ಬೆಂಗಳೂರು: ಜೀವನದಲ್ಲಿ ಕಷ್ಟ-ಸುಖ ಎರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆದರೂ ಪ್ರತಿಯೊಬ್ಬರೂ ಜೀವನದಲ್ಲಿ ಸದಾ ಬಯಸುವುದು ಸುಖವನ್ನೇ. ಸುಖ ಎಂಬುದು ಪ್ರತಿಯೊಬ್ಬರ ಮನೋಭಾವನೆಗೆ ಸಂಬಂಧಿಸಿರುತ್ತದೆ. ಕೆಲವರು ಸಣ್ಣ-ಪುಟ್ಟ ವಿಷಯಗಳಲ್ಲೂ ಸುಖ-ಸಂತೋಷವನ್ನು ಕಾಣುತ್ತಾರೆ. ಇನ್ನೂ ಕೆಲವರು ಅವರ ಮುಂದೆ ಅಷ್ಟೈಶ್ವರ್ಯವಿದ್ದರೂ ಏನೋ ಒಂದು ಕಡಿಮೆ ಎಂದು ಭಾವಿಸುತ್ತಾ ಆ ಕ್ಷಣದ ಸುಖವನ್ನು ಅನುಭವಿಸುವುದಿಲ್ಲ. ಆದರೆ ಒಂದಂತೂ ಸತ್ಯ ಸುಖ-ದುಃಖ ಯಾವುದೂ ಶಾಶ್ವತವಾದುದಲ್ಲ. ಆದರೆ ಒಂದು ಸ್ಥಳದಲ್ಲಿ ಮಾತ್ರ ಸದಾ ಆನಂದವೇ ತುಂಬಿರುತ್ತದೆ. ಅದು ಭಗವತ್ಸಾಮಿಪ್ಯ, ಎಂದರೆ ದೇವರ ಸನಿಹದಲ್ಲಿರುವುದು. ಇಂತಹ ತಾಣವೇ ವೈಕುಂಠ ಅರ್ಥಾತ್ ಮಹಾವಿಷ್ಣುವಿನ ಲೋಕ ಎಂಬುದು ಪುರಾತನ ನಂಬಿಕೆಯಾಗಿದೆ.


COMMERCIAL BREAK
SCROLL TO CONTINUE READING

ತ್ರಿಮೂರ್ತಿಗಳಲ್ಲಿ ಒಬ್ಬ ವಿಷ್ಣು:
ಬ್ರಹ್ಮ, ವಿಷ್ಣು, ಮಹೇಶ್ವರರನ್ನು ತ್ರಿಮೂರ್ತಿಗಳೆಂದು ಕರೆಯಲಾಗುತ್ತದೆ. ಸೃಷ್ಟಿಕರ್ತ ಬ್ರಹ್ಮನಾದರೆ, ಅದರ ರಕ್ಷಕ ವಿಷ್ಣು, ಕೊನೆಗೆ ಸಂಹಾರ ಮಾಡುವವ ಮಹೇಶ್ವರ. ಬ್ರಹ್ಮ, ವಿಷ್ಣು, ಮಹೇಶ್ವರರ ಮೂರು ಪ್ರಕ್ರಿಯೆಗಳು ಒಂದೇ ತತ್ವದ ಬೇರೆ ಬೇರೆ ಆಯಾಮಗಳಷ್ಟೇ. ಬ್ರಹ್ಮನಿರುವ ತಾಣ 'ಬ್ರಹ್ಮಲೋಕ', ವಿಷ್ಣುವಿನ ನೆಲೆ 'ವೈಕುಂಠ', ಶಿವನಿರುವುದು 'ಕೈಲಾಸ'ದಲ್ಲಿ. ಆದರೆ ಪ್ರತಿಯೊಬ್ಬರಿಗೂ ವಿಷ್ಣುವಿನ ವೈಕುಂಠದಲ್ಲಿ ಸ್ಥಾನ ಪಡೆಯುವ ಹಂಬಲ. ಏಕೆಂದರೆ ಅಲ್ಲಿ ಯಾವುದೇ ಕಷ್ಟ-ಕಾರ್ಪಣ್ಯಗಳಿರುವುದಿಲ್ಲ, ಬರೀ ಸಂತೋಷವೇ ತುಂಬಿರುತ್ತದೆ ಎಂದು ಹೇಳಲಾಗುತ್ತದೆ. 


ವೈಕುಂಠಕ್ಕೂ-ಏಕಾದಶಿಗೂ ನಂಟು:
ವೈಕುಂಠಕ್ಕೂ ಏಕಾದಶಿ (Ekadashi) ಗೂ ನಿಕಟ ನಂಟಿದೆ ಎಂದು ಹೇಳಲಾಗುತ್ತದೆ.  ಏಕಾದಶಿಯ ದಿನ ವಿಷ್ಣುವಿನ ಭಕ್ತರು ಉಪವಾಸ ವ್ರತವನ್ನೂ ಮಾಡುತ್ತಾರೆ. ಇನ್ನು ಏಕಾದಶಿ ಹೆಸರು ಕೇಳಿದರೆ ಯಮದೂತರೂ ಒಂದು ಕ್ಷಣ ಯೋಚಿಸುತ್ತಾರೆ ಎಂದು ಹೇಳಲಾಗುತ್ತದೆ. ಎಂದರೆ ಏಕಾದಶಿಯಂದು ವಿಷ್ಣುವಿನ ಭಕ್ತರನ್ನು ಮರಣವೂ ಮುಟ್ಟಲು ಆಗುವುದಿಲ್ಲ ಎಂದರ್ಥ. ಇದು ವೈಕುಂಠ ಏಕಾದಶಿ ಆಚರಣೆಯ ಹಿನ್ನಲೆಯಾಗಿದೆ. ವೈಕುಂಠ ಏಕಾದಶಿಯಂದು ಶ್ರದ್ಧೆ, ಭಕ್ತಿಯಿಂದ ಉಪವಾಸವಿದ್ದು ವಿಷ್ಟುವನ್ನು ಆರಾಧಿಸುವವರಿಗೆ ಸ್ವರ್ಗಲೋಕದಲ್ಲಿ ಎಂದರೆ ವೈಕುಂಠದಲ್ಲಿ ಜಾಗ ಸಿಗುತ್ತದೆ ಎಂಬುದು ಹಲವರ ನಂಬಿಕೆ.


ಇದನ್ನೂ ಓದಿ: Daily Horoscope: ದಿನಭವಿಷ್ಯ 25-12-2020 Today astrology


ಏಕಾದಶಿಯಂದು ವೈಕುಂಠದ ಬಾಗಿಲು ತೆರೆಯಲಾಗುತ್ತದೆ!
ವೈಕುಂಠ ಏಕಾದಶಿ ಶ್ರದ್ಧೆ, ಭಕ್ತಿಯಿಂದ ವಿಷ್ಣುವನ್ನು ಆರಾಧಿಸುವ ಮಹತ್ವದ ದಿನ. ಒಂದು ತಿಂಗಳಲ್ಲಿ 2 ಏಕಾದಶಿಗಳು ಬರುತ್ತವೆ. ಆದರೆ ಪ್ರತಿ ಏಕಾದಶಿಗಳಿಗಿಂತಲೂ ವೈಕುಂಠ ಏಕಾದಶಿಗೆ ಮಹತ್ವದ ಸ್ಥಾನವಿದೆ. ಚಾಂದ್ರಮಾನ ಪುಷ್ಯಮಾಸ ಶುಕ್ಲಪಕ್ಷದಂದು ಬರುವ ಏಕಾದಶಿ ಬಹಳ ಮಹತ್ವದ್ದಾಗಿದೆ. ಈ ದಿನದಂದು ವೈಕುಂಠ (ವಿಷ್ಣುಲೋಕ, ಸ್ವರ್ಗದ) ಬಾಗಿಲು ತೆರೆದಿರುವ ದಿನ ಎಂಬ ಪ್ರತೀತಿ ಇರುವುದರಿಂದ ಅಂದು ಶ್ರೀನಿವಾಸ, ವೆಂಕಟರಮಣ/ವೆಂಕಟೇಶ್ವರ ದೇವಾಲಯ ದರ್ಶನವು ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ.  


ಇದನ್ನೂ ಓದಿ: ಆಷಾಢ ಏಕಾದಶಿ ಕೇವಲ ಉಪವಾಸದ ಹಬ್ಬವಲ್ಲ, ವಿಷ್ಣು ನಿದ್ರೆಗೆ ಜಾರುವ ದಿನ!


ವೆಂಕಟರಮಣನ ದರ್ಶನಕ್ಕೂ ವೈಕುಂಠಕ್ಕೂ ಇರುವ ಸಂಬಂಧ!
ಇದು ಕಲಿಯುಗ. ಕಲಿಯುಗದ ದೇವರು ವೆಂಕಟೇಶ್ವರ (Venkateshwara) /ವೆಂಕಟರಮಣ. ಇದು ವಿಷ್ಣುವಿನ ಇನ್ನೊಂದು ಅವತಾರವಾಗಿದೆ. ವೈಕುಂಠ ಏಕಾದಶಿ ದಿನದಂದು ವೆಂಕಟೇಶ್ವರ, ಶ್ರೀನಿವಾಸ ಮಂದಿರಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಹೀಗಾಗಿ ವೈಕುಂಠ ಏಕಾದಶಿಯಂದು ವೆಂಕಟರಮಣನ  ದೇವಾಲಯಗಳಲ್ಲಿ ದರ್ಶನ ಪಡೆದರೆ ವೈಕುಂಠಕ್ಕೆ ಹೋಗಿ ಬಂದಷ್ಟು ಪುಣ್ಯ ಸಿಗಲಿದೆ. ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 


ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.