಅರ್ಹತಾ ಪತ್ರ, ನವೀಕರಣ ಪತ್ರ ನೀಡಬೇಕು. ಇಲ್ಲವಾದಲ್ಲಿ ನಿರಾಕರಿಸಬೇಕು. ಇಂಥದ್ದೊಂದು ವ್ಯವಸ್ಥೆ ಇರುವಾಗ ಕೇಂದ್ರ ಸರ್ಕಾರ 15 ವರ್ಷ ಹಳೆಯದಾದ ವಾಹನಗಳಿಗೆ ʼಗುಜರಿ ನೀತಿʼ ಜಾರಿ ಮಾಡಿರುವುದು ವಿಷಾದನೀಯ.ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ವಾಹನ ಖರೀದಿಸಿರುವವರಿಗೆ ಇದು ಆರ್ಥಿಕವಾಗಿ ಹೊರೆಯಾಗಲಿದೆ. ಅಷ್ಟೇ ಅಲ್ಲ, ಹಳೆಯ ವಾಹನಗಳ ರಿಪೇರಿ ಉದ್ಯೋಗ, ಬಿಡಿ ಭಾಗಗಳ ವ್ಯಾಪಾರಿ ಅಂಗಡಿಯನ್ನೇ ನಂಬಿಕೊಂಡು ಲಕ್ಷಾಂತರ ಮೆಕಾನಿಕ್ಸ್‌ ಕುಟುಂಬಗಳು ಜೀವನ ಸಾಗಿಸುತ್ತಿವೆ.  ಈಗಷ್ಟೇ ಕೊರೊನಾ ಸಂದಿಗ್ಧ ಪರಿಸ್ಥಿತಿಯಿಂದ ಚೇತರಿಸಿಕೊಳ್ಳುತ್ತಿರುವ ಇಂಥವರಿಗೆ ಗುಜರಿ ನೀತಿ ಗಾಯದ ಮೇಲೆ ಬರೆ ಎಳೆದಂತಾಗಿದೆʼ ಎಂದರು. 


ಇದನ್ನೂ ಓದಿ: Janardhana Reddy: ಡಿ.25ಕ್ಕೆ ಜನಾರ್ದನ ರೆಡ್ಡಿಯಿಂದ ಹೊಸ ಪಕ್ಷ ಘೋಷಣೆ..?


ʼಸಮಸ್ಯೆಗಳು ಬೇಕಾದಷ್ಟಿವೆ. ಅದರ ಮಧ್ಯೆ ಇನ್ನಷ್ಟು ಸಮಸ್ಯೆಯನ್ನು ಹುಟ್ಟುಹಾಕುವ ನೀತಿ ಜಾರಿಯಾಗುತ್ತಿದೆ. ನಮ್ಮಲ್ಲಿ ಸಿಗುತ್ತಿರುವ ಇಂಧನ ಪರಿಸರಕ್ಕೆ ಅನುಗುಣವಾಗಿದೆಯೇ? ʼಭಾರತ್‌ 6ʼ ಇದ್ದರೆ ಮಾತ್ರ ಹೊಸ ವಾಹನಗಳನ್ನು ನೋಂದಣಿ ಮಾಡುತ್ತಿದ್ದಾರೆ. ಆದರೆ ಭಾರತ್‌ 6 ಗೆ ಬೇಕಾದಂತಹ ಇಂಧನ ಪೂರೈಕೆ ನಮ್ಮಲ್ಲಿದೆಯೇ? ಗುಜರಿ ನೀತಿಗನುಗುಣವಾಗಿ ವಾಹನಗಳನ್ನು ಗುಜರಿಗೆ ಹಾಕಿದರೆ ಅಂಥ ವಾಹನಗಳಿಗೆ ನಿರ್ದಿಷ್ಟ ಬೆಲೆ ನಿಗದಿಪಡಿಸಿದ್ದಾರೆಯೇ?ʼ ಎಂದು ಪ್ರಶ್ನಿಸಿದರು. 


ಹಳೆಯ ವಾಹನಗಳಿಗೆ ಗ್ರೀನ್‌ ಟ್ಯಾಕ್ಸ್‌ ಹೇರುವುದು, ಥರ್ಡ್‌ ಪಾರ್ಟಿ ಇನ್ಶುರೆನ್ಸ್‌ ಪ್ರೀಮಿಯಂ ಅನ್ನು ಪ್ರತಿ ವರ್ಷ ಏರಿಸುತ್ತಿರುವುದು ಮುಂತಾದ ವಿಷಯಗಳ ಕುರಿತಂತೆ ಕೇಂದ್ರ ಸರ್ಕಾರ ದೇಶಾದ್ಯಂತ ಇರುವ ವಾಹನ ಮಾಲೀಕರ ಸಂಘಗಳ ಜೊತೆಗೆ ಜಂಟಿಯಾಗಿ ಸಭೆ ಕರೆದು ಅಭಿಪ್ರಾಯಗಳನ್ನು ಹಾಗೂ ಸಲಹೆಗಳನ್ನು ಪಡೆದು ಆ ನಂತರ ಹೊಸ ಬಗೆಯ ನೀತಿ ನಿಯಮಗಳ ನಿರ್ಧಾರ ಕೈಗೊಳ್ಳಬೇಕುʼ ಎಂದು ಸೂಚಿಸಿದರು.


ಕಾರ್ಯಕ್ರಮದಲ್ಲಿ ಸಾರಿಗೆ ಹಾಗೂ ಬುಡಕಟ್ಟು ಕಲ್ಯಾಣ ಇಲಾಖೆ ಸಚಿವರಾದ ಶ್ರೀ.ಬಿ.ಶ್ರೀರಾಮುಲು, ಶಾಸಕರಾದ ಶ್ರೀ.ಉದಯ್‌ ಗರುಡಾಚಾರ್‌, ಶ್ರೀ ಜಮೀರ್‌ ಅಹ್ಮದ್‌ ಖಾನ್‌ ಹಾಗೂ ಸಾರಿಗೆ ಆಯುಕ್ತರಾದ ಶ್ರೀ.ಎಸ್‌.ಎನ್‌. ಸಿದ್ದರಾಮಪ್ಪ ಮುಂತಾದ ಗಣ್ಯರು ಉಪಸ್ಥಿತರಿದ್ದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.