ಮಧ್ಯಾಹ್ನದ ಲಘು ನಿದ್ರೆಯಿಂದ ಆರೋಗ್ಯಕ್ಕಿದೆ ಅದ್ಭುತ ಪ್ರಯೋಜನ
ಆರೋಗ್ಯ ತಜ್ಞರ ಪ್ರಕಾರ, ಮಧ್ಯಾಹ್ನದ ವೇಳೆ ಲಘು ನಿದ್ರೆ ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿ ಆಗಿದೆ. ಆದರೆ, ನೆನಪಿಡಿ ಈ ನಿದ್ರೆ ಲಘುವಾಗಿ ಎಂದರೆ ಕೇವಲ 10 ರಿಂದ 20 ನಿಮಿಷಗಳು ಮಾತ್ರ ಆಗಿದ್ದರಷ್ಟೇ ಇದು ನಿಮಗೆ ಪ್ರಯೋಜನಕಾರಿ ಆಗಿದೆ. ಅಂತೆಯೇ ಮಧ್ಯಾಹ್ನದ ವೇಳೆ ದೀರ್ಘ ನಿದ್ರೆ, ಗಂಟೆಗಟ್ಟಲೆ ನಿದ್ರೆ ಮಾಡುವುದು ನಿಮಗೆ ಮೊದಲಿಗಿಂತ ಹೆಚ್ಚು ದಣಿವು ಮತ್ತು ಆಲಸ್ಯವನ್ನು ಉಂಟುಮಾಡಬಹುದು. ಮಧ್ಯಾಹ್ನದ ಲಘು ನಿದ್ರೆಯಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಎಂದು ತಿಳಿಯಿರಿ.
ಮಧ್ಯಾಹ್ನದ ವೇಳೆ ಲಘು ನಿದ್ರೆಯು ನಿಮ್ಮ ಕಲಿಕೆಯ ಸಾಮರ್ಥ್ಯವನ್ನು ಸುಧಾರಿಸುತ್ತದೆ. ಚಿಕ್ಕನಿದ್ರೆ ತೆಗೆದುಕೊಳ್ಳುವುದು ನಿಮ್ಮ ಗಮನ ಮತ್ತು ಸ್ಮರಣೆಯನ್ನು ಸುಧಾರಿಸುತ್ತದೆ. ಹಾಗಾಗಿ, ಸಣ್ಣ ನಿದ್ರೆ ಬಳಿಕ ಹೊಸ ಮಾಹಿತಿ ಕಲಿಯುವ ಸಾಮರ್ಥ್ಯ ಮತ್ತಷ್ಟು ಹೆಚ್ಚುತ್ತದೆ ಎಂದು ಹಲವು ಸಂಶೋಧನೆಗಳಿಂದ ತಿಳಿದುಬಂದಿದೆ. ಈ ಚಿಕ್ಕ ನಿದ್ದೆಯು ಜ್ಞಾಪಕಶಕ್ತಿಯ ಮೇಲೂ ಉತ್ತಮ ಪರಿಣಾಮ ಬೀರುತ್ತದೆ
ಮಧ್ಯಾಹ್ನದ ಚಿಕ್ಕನಿದ್ರೆಯು ನಿಮ್ಮ ಆಯಾಸವನ್ನು ನಿವಾರಿಸಬಲ್ಲ ಶಕ್ತಿಯನ್ನು ಹೊಂದಿದೆ. ಮಧ್ಯಾಹ್ನದ ವೇಳೆ 15-20 ನಿಮಿಷಗಳ ಕಾಲ ನಿದ್ರೆ ಮಾಡುವುದರಿಂದ ದೇಹವು ರೀಚಾರ್ಜ್ ಆಗುತ್ತದೆ ಮತ್ತು ಹೆಚ್ಚಿನ ಶಕ್ತಿಯೊಂದಿಗೆ ನಿಮ್ಮ ಕೆಲಸವನ್ನು ಮುಂದುವರಿಸಲು ನಿಮಗೆ ಅನುಮತಿಸುತ್ತದೆ.
ಮಧ್ಯಾಹ್ನದ ನಿದ್ದೆ ರಕ್ತದೊತ್ತಡವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ಹೊಸ ಅಧ್ಯಯನವೊಂದರಿಂದ ತಿಳಿದುಬಂದಿದೆ. ಒಂದು ಚಿಕ್ಕನಿದ್ರೆ ತೆಗೆದುಕೊಳ್ಳುವುದರಿಂದ ರಕ್ತದೊತ್ತಡವನ್ನು ಸರಾಸರಿ 5 ಎಂಎಂ ಎಚ್ಜಿ ಕಡಿಮೆ ಮಾಡಬಹುದು ಎಂದು ಅಧ್ಯಯನಗಳಿಂದ ತಿಳಿದುಬಂದಿದೆ.
ಮಧ್ಯಾಹ್ನದ ಸಮಯದಲ್ಲಿ ತೆಗೆದುಕೊಳ್ಳುವ ಸಣ್ಣ ನಿದ್ರೆಯು ನಿಮ್ಮ ಮನಸ್ಥಿತಿಯನ್ನು ಸುಧಾರಿಸಬಹುದು. ಇದು ನಿಮ್ಮಲ್ಲಿ ಸಕಾರಾತ್ಮಕತೆಯನ್ನು ತರುತ್ತದೆ ಎಂದು ಕೂಡ ಹೇಳಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.