ಒಣ ತ್ವಚೆಯಿಂದ ತಕ್ಷಣ ಪರಿಹಾರ ನೀಡುತ್ತದೆ ಈ ವಸ್ತುಗಳು .!
ಬಾಳೆಹಣ್ಣು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಬಾಳೆಹಣ್ಣಿನ ಫೇಸ್ ಪ್ಯಾಕ್ ಅನ್ನು ಮುಖಕ್ಕೆ ಹಚ್ಚುವುದರಿಂದ ಶುಷ್ಕತೆ ನಿವಾರಣೆಯಾಗುತ್ತದೆ. ಮಾಗಿದ ಬಾಳೆಹಣ್ಣನ್ನು ಚೆನ್ನಾಗಿ ಕಿವುಚಿ ಮುಖಕ್ಕೆ ಹಚ್ಚಿ ಮಸಾಜ್ ಮಾಡಿ. ಮಸಾಜ್ ಮಾಡಿದ ನಂತರ ಫೇಸ್‌ಮಾಸ್ಕ್‌ನಂತೆ ಮುಖದ ಮೇಲೆ ಹಾಗೆಯೇ ಬಿಡಿ. ನಂತರ ಮುಖವನ್ನು ತೊಳೆಯಿರಿ. ಇದು ತ್ವಚೆಯನ್ನು ಪೋಷಿಸುತ್ತದೆ ಮತ್ತು ಶುಷ್ಕತೆ ದೂರವಾಗುತ್ತದೆ.
ಹಾಲಿನ ಕೆನೆ ಅತ್ಯುತ್ತಮವಾದ ಮಾಯಿಶ್ಚರೈಸರ್ ಆಗಿ ಕೆಲಸ ಮಾಡುತ್ತದೆ. ಹಾಲಿನ ಕೆನೆಗೆ ಎಳ್ಳೆಣ್ಣೆ ಬೆರೆಸಿ ಮುಖಕ್ಕೆ ಹಚ್ಚುವುದರಿಂದ ತುಂಬಾ ಪ್ರಯೋಜನಕಾರಿಯಾಗುತ್ತದೆ. ಎಳ್ಳಿನ ಎಣ್ಣೆಯೊಂದಿಗೆ ಕೆನೆಯನ್ನು ಮಿಶ್ರಣ ಮಾಡಿ.. ರಾತ್ರಿ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಬೆಳಿಗ್ಗೆ ಎದ್ದು ಮುಖ ತೊಳೆಯಿರಿ. ನಿರಂತರವಾಗಿ ಹೀಗೆ ಮಾಡುತ್ತಾ ಬಂದರೆ ತ್ವಚೆಯ ಶುಷ್ಕತೆ ದೂರವಾಗಿ ತ್ವಚೆಯು ಹೊಳೆಯುತ್ತದೆ.
ಜೇನುತುಪ್ಪವು ಚರ್ಮದ ಶುಷ್ಕತೆಯನ್ನು ಹೋಗಲಾಡಿಸುತ್ತದೆ. ಜೇನು ತುಪ್ಪವನ್ನು ಮುಖಕ್ಕೆ ಹಚ್ಚುವುದರಿಂದ ತ್ವಚೆಯು ತೇವಾಂಶದಿಂದ ಕೂಡಿರುತ್ತದೆ. ಮುಖಕ್ಕೆ ಜೇನುತುಪ್ಪವನ್ನು ಹಚ್ಚಿ 10-15 ನಿಮಿಷಗಳ ನಂತರ ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ. ಹೀಗೆ ಮಾಡುತ್ತಾ ಬಂದರೆ ಒಣ ತ್ವಚೆಯಿಂದ ಪರಿಹಾರ ಸಿಗುತ್ತದೆ.
ಎಣ್ಣೆ ಚರ್ಮವನ್ನು ಪೋಷಿಸುವ ಕೆಲಸ ಮಾಡುತ್ತದೆ. ಒಣ ತ್ವಚೆಯ ಸಮಸ್ಯೆಯನ್ನು ಹೋಗಲಾಡಿಸಲು ಬಾದಾಮಿ ಎಣ್ಣೆಯಿಂದ ಮುಖಕ್ಕೆ ಮಸಾಜ್ ಮಾಡಿ. ಆಲಿವ್ ಎಣ್ಣೆಯಲ್ಲಿ ಜೇನುತುಪ್ಪವನ್ನು ಬೆರೆಸಿ ಮಸಾಜ್ ಮಾಡುವುದರಿಂದಲೂ ಪ್ರಯೋಜನ ಸಿಗಲಿದೆ.
ಮೊಡವೆ, ಮುಖದ ಮೇಲಿನ ಸುಕ್ಕುಗಳು ಮತ್ತು ವಯಸ್ಸಾಗುವ ಲಕ್ಷಣಗಳನ್ನು ತಡೆಗಟ್ಟಲು 2 ಟೀ ಚಮಚ ಮೊಸರನ್ನು ನೇರವಾಗಿ ನಿಮ್ಮ ಮುಖಕ್ಕೆ ಹಚ್ಚಿ ಮಸಾಜ್ ಮಾಡಬೇಕು. ಇದನ್ನು 10 ನಿಮಿಷಗಳ ಮುಖದ ಮೇಲೆ ಹಾಗೆ ಬಿಟ್ಟು ನಂತರ ಶುದ್ಧ ನೀರಿನಿಂದ ತೊಳೆಯಬೇಕು.