ಲಾಯರ್ ಜಗದೀಶ್‌ಗೆ ಸಂಕಷ್ಟ! ಕಲರ್ಸ್ ಕನ್ನಡ ವಾಹಿನಿಗೆ ವಕೀಲರ ಸಂಘದಿಂದ ಎಚ್ಚರಿಕೆಯ ಪತ್ರ!
ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭವಾಗಿ ಒಂದೇ ಒಂದು ವಾರ ಕಳೆದಿದೆ. ಆದರೆ, ಈ ಒಂದು ವಾರದಲ್ಲೇ ಕಾರ್ಯಕ್ರಮ ಪ್ರಸಾರವಾಗುವ ಕಲರ್ಸ್ ಕನ್ನಡ ವಾಹಿನಿಗೆ ಒಂದು ನೋಟೀಸ್, ಒಂದು ಪತ್ರ ಬಂದಿದೆ.
ಬಿಗ್ ಬಾಸ್ ಕನ್ನಡ 11 ಆರಂಭವಾದ ಮೂರೇ ದಿನಕ್ಕೆ ಬಿಬಿಕೆ ಸ್ಪರ್ಧಿ ಚೈತ್ರ ಕುಂದಾಪುರ ಅವರನ್ನು ಬಿಗ್ ಬಾಸ್ ನಿಂದ ಕೈಬಿಡುವಂತೆ ಕಲರ್ಸ್ ವಾಹಿನಿಗೆ ನೋಟೀಸ್ ನೀಡಲಾಗಿತ್ತು. ಇದೀಗ ಈ ಸರದಿ ಲಾಯರ್ ಜಗದೀಶ್ ಅವರದ್ದು.
ಬಿಗ್ ಬಾಸ್ ಮನೆಯೊಳಗೆ ಬಾರೀ ಸದ್ದು ಮಾಡುತ್ತಿರುವ ನಿಮ್ಮ ಬಿಗ್ ಬಾಸ್ ಅನ್ನೇ ಇಲ್ಲದಂತೆ ಮಾಡುತ್ತೇನೆ ಎಂದು ಆರ್ಭಟಿಸಿ ಕಿಚ್ಚನ ಪಂಚಾಯ್ತಿಯಲ್ಲಿ ಪೇಚಿಗೆ ಸಿಲುಕಿದ್ದ ಲಾಯರ್ ಜಗದೀಶ್‌ಗೆ ಇದೀಗ ಕಾನೂನು ಸಂಕಷ್ಟ ಎದುರಾಗಿದೆ.
ಕಾರ್ಯಕ್ರಮದಲ್ಲಿ ಲಾಯರ್, ವಕೀಲ ಸಾಹೇಬ ಎಂದೆಲ್ಲಾ ಕೆ.ಎನ್. ಜಗದೀಶ್ ಅವರನ್ನು ಸಂಭೋದಿಸುತ್ತಿರುವ ಬಗ್ಗೆ ಆಕ್ಷೇಪ ಹೊರಹಾಕಿರುವ ಬೆಂಗಳೂರು ವಕೀಲರ ಸಂಘ ಇನ್ಮುಂದೆ ಅವರನ್ನು "ಲಾಯರ್" ಎಂದು ಕರೆಯದಂತೆ ತಾಕೀತು ಮಾಡಿದೆ.
ಬೆಂಗಳೂರು ವಕೀಲರ ಸಂಘ ಕಲರ್ಸ್ ಕನ್ನಡ ವಾಹಿನಿಗೆ ಬರೆದಿರುವ ಪತ್ರದಲ್ಲಿ, "ಬಿಗ್ ಬಾಸ್-11ರ ಪ್ರಸಾರವಾಗುತ್ತಿರುವ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿರುವ ಕೆ.ಎನ್. ಜಗದೀಶ್ ವಕೀಲರಲ್ಲದೇ ಇದ್ದರೂ ಅವರನ್ನು "ವಕೀಲರು/ವಕೀಲ್ ಸಾಹೇಬ್" ಎಂದು ಬಿಂಬಿಸುತ್ತಿರುವುದು ನಮ್ಮ ವಕೀಲರ ಸಂಘದ ಸದಸ್ಯರಿಗೆ ನೋವುಂಟು ಮಾಡಿದ್ದು, ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಈ ಮೊದಲೇ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಕರ್ನಾಟಕ ರಾಜ್ಯದಲ್ಲಿ ಕಾನೂನು ವೃತ್ತಿ ಮುಂದುವರೆಸದಂತೆ ಕೆ.ಎನ್. ಜಗದೀಶ್ ಅವರಿಗೆ ಆದೇಶ ನೀಡಿದೆ. ದೆಹಲಿ ಬಾರ್ ಕೌನ್ಸಿಲ್ ಸಹ ಇವರ ದಾಖಲಾತಿಗಳನ್ನು ಪರಿಶೀಲಿಸಿ ಲೈಸನ್ಸ್ ರದ್ದುಗೊಳಿಸಿ ಎಲ್ಲಾ ಪ್ರಮಾಣ ಪತ್ರಗಳನ್ನು ಹಿಂತಿರುಗಿಸುವಂತೆ ಆದೇಶ ಹೊರಡಿಸಿದೆ.
ಇಂಥ ಸಂದರ್ಭದಲ್ಲಿ ತಾವು ವಕೀಲರಲ್ಲದ ವ್ಯಕ್ತಿಯ ಹಿನ್ನೆಲೆಯನ್ನು ಪರಿಶೀಲಿಸದೆ ತಮ್ಮ ಟಿವಿ ಚಾನಲ್‌ನಲ್ಲಿ ಅವರನ್ನು ವಕೀಲರೆಂದು ಬಿಂಬಿಸುತ್ತಿರುವುದು ನಮ್ಮ ವಕೀಲ ವೃಂದಕ್ಕೆ ಬಹಳ ನೋವುಂಟು ಮಾಡಿರುತ್ತದೆ. ಇದು ಸಮಾಜದ ಮೇಲೂ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತದೆ ಎಂದು ವಕೀಲರ ಸಂಘ ಪತ್ರದಲ್ಲಿ ತಿಳಿಸಿದೆ.
ಮೇಲೆ ಉಲ್ಲೇಖಿಸಿದ ಕಾರಣಗಳಿಂದಾಗಿ ತಮ್ಮ ಚಾನಲ್‌ನಲ್ಲಿ ಪ್ರಸಾರವಾಗುವ ಬಿಗ್‌ಬಾಸ್-11ರ ಕಾರ್ಯಕ್ರಮದಲ್ಲಿ ಇನ್ನು ಮುಂದೆ ಕೆ.ಎನ್. ಜಗದೀಶ್ ಅವರನ್ನು ವಕೀಲರೆಂದು ಬಿಂಬಿಸದಂತೆ ಬೆಂಗಳೂರು ವಕೀಲರ ಸಂಘ ವಾಹಿನಿಗೆ ಮನವಿ ಮಾಡಿದೆ. ಅಲ್ಲದೆ, ಇದನ್ನು ನಿರ್ಲಕ್ಷಿಸಿದರೆ ಸೂಕ್ತ ಕ್ರಮ ಜರುಗಿಸುವುದಾಗಿಯೂ ಪತ್ರದಲ್ಲಿ ಬರೆಯಲಾಗಿದೆ.