Astro Tips: ಸಾವಿನ ಮನೆಯಲ್ಲಿ ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಬಾರದು!
ಹಿಂದೂ ಧರ್ಮದ 18 ಪುರಾಣಗಳಲ್ಲಿ ಗರುಡ ಪುರಾಣಕ್ಕೆ ಪ್ರಮುಖ ಸ್ಥಾನವಿದೆ. ಗರುಡ ಪುರಾಣದಲ್ಲಿ ಸಾವಿನ ಮೊದಲು & ನಂತರದ ಪರಿಸ್ಥಿತಿಯನ್ನು ವಿವರಿಸಲಾಗಿದೆ. ಹೀಗಾಗಿಯೇ ಈ ಪುರಾಣವನ್ನು ಸತ್ತವರಿಗೆ ಪಠಿಸಲಾಗುತ್ತದೆ. ಸಾವಿನ ಮನೆಯಲ್ಲಷ್ಟೇ ಗರುಡ ಪುರಾಣ ಪಠಿಸಲಾಗುತ್ತದೆ. ಗರುಡ ಪುರಾಣದ ಪ್ರಕಾರ ಮನುಷ್ಯ ಮರಣ ಹೊಂದಿದ ನಂತರ ಆತನ ಪಾಪಗಳಿಗೆ ಅನುಗುಣವಾಗಿ ಶಿಕ್ಷೆ ನೀಡಲಾಗುತ್ತದಂತೆ.
ಸಾವು ಎನ್ನುವುದು ಒಂದು ರೀತಿಯ ಶೂನ್ಯತೆಯ ಭಾವ. ಯಾರೋ ಒಬ್ಬರನ್ನು ದೈಹಿಕವಾಗಿ ಕಳೆದುಕೊಳ್ಳುವುದು ಅವರನ್ನು ಅವಲಂಬಿಸಿದವರಿಗೆ ಮಾನಸಿಕವಾಗಿ ಅತೀವ ದುಃಖ ನೀಡುವ ವಿಚಾರ. ಇಂತಹ ಮನೆಯಲ್ಲಿ ಕೆಲವೊಂದು ಕೆಲಸಗಳನ್ನು ಮಾಡುವುದು ನಿಷಿದ್ಧವಾಗಿದೆ.
ಗರುಡ ಪುರಾಣದ ಪ್ರಕಾರ ಸಾವಿನ ಮನೆಯಲ್ಲಿ ಒಲೆ ಹಚ್ಚಬಾರದು. ಗರುಡ ಪುರಾಣದ ಪ್ರಕಾರ ಸಾವಿನ ಮನೆಯಲ್ಲಿ ಒಲೆ ಉರಿಸಿದರೆ ಆ ಆತ್ಮಕ್ಕೆ ಮುಕ್ತಿ ಸಿಗುವುದಿಲ್ಲ. ಅಂತ್ಯ ಸಂಸ್ಕಾರ ನಡೆಯುವ ಮೊದಲೇ ಒಲೆ ಉರಿಸಿದರೆ ಆ ಆತ್ಮವು ಲೌಕಿಕ ಮೋಹದಿಂದ ಮುಕ್ತವಾಗಿ ಪರಲೋಕ ಸೇರುವುದಿಲ್ಲವಂತೆ.
ಅದೇ ರೀತಿ ಸಾವಿನ ಮನೆಯಲ್ಲಿ ಜೋರಾಗಿ ನಗುವುದು, ತಮಾಷೆಯ ಮಾತನಾಡುವುದು, ಜೋರಾಗಿ ಸಂಗೀತ ಅಥವಾ ಹಾಡು, ಅಬ್ಬರದ ಮ್ಯೂಸಿಕ್ ಹಾಕುವುದು ನಿಷಿದ್ಧವಾಗಿದೆ. ಆತ್ಮವನ್ನು ಮೌನವಾಗಿ & ಶಾಂತಿಯುತವಾಗಿ ಕಳುಹಿಸಿಕೊಡಬೇಕಾಗಿರುವುದು ನಮ್ಮೆಲ್ಲಾ ಕರ್ತವ್ಯವಾಗಿದೆ.
ಗರುಡ ಪುರಾಣದ ಪ್ರಕಾರ ಸಾವು ಹತ್ತಿರದಲ್ಲಿದ್ದಾಗ ಸಾವನ್ನಪ್ಪಿರುವ ಹಿರಿಯರು ಕಾಡುತ್ತಾರಂತೆ. ಸಾಯುವ ವ್ಯಕ್ತಿಯ ಸುತ್ತಲೂ ಹಿಂದೆ ಇಹಲೋಕ ತ್ಯಜಿಸಿದ ಜನರ ನೆರಳುಗಳು ಸಹ ಅವರಿಗೆ ಕಾಣಿಸುತ್ತದೆ ಎನ್ನಲಾಗುತ್ತದೆ. ಒಂದು ರೀತಿಯಲ್ಲಿ ಹಿರಿಯರು ತನ್ನನ್ನು ಕರೆಯುತ್ತಿದ್ದಾರೆನ್ನುವ ಭಾವನೆ ಮೂಡುತ್ತದಂತೆ.