Pune Road Accident: ಕ್ಷಣಾರ್ಧದಲ್ಲಿ ಸಂಭವಿಸಿತು 48 ವಾಹನಗಳ ನಡುವೆ ಭೀಕರ ಅಪಘಾತ: ದೃಶ್ಯ ನೋಡಿ
ಭಾನುವಾರ ಸಂಜೆ ಪುಣೆಯ ಮುಂಬೈ-ಬೆಂಗಳೂರು ಹೆದ್ದಾರಿಯಲ್ಲಿ ಸೇತುವೆಯ ಇಳಿಜಾರಿದ್ದು, ಅಲ್ಲಿ ಟ್ರಕ್ ನಿಯಂತ್ರಣ ತಪ್ಪಿದ ಪರಿಣಾಮ 48 ವಾಹನಗಳು ಜಖಂಗೊಂಡಿವೆ. ಅನುಮಾನಾಸ್ಪದ ಬ್ರೇಕ್ ವೈಫಲ್ಯದಿಂದ ಅಥವಾ ಚಾಲಕನ ನಿಯಂತ್ರಣ ತಪ್ಪಿ ಟ್ರಕ್ ನವಾಲೆ ಸೇತುವೆಯಲ್ಲಿ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಘಟನೆಯಲ್ಲಿ ಸುಮಾರು 50 ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಆದಾಗ್ಯೂ, ಆರರಿಂದ ಎಂಟು ಜನರನ್ನು ಚಿಕಿತ್ಸೆಗಾಗಿ ಎರಡು ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಅದೃಷ್ಟವಶಾತ್ ಅಪಘಾತದಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಅಪಘಾತದ ವೇಳೆ ರಸ್ತೆಗೆ ತೈಲ ಸೋರಿಕೆಯಾಗಿದ್ದು, ಪರಿಣಾಮ ಇತರ ವಾಹನಗಳ ನಡುವೆ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಡಿಕ್ಕಿ ಎಷ್ಟು ಭೀಕರವಾಗಿತ್ತು ಎಂಬುದು ಅಪಘಾತದಲ್ಲಿ ಜಖಂಗೊಂಡ ವಾಹನಗಳ ಸ್ಥಿತಿಯನ್ನು ನೋಡಿದರೆ ಸುಲಭವಾಗಿ ಅರ್ಥವಾಗುತ್ತದೆ. ಅಪಘಾತದಲ್ಲಿ ಹಲವು ವಾಹನಗಳು ಸಂಪೂರ್ಣ ಜಖಂಗೊಂಡಿದ್ದು, ಕೆಲವು ವಾಹನಗಳಿಗೆ ಸಣ್ಣಪುಟ್ಟ ಹಾನಿಯಾಗಿದೆ.
ಅಪಘಾತದಲ್ಲಿ ಕೆಲವು ವಾಹನಗಳ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕೆಲ ಕಾರುಗಳ ಹಿಂಬದಿ ಭಾಗಕ್ಕೆ ಭಾರಿ ಹಾನಿಯಾಗಿದೆ. ಅಪಘಾತದ ನಂತರ, ಕ್ರೇನ್ ಸಹಾಯದಿಂದ ವಾಹನಗಳನ್ನು ರಸ್ತೆಯಿಂದ ತೆಗೆದುಹಾಕಲಾಯಿತು.
ಹಲವು ವಾಹನಗಳಿಗೆ ಟ್ಯಾಂಕರ್ ಡಿಕ್ಕಿಯಾಗಿ ಸಂಭವಿಸಿದ ಅಪಘಾತದ ಬಗ್ಗೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಪೊಲೀಸರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಯಾರದೋ ನಿರ್ಲಕ್ಷ್ಯದಿಂದ ಈ ಅವಘಡ ಸಂಭವಿಸಿದೆಯೇ ಎಂಬ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಇದರೊಂದಿಗೆ ಅಪಘಾತದಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ಆಡಳಿತ ಮಂಡಳಿಗೆ ಸೂಚನೆ ನೀಡಿದ್ದಾರೆ. ಈ ಭಾಗದಲ್ಲಿ ಅಪಘಾತಗಳಿಂದ ಟ್ರಾಫಿಕ್ ಜಾಮ್ ಆಗದಂತೆ ನೋಡಿಕೊಳ್ಳಲು ಸೂಚನೆ ನೀಡಿದ್ದಾರೆ.
ಮಾಹಿತಿ ನೀಡಿದ ಪೊಲೀಸರು, ಸತಾರಾದಿಂದ ಮುಂಬೈ ಕಡೆಗೆ ವೇಗವಾಗಿ ಕಂಟೈನರ್ ಹೋಗುತ್ತಿದ್ದು, ಈ ವೇಳೆ ಇದ್ದಕ್ಕಿದ್ದಂತೆ ಬ್ರೇಕ್ ಫೇಲ್ ಆಗಿದೆ. ಇದಾದ ನಂತರ ಕಂಟೈನರ್ 48 ವಾಹನಗಳಿಗೆ ಹಾನಿಯಾಗಿದೆ. ಅಪಘಾತದ ನಂತರ, ಸತಾರಾದಿಂದ ಮುಂಬೈಗೆ ಹೋಗುವ ರಸ್ತೆಯಲ್ಲಿ 2 ರಿಂದ 3 ಕಿಲೋಮೀಟರ್ ವರೆಗೆ ಟ್ರಾಫಿಕ್ ಜಾಮ್ ಇತ್ತು. ಆದರೆ ಪೊಲೀಸರು ಕೂಡಲೇ ವಾಹನಗಳನ್ನು ತೆರವುಗೊಳಿಸಿದರು.