‘ಬ್ಯಾಕ್‍ ಬೆಂಚರ್ಸ್’ ಸಾಲಿನಲ್ಲಿ ಕ್ಯೂಟ್‌ ಬ್ಯೂಟಿ..! ಫಸ್ಟ್‌ ಸಿನಿಮಾ ರಿಲೀಸ್‌ಗೂ ಮುನ್ನವೇ ಮಾನ್ಯಗೆ ಸಾಕಷ್ಟು ಆಫರ್ಸ್‌

Thu, 18 Jul 2024-6:51 pm,

ಇಂಜಿನಿಯರಿಂಗ್‍ ಮುಗಿಸಿರುವ ಮಾನ್ಯ, ‘ಬ್ಯಾಕ್‍ ಬೆಂಚರ್ಸ್’ ಚಿತ್ರದ ನಾಯಕಿಯರಲ್ಲೊಬ್ಬರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಮಾಯ ಎಂಬ ಪಾತ್ರವನ್ನು ನಿರ್ವಹಿಸಿರುವ ಅವರು, ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.  

‘ಬ್ಯಾಂಕ್‍ ಬೆಂಚರ್ಸ್’ ಚಿತ್ರದ ಕುರಿತು ಮಾತನಾಡುವ ಅವರು, ‘ಮೂರು ವರ್ಷಗಳ ಹಿಂದೆ ನಾನು ಇಂಜಿನಿಯರಿಂಗ್‍ ಮುಗಿಸಿದೆ. ನನಗೆ ಬಾಲ್ಯದಿಂದಲೂ ನಟನೆಯ ಬಗ್ಗೆ ಆಸಕ್ತಿ ಇತ್ತು. ಶಾಸ್ತ್ರೀಯ ನೃತ್ಯ ಕಲಿತಿದ್ದೇನೆ. ರಂಗಭೂಮಿಯಲ್ಲಿ ಸಕ್ರಿಯವಾಗಿದ್ದೆ. ಹೀಗಿರುವಾಗಲೇ ‘ಬ್ಯಾಕ್‍ ಬೆಂಚರ್ಸ್’ ಚಿತ್ರಕ್ಕೆ ಆಡಿಷನ್‍ ಆಗುತ್ತಿರುವ ವಿಷಯ ಗೊತ್ತಾಯಿತು.  

ಆ ಆಡಿಷನ್‍ನಲ್ಲಿ ಭಾಗವಹಿಸಿದ್ದೆ. ಇದರಲ್ಲಿ ಸುಮಾರು 700 ಯುವಕ-ಯುವತಿಯರು ಭಾಗವಹಿಸಿದ್ದರು. ನಿರ್ದೇಶಕರು ಕೊಟ್ಟ ಕೆಲವು ದೃಶ್ಯಗಳನ್ನು ನಾನು ನನ್ನದೇ ರೀತಿಯಲ್ಲಿ ಅಭಿನಯಿಸಿ ತೋರಿಸಿದೆ. ಅಷ್ಟೊಂದು ಜನರ ಮಧ್ಯೆ ನಾನು ಆಯ್ಕೆಯಾಗುತ್ತೀನೋ ಇಲ್ಲವೋ ಎಂಬ ಅನುಮಾನ ಇತ್ತು. ಆದರೆ, ಅಂತಿಮವಾಗಿ ಚಿತ್ರತಂಡಕ್ಕ ಆಯ್ಕೆಯಾದ 30 ಜನರಲ್ಲಿ ನಾನು ಒಬ್ಬಳಾಗಿದ್ದೆ’ ಎನ್ನುತ್ತಾರೆ ಮಾನ್ಯ.  

 ಆಡಿಷನ್‍ ಮುಗಿದ ಮೇಲೆ ನಟ-ನಿರ್ದೇಶಕ ಸುಚೇಂದ್ರ ಪ್ರಸಾದ್‍, ಆಯ್ಕೆಯಾದ 30 ಜನರಿಗಾಗಿ ಒಂದು ಕಾರ್ಯಾಗಾರ  ಮಾಡಿದ್ದಾರೆ. ಅದರಲ್ಲಿ ಚಿತ್ರ ನಟನೆ ಕುರಿತು ಹಲವು ವಿಷಯಗಳನ್ನು ಹೇಳಿಕೊಟ್ಟಿದ್ದಾರೆ. ಆ ನಂತರ ಆರು ತಿಂಗಳ ಕಾಲ ಸಾಕಷ್ಟು ರಿಹರ್ಸಲ್‍ ಮಾಡಿ, ನಂತರ ಚಿತ್ರತಂಡವು ಚಿತ್ರೀಕರಣಕ್ಕೆ ಹೊರಟಿದೆ.  

ಚಿತ್ರೀಕರಣದ ಅನುಭವ ಮರೆಯಲಾಗದ್ದು ಎನ್ನುವ ಮಾನ್ಯ, ‘ನಾನು ಹೊಸಬಳು. ಹಾಗಾಗಿ ಸಹಜವಾಗಿಯೇ ನರ್ವಸ್‍ ಆಗಿದ್ದೆ. ಆದರೆ, ನಮ್ಮ ನಿರ್ದೇಶಕರಾದ ರಾಜಶೇಖರ್ ಮತ್ತು ಛಾಯಾಗ್ರಾಹಕ ಮನೋಹರ್ ಜೋಷಿ ನನಗೂ ಸೇರಿದಂತೆ ಎಲ್ಲರಿಗೂ ಬಹಳ ಚೆನ್ನಾಗಿ ಗೈಡ್‍ ಮಾಡಿದ್ದಾರೆ. ನನಗೆ ತುಂಬಾ ಚೆನ್ನಾಗಿ ಹೇಳಿಕೊಟ್ಟಿರುವುದಷ್ಟೇ ಅಲ್ಲ, ನನ್ನನ್ನು ಬಹಳ ಚೆನ್ನಾಗಿ ತೆರೆಯ ಮೇಲೆ ತೋರಿಸಿದ್ದಾರೆ.   

ಬರೀ ನಟನೆ ಅಷ್ಟೇ ಅಲ್ಲ, ಚಿತ್ರದ ಪೋಸ್ಟ್ ಪ್ರೊಡಕ್ಷನ್‍ ಮತ್ತು ಮಾರ್ಕೆಟಿಂಗ್‍ ವಿಭಾಗಗಳಲ್ಲೂ ತೊಡಗಿಸಿಕೊಂಡಿದ್ದೇನೆ. ಒಟ್ಟಾರೆ ಈ ಚಿತ್ರದ ಮೂಲಕ ಸಾಕಷ್ಟು ವಿಷಯಗಳನ್ನು ಕಲಿತಿದ್ದೇನೆ. ಅವರಿಗೆ ನಾನು ಸದಾ ಋಣಿ’ ಎನ್ನುತ್ತಾರೆ.  

ತಮ್ಮ ಪಾತ್ರದ ಬಗ್ಗೆ ಮಾತನಾಡುವ ಮಾನ್ಯ. ‘ಚಿತ್ರದಲ್ಲಿ ನಾಲ್ಕು ಪ್ರಮುಖ ನಾಯಕಿಯರ ಪಾತ್ರ ಇದೆ. ರಿಹರ್ಸಲ್‍ ಸಮಯದಲ್ಲಿ ಈ ನಾಲ್ಕೂ ಪಾತ್ರಗಳನ್ನು ಮಾಡಿದ್ದೆ. ಅದರಲ್ಲಿ ನನಗೆ ಮಾಯ ಪಾತ್ರ ಬಹಳ ಇಷ್ಟವಾದ ಪಾತ್ರ. ಈ ಪಾತ್ರ ನನಗೆ ಸೂಟ್‍ ಆಗುತ್ತದೆ, ನಾನಿದನ್ನು ನಿಭಾಯಿಸಬಲ್ಲೆ ಎಂಬ ನಂಬಿಕೆಯಿಂದ ಈ ಪಾತ್ರ ಕೊಟ್ಟಿದ್ದಾರೆ. ನಾನಿಲ್ಲಿ ಬಜಾರಿಯಾಗಿ ಕಾಣಿಸಿಕೊಂಡಿದ್ದೇನೆ. ಬಹಳ ಬೋಲ್ಡ್ ಆದ ಪಾತ್ರ ಇದು. ನನಗಿಷ್ಟವಾದ ಪಾತ್ರ ಸಿಕ್ಕ ಖುಷಿ ಇದೆ. ಅದು ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ’ ಎನ್ನುತ್ತಾರೆ ಮಾನ್ಯ.  

‘ಬ್ಯಾಕ್‍ ಬೆಂಚರ್ಸ್’ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರುವ ಮಾನ್ಯ, ಅದರ ಬಿಡುಗಡೆಗೆ ಕಾದಿದ್ದಾರೆ. ಈ ಮಧ್ಯೆ, ‘ಮಾನ್ಸೂನ್ ರಾಗ’ ಮತ್ತು ‘ವೀರಂ’ ಚಿತ್ರಗಳಲ್ಲೂ ನಟಿಸಿದ್ದಾರೆ. ಜೊತೆಗೆ ತೆಲುಗಿನಲ್ಲಿ ‘ಮಿಸಸ್ ಕರ್ನಲ್‍’ ಎಂಬ ಚಿತ್ರದಲ್ಲಿ ನಟಿಸಿದ್ದಾರಂತೆ. ಈ ಮಧ್ಯೆ, ಒಂದಿಷ್ಟು ಪಾತ್ರಗಳು ಹುಡುಕಿಕೊಂಡು ಬರುತ್ತಿದ್ದು, ‘ಬ್ಯಾಕ್‍ ಬೆಂಚರ್ಸ್‍’ ಬಿಡುಗಡೆಯಾದ ಮೇಲೆ ನೋಡಿಕೊಂಡು ತೀರ್ಮಾನಿಸುವುದಾಗಿ ಮಾನ್ಯ ಹೇಳುತ್ತಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link