Actress Amulya: ಚಿಕ್ಕ ವಯಸ್ಸಿನಲ್ಲೇ ನಟಿ ಅಮೂಲ್ಯರ ಅಣ್ಣ ಸಾವನ್ನಪ್ಪಿದ್ದು ಏಕೆ ಗೊತ್ತಾ?
ನಟಿ ಅಮೂಲ್ಯರ ಸಹೋದರ ದೀಪಕ್ ಅರಸ್ ಅವರು ʼಶುಗರ್ ಫ್ಯಾಕ್ಟರಿʼ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಬೇಕು ಅಂತಾ ಆಸೆ ಪಟ್ಟಿದ್ದರು. ಇದಕ್ಕಾಗಿ ತುಂಬಾ ಶ್ರಮವಹಿಸಿ ಆರೋಗ್ಯವನ್ನೂ ಲೆಕ್ಕಿಸದೇ ಕೆಲಸ ಮಾಡಿದ್ದರು. ಈ ವೇಳೆಯೇ ಅವರಿಗೆ ಆರೋಗ್ಯ ಸಮಸ್ಯೆ ಇತ್ತು. ಅವರಿಗೆ ಮೊದಲಿನಿಂದಲೂ ಕಿಡ್ನಿ ಸಮಸ್ಯೆ ಇತ್ತು ಎನ್ನಲಾಗಿದೆ. ಇತ್ತೀಚಿಗೆ ಅವರ ಎರಡೂ ಕಿಡ್ನಿ ವೈಫಲ್ಯವಾಗಿತ್ತು. ಹೀಗಾಗಿ ಅವರಿಗೆ ಡಯಾಲಿಸಿಸ್ ಮಾಡಲಾಗುತ್ತಿತ್ತು ಅಂತಾ ಜಗದೀಶ್ ತಿಳಿಸಿದ್ದಾರೆ.
ದೀಪಕ್ ಅರಸ್‌ರಿಗೆ ಆರೋಗ್ಯವು ಸಂಪೂರ್ಣವಾಗಿ ಕೈಕೊಟ್ಟಿತ್ತು. ಡಯಾಲಿಸಿಸ್ ಸಮಯದಲ್ಲಿ ಬ್ರೈನ್‌ನಲ್ಲಿ ರಕ್ತಸ್ರಾವವಾಗಿ ಅವರು ಕೋಮಾಕ್ಕೆ ಜಾರಿದ್ದರು. ಹೀಗಾಗಿ ಕಳೆದೆರಡು ದಿನಗಳಿಂದ ಅವರು ಕೋಮಾದಲ್ಲಿದ್ದರು. ದುರಾದೃಷ್ಟವಶಾತ್ ಅವರು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ ಅಂತಾ ಜಗದೀಶ್ ಹೇಳಿದ್ದಾರೆ.
ದೀಪಕ್ ಅರಸ್‌ರನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನವು ನಡೆದಿತ್ತು. ಹೀಗಾಗಿ ಕಿಡ್ನಿ ಟ್ರಾನ್ಸ್‌ಫರ್‌ಮೇಶನ್‌ಗಾಗಿ ನೋಂದಣಿ ಸಹ ಮಾಡಲಾಗಿತ್ತು. ಆರೋಗ್ಯದ ಅದೃಷ್ಟ ಕೈ ಹಿಡಿದಿದ್ದರೆ ಒಂದೂವರೆ ವರ್ಷದಲ್ಲಿ ಅವರಿಗೆ ಕಿಡ್ನಿ ಟ್ರಾನ್ಸ್‌ಫರ್‌ಮೇಶನ್ ಆಗುತ್ತಿತ್ತು. ಆದರೆ ಉತ್ತಮ ಸಿನಿಮಾ ಮಾಡಬೇಕು ಅನ್ನೋ ಕನಸು ಕಂಡಿದ್ದ ಅವರು ಸಣ್ಣ ವಯಸ್ಸಿಗೆ ಸಾವನ್ನಪ್ಪಿದ್ದು ನಮಗೆ ದುಃಖ ತರಿಸಿದೆ ಎಂದು ಜಗದೀಶ್ ಹೇಳಿದ್ದಾರೆ.
ಜೀವನ ಹಾಗೂ ಸಿನಿಮಾದ ಬಗ್ಗೆ ದೀಪಕ್ ಅರಸ್ ದೊಡ್ಡ ಕನಸು ಇಟ್ಟುಕೊಂಡಿದ್ದರು. ಆದರೆ ಅವರ ಆಸೆ ನೆರವೇರಲಿಲ್ಲವೆಂದು ತುಂಬಾ ಬೇಜಾರಾಗಿದೆ. ಅಮೂಲ್ಯ ಸೇರಿದಂತೆ ಕುಟುಂಬ ಎಲ್ಲಾ ಸದಸ್ಯರು ಸಹ ಅವರ ಸಾವನ್ನು ಅರಗಿಸಿಕೊಳ್ಳುವುದು ಕಷ್ಟವಾಗುತ್ತಿದೆ. ಅವರೇ ಮನೆಗೆ ಹಿರಿಯ ಮಗ, ಚಿಕ್ಕ ಮಕ್ಕಳಿದ್ದಾರೆ. ಹೀಗಾಗಿ ಕುಟುಂಬದ ಪ್ರತಿಯೊಬ್ಬರು ಸಹ ತುಂಬಾ ನೋವಿನಲ್ಲಿದ್ದಾರೆ' ಎಂದು ಜಗದೀಶ್ ತಿಳಿಸಿದ್ದಾರೆ.
ಚಿತ್ರರಂಗದಲ್ಲಿ ಯಶಸ್ಸು ಕಾಣಲು ಅಮೂಲ್ಯರಿಗೆ ತಾಯಿ ಮತ್ತು ಅಣ್ಣ ದೀಪಕ್ ಅವರೇ ಹೆಚ್ಚು ಸಪೋರ್ಟ್ ಮಾಡಿದ್ದರು. ಅಣ್ಣ-ತಂಗಿಯ ಮಧ್ಯೆ ಉತ್ತಮ ಬಾಂಧವ್ಯ ಇತ್ತು. ಅಮೂಲ್ಯರಿಗೆ ತುಂಬಾ ನೋವಾಗಿದೆ. ಡಯಾಲಿಸಿಸ್ ತೆಗೆದುಕೊಳ್ಳುವಾಗಲೇ ನೋವನ್ನು ಅಮೂಲ್ಯರ ಬಳಿ ದೀಪಕ್ ಹಂಚಿಕೊಳ್ಳುತ್ತಿದ್ದರು. ಈ ಬಗ್ಗೆ ಅಮೂಲ್ಯ ನನ್ನ ಬಳಿ ಹೇಳಿಕೊಂಡು ಕಣ್ಣೀರಿಟ್ಟಿದ್ದರು. ಆದರೆ ದೀಪಕ್ ಸಾವನ್ನು ನಾವ್ಯಾರೂ ಊಹಿಸಿರಲಿಲ್ಲವೆಂದು ಹೇಳಿದ್ದಾರೆ.
ಡಯಾಲಿಸಿಸ್‌ನಲ್ಲೇ ಇದ್ದು ಜೀವನ ನಡೆಸುವವರನ್ನು ನಾವು ನೋಡಿದ್ದೇವೆ. ಹೀಗಾಗಿ ಇನ್ನೂ 10 ವರ್ಷ ಇರುತ್ತಾರೆ ಅಂತಾ ಅಂದುಕೊಂಡಿದ್ದೇವು. ಆದರೆ ದೇವರು ಅವರಿಗೆ ಒಂದು ಅವಕಾಶ ಕೊಡಬೇಕಿತ್ತು. ಆದರೆ ಸಣ್ಣವಯಸ್ಸಿಗೆ ದೀಪಕ್ ನಮ್ಮನ್ನು ಬಿಟ್ಟುಹೋಗಿದ್ದಾರೆ ಅಂತಾ ನಟಿ ಅಮೂಲ್ಯರ ಪತಿ ಜಗದೀಶ್ ಬೇಸರ ವ್ಯಕ್ತಪಡಿಸಿದ್ದಾರೆ.