Election Results 2023: 2024ರ ಲೋಕಸಭಾ ಫೈಟ್‍ನ ‘ಸೆಮಿಫೈನಲ್’ನಲ್ಲಿ ಯಾರಿಗೆ ಗೆಲುವು?
ಗುರುವಾರ ಹೊರಬಿದ್ದ 4 ರಾಜ್ಯಗಳ ಎಕ್ಸಿಟ್ ಪೋಲ್ ಭವಿಷ್ಯವಾಣಿ ನಂಬಿದರೆ, ಕಾಂಗ್ರೆಸ್ 2 ಮತ್ತು ಬಿಜೆಪಿ 2 ರಾಜ್ಯಗಳಲ್ಲಿ ಗೆಲುವು ಸಾಧಿಸುತ್ತವೆ ಎನ್ನಲಾಗಿದೆ. ಆದರೆ ಸದ್ಯ ಎಲ್ಲರೂ ಎಕ್ಸಿಟ್ ಪೋಲ್‍ನ ಫಲಿತಾಂಶವನ್ನು ನಿರಾಕರಿಸಿ, ಯಾವ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಅನ್ನೋದರ ಬಗ್ಗೆ ಜಾತಕಪಕ್ಷಿಯಂತೆ ಕಾಯುತ್ತಿದ್ದಾರೆ.
ಎಕ್ಸಿಟ್ ಪೋಲ್ ಸಮೀಕ್ಷೆ ಪ್ರಕಾರ, ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳುವ ಸಾಧ್ಯತೆಗಳಿವೆ. ಆದರೆ ಅವರು ರಾಜಸ್ಥಾನದಲ್ಲಿ ಅಧಿಕಾರಕ್ಕೆ ಮರಳಬಹುದು. ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆಯಂತೆ. ತೆಲಂಗಾಣದಲ್ಲೂ ಕಾಂಗ್ರೆಸ್ ಕೆಸಿಆರ್ ಅವರನ್ನು ಅಧಿಕಾರದಿಂದ ಕಿತ್ತೊಗೆಯುತ್ತಿರುವಂತೆ ಕಾಣುತ್ತಿದೆ. ಅಂದರೆ 2 ರಾಜ್ಯದಲ್ಲಿ ಬಿಜೆಪಿ ಮತ್ತು ಇನ್ನೆರಡು ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಬಹುದು.
ಪ್ರತಿಯೊಂದು ಪಕ್ಷವೂ ತನ್ನದೇ ಆದ ಗೆಲುವಿನ ಹಕ್ಕು ಸಾಧಿಸುತ್ತಿದೆ. ಡಿಸೆಂಬರ್ 4ರಂದು ಮಿಜೋರಾಂನಲ್ಲಿ ಮತ ಎಣಿಕೆಗೂ ಮುನ್ನವೇ ಅಲ್ಲಿ ಕಾಂಗ್ರೆಸ್ ತನ್ನ ಗೆಲುವನ್ನು ಸಾರುತ್ತಿದೆ. ಪ್ರಮುಖ ರಾಜಕೀಯ ಪಕ್ಷಗಳು ಎಕ್ಸಿಟ್ ಪೋಲ್‌ಗಳಲ್ಲಿ ಎಲ್ಲಿ ಗೆಲುವು ಕಾಣುತ್ತಿವೆಯೋ ಅಲ್ಲಿ ಸಂಭ್ರಮಿಸುತ್ತಿವೆ. ಆದರೆ ಯಾರು ಗೆಲುವು ಸಾಧಿಸುತ್ತಾರೆ ಮತ್ತು ಯಾರು ಸೋಲುತ್ತಾರೆ? ಮತದಾರ ಯಾರ ಕೈಹಿಡಿಯುತ್ತಾನೆ ಅನ್ನೋದರ ಬಗ್ಗೆ ತೀವ್ರ ಕುತೂಹಲ ಮೂಡಿದೆ.
ಡಿಸೆಂಬರ್ 3ರ ಸೂಪರ್ ಸಂಡೆಗೆ ಜಯಭೇರಿ ಬಾರಿಸಲಿರುವ ಅಭ್ಯರ್ಥಿಗಳ ಭವಿಷ್ಯ ಛಿದ್ರವಾಗುವ ಭೀತಿಯೂ ಕಾಂಗ್ರೆಸ್‍ಗೆ ಇದೆ. ತೆಲಂಗಾಣದಲ್ಲಿ ಕೆಸಿಆರ್‍ಗೆ ಮಣ್ಣುಮುಕ್ಕಿಸಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸುವ ಸಾಧ್ಯತೆ ಇದೆ ಅಂತಾ ಕರ್ನಾಟಕ ಡಿಸಿಎಂ ಡಿ.ಕೆ.ಶಿವಕುಮಾರ್ ಭರವಸೆ ವ್ಯಕ್ತಪಡಿಸಿದ್ದಾರೆ. ಮಧ್ಯಪ್ರದೇಶ ಕಾಂಗ್ರೆಸ್ ವಿಭಜನೆಯ ಪ್ರಶ್ನೆಗೆ ದಿಗ್ವಿಜಯ್ ಸಿಂಗ್ ಉತ್ತರಿಸಿದ್ದು, ‘ಈಗ ಕಾಂಗ್ರೆಸ್‌ನಲ್ಲಿ ಸಿಂಧಿಯಾ ಇಲ್ಲ, ಆದ್ದರಿಂದ ಯಾರ ದ್ರೋಹಕ್ಕೆ ಹೆದರುವುದಿಲ್ಲ’ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಪ್ರತಿ ಬಾರಿಯಂತೆ ಈ ಬಾರಿಯೂ ಚುನಾವಣೆಯ ರಂಗು ರಂಗೇರುತ್ತಿದೆ. ಆದರೆ ಭಾನುವಾರ ಬರಲಿರುವ ಫಲಿತಾಂಶದಿಂದ 2024ರ ಚುನಾವಣೆಯ ಫಲಿತಾಂಶ ಸ್ಪಷ್ಟವಾಗುವುದೇ ಎಂಬ ದೊಡ್ಡ ಪ್ರಶ್ನೆಯೂ ಕಾಡುತ್ತಿದೆ. ಭಾನುವಾರ-ಸೋಮವಾರದ ಜನಾದೇಶದೊಂದಿಗೆ 2024ರ ಲೋಕಸಭಾ ಚುನಾವಣೆಯ ಸಂದೇಶವು ಸ್ಪಷ್ಟವಾಗುತ್ತದೆಯೇ ಅಥವಾ ಈ ಚುನಾವಣೆಯ ಚಿತ್ರಣವನ್ನು ಅರ್ಥಮಾಡಿಕೊಳ್ಳಲು ನಾವು ಸ್ವಲ್ಪ ಸಮಯ ಕಾಯಬೇಕೇ? ಕಾದು ನೋಡಬೇಕಿದೆ.