Ashika Ranganath: ಸ್ಯಾಂಡಲ್ ವುಡ್ ಮಿಲ್ಕಿ ಬ್ಯೂಟಿ ಬಗ್ಗೆ ನಿಮಗೆಷ್ಟು ಗೊತ್ತು..?
ಸದ್ಯ ನಟಿ ಆಶಿಕಾ ರಂಗನಾಥ್ ಕೈಯಲ್ಲಿ ಅನೇಕ ಸಿನಿಮಾಗಳಿವೆ. ಗರುಡ, ರಂಗಮಂದಿರ, ಅವತಾರ ಪುರುಷ ಮತ್ತು ರೇಮೋ ಚಿತ್ರಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ. ಇನ್ನು ಕೆಲ ಚಿತ್ರಗಳಲ್ಲಿ ಅವರು ನಟಿಸುತ್ತಿದ್ದಾರೆ. ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಚಿತ್ರದ ಐಟಂ ಸಾಂಗ್ ನಲ್ಲಿಯೂ ಅವರು ಹಾಟ್ ಹಾಟ್ ಆಗಿ ಕಾಣಿಸಿಕೊಂಡು ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ.
2018ರಲ್ಲಿ ತೆರೆಕಂಡ ಶರಣ್ ಮತ್ತು ಆಶಿಕಾ ಅಭಿನಯದ `ರ‍್ಯಾಂಬೋ 2’ ಸಿನಿಮಾ ಅಭೂತಪೂರ್ವ ಪ್ರದರ್ಶನ ಕಂಡಿದ್ದಲ್ಲದೆ, ಗಲ್ಲಾಪೆಟ್ಟಿಗೆಯನ್ನು ಕೊಳ್ಳೆ ಹೊಡೆಯಿತು. ಈ ಚಿತ್ರದ `ಚುಟು ಚುಟು' ಹಾಡು ಯ್ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡ ಕನ್ನಡದ ಹಾಡುಗಳಲ್ಲೊಂದಾಗಿ ದಾಖಲೆ ಬರೆದಿದೆ. ಸದ್ಯ ಈ ಹಾಡು ಬರೋಬ್ಬರಿ 143 ಮಿಲಿಯನ್ ಗಿಂತಲೂ ಅಧಿಕ ವೀಕ್ಷಣೆ ಕಂಡಿದೆ.
‘ಕ್ರೇಜಿ ಬಾಯ್’ ಸಿನಿಮಾದ ಬಳಿಕ ನಟಿ ಆಶಿಕಾರಿಗೆ ಒಂದರ ಮೇಲೊಂದರಂತೆ ಸಿನಿಮಾ ಆಫರ್ ಬರತೊಡಗಿದವು. ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅಭಿನಯದ ‘ಮಾಸ್ ಲೀಡರ್’, ಗಣೇಶ್ ಅಭಿನಯದ ‘ಮುಗುಳು ನಗೆ’, ‘ರಾಜು ಕನ್ನಡ ಮೀಡಿಯಂ’, ‘ತಾಯಿಗೆ ತಕ್ಕ ಮಗ’ ಮುಂತಾದ ಚಿತ್ರಗಳಲ್ಲಿ ನಟಿಸುವ ಮೂಲಕ ಸೈ ಎನಿಸಿಕೊಂಡರು.
ನಿರ್ದೇಶಕ ಮಹೇಶ್ ಬಾಬು ಅವರ ‘ಕ್ರೇಜಿ ಬಾಯ್’ ಚಿತ್ರಕ್ಕೆ ಬಣ್ಣ ಹಚ್ಚುವ ಮೂಲಕ ನಟಿ ಆಶಿಕಾ ರಂಗನಾಥ್ ಸ್ಯಾಂಡಲ್ವುಡ್ ಪ್ರವೇಶಿಸಿದರು. ನಟ ದಿಲೀಪ್ ಪ್ರಕಾಶ್ ಜೊತೆ ಆಶಿಕಾ ನಟಿಸಿದ ಚೊಚ್ಚಲ ಚಿತ್ರ ‘ಕ್ರೇಜಿ ಬಾಯ್’ ಸಿನಿಮಾ 100 ದಿನ ಓಡಿತು. ಮೊದಲ ಸಿನಿಮಾದಲ್ಲಿಯೇ ತಮ್ಮ ವಿಶಿಷ್ಟ ಅಭಿನಯ ಶೈಲಿಯಿಂದ ಆಶಿಕಾ ಭರವಸೆ ಮೂಡಿಸಿದ್ದರು.
ಹಲವು ನೃತ್ಯ ಪ್ರಕಾರಗಳಲ್ಲಿ ಪರಿಣಿತಿ ಹೊಂದಿರುವ ನಟಿ ಆಶಿಕಾ ರಂಗನಾಥ್ ಬಾಲ್ಯದಿಂದಲೂ ಅನೇಕ ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿಜೇತರಾಗಿದ್ದದಾರೆ. 2014ರಲ್ಲಿ ಏರ್ಪಡಿಸಿದ್ದ ‘ಕ್ಲೀನ್ ಅಂಡ್ ಕ್ಲಿಯರ್ ಫ್ರೇಶ್ ಫೇಸ್’ ಸ್ಪರ್ಧೆಯಲ್ಲಿ ಭಾಗವಹಿಸಿ ಅವರು ರನ್ನರ್ ಅಪ್ ಪ್ರಶ್ನಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಆಶಿಕಾ ಫ್ರೀಸ್ಟೈಲ್, ಬಾಲಿವುಡ್, ಬೆಲ್ಲಿ ಮತ್ತು ವೆಸ್ಟರ್ನ್ ಸೇರಿ ವಿವಿಧ ನೃತ್ಯ ಪ್ರಕಾರಗಳಲ್ಲಿ ತರಬೇತಿ ಪಡೆದಿದ್ದಾರೆ.
ನಟಿ ಆಶಿಕಾ ರಂಗನಾಥ್ 1996ರ ಆಗಸ್ಟ್ 5ರಂದು ಹಾಸನದಲ್ಲಿ ಜನಿಸಿದರು. ಇವರ ತಂದೆ ರಂಗನಾಥ್ ಸಿವಿಲ್ ಕಾಂಟ್ರಾಕ್ಟರ್, ತಾಯಿ ಸುಧಾ ಗೃಹಿಣಿ. ಇವರ ಹಿರಿಯ ಸಹೋದರಿ ಆರ್.ಅನುಷಾ ಕೂಡ ಕಿರುತೆರೆ ನಟಿ. ತುಮಕೂರಿನಲ್ಲಿ ಬೆಳೆದ ಇವರು ಪಿಯುಸಿ ಶಿಕ್ಷಣಕ್ಕಾಗಿ ಸಿಲಿಕಾನ್ ಸಿಟಿ ಬೆಂಗಳೂರಿಗೆ ಬಂದರು. ಕೋರಮಂಗಲದ ಜ್ಯೋತಿ ನಿವಾಸ ಕಾಲೇಜಿನಲ್ಲಿ ಪಿಯು ಮುಗಿಸಿ, ಎಂಇಎಸ್(MES) ಕಾಲೇಜಿನಿಂದ ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದರು.