ಪಶ್ಚಾತ್ತಾಪ ಪಡಬೇಕಾದೀತು.! ಆಕ್ಸಿಜನ್ ಗಾಗಿ ಎಂದೂ ಈ ತಪ್ಪುಗಳನ್ನು ಮಾಡಬೇಡಿ
ಕರ್ಪೂರ, ಲವಂಗ, ಓಮಕಾಳು, ಮತ್ತು ಒಂದೆರೆಡು ಹನಿ ನೀಲಗಿರಿ ಎಣ್ಣೆ ಅದಕ್ಕೆ ಮಿಕ್ಸ್ ಮಾಡಿ, ಇವನ್ನು ಒಂದು ಟವೆಲಿನಲ್ಲಿ ಕಟ್ಟಿ, ಅದರ ವಾಸನೆಯನ್ನು ಪದೇ ಪದೇ ಆಘ್ರಾಣಿಸುತ್ತಿದ್ದರೆ ದೇಹದಲ್ಲಿ ಆಮ್ಲಜನಕ ಪ್ರಮಾಣ ಹೆಚ್ಚಾಗುತ್ತದೆ ಎಂಬ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಲಡಾಕ್ ನಂತಹ ಬೆಟ್ಟ ಪ್ರದೇಶದಲ್ಲಿ ದೇಹದಲ್ಲಿ ಆಮ್ಲಜನಕ ಮಟ್ಟ ಹೆಚ್ಚಿಸಲು ಪ್ರವಾಸಿಗಳಿಗೆ ಇದನ್ನೇ ನೀಡಲಾಗುತ್ತಿದೆ ಎಂದು ಆ ಪೋಸ್ಟ್ ಹೇಳಿದೆ.
ನಿಮಗೆ ಗೊತ್ತಿರಲಿ. ಈ ಮನೆಮದ್ದಿನ ಸತ್ಯಾಸತ್ಯತೆ ಪುಷ್ಟಿಕರಿಸುವ ಯಾವುದೇ ವೈಜ್ಞಾನಿಕ ವರದಿ ಇಲ್ಲಿಯವರೆಗೆ ಬಂದಿಲ್ಲ. ಅಂದರೆ ಈ ವಿಧಾನ ವೈಜ್ಞಾನಿಕವಾಗಿ ಇನ್ನೂ ದೃಢಪಟ್ಟಿಲ್ಲ.
ಗೊತ್ತಿರಲಿ. ಆಯುರ್ವದ ತಜ್ಞರ ಪ್ರಕಾರ ಕರ್ಪೂರ ಬಿಳಿ ಬಣ್ಣದ ಜ್ವಲನಶೀಲ ವಸ್ತು. ಅದರ ವಾಸನೆ ತೀವ್ರವಾಗಿರುತ್ತದೆ. ಕರ್ಪೂರವನ್ನು ಸ್ವಲ್ಪ ಅಘ್ರಾಣಿಸಿದರೂ ಮೆದುಳು ಹೈಪರ್ ಆಕ್ಟಿವ್ ಆಗುತ್ತದೆ. ದೇಹದಲ್ಲಿ ರಕ್ತ ಪರಿಚಲನೆಯ ವೇಗ ಹೆಚ್ಚುತ್ತದೆ. ಕರ್ಪೂರ ಅಘ್ರಾಣಿಸುವುದು ತುಸು ಹೆಚ್ಚಾದರೂ ಅದು ಖತರ್ನಾಕ್ ಆಗಿ ಪರಿಣಮಿಸಬಹುದು. ಮೂಗು, ಗಂಟಲು, ಕಣ್ಣಿನಲ್ಲಿ ಉರಿ ಕಾಣಿಸಿಕೊಳ್ಳಬಹುದು.
ಲವಂಗದಲ್ಲಿ ಯುಜೆನಾಲ್ ಇರುತ್ತದೆ. ಇದು ಲಿವರ್ ಕ್ಷಮತೆಯನ್ನು ಸುಧಾರಿಸುತ್ತದೆ. ಜೀರ್ಣ ಕ್ರಿಯೆಯನ್ನು ಹೆಚ್ಚಿಸುತ್ತದೆ. ಆದರೆ ಈ ಯುಜೆನಾಲ್ ವಿಷತ್ವಕ್ಕೂ ಕಾರಣವಾಗಬಹುದು. ಲವಂಗ ವಾಸನೆ ಹೀರುತ್ತಿದ್ದರೆ, ದೇಹದ ಆಮ್ಲಜನಕ ಮಟ್ಟ ಏರುತ್ತದೆ ಎಂದು ರುಜುವಾತು ಪಡಿಸುವ ಯಾವುದೇ ಸಂಶೋಧನೆಗಳು ಇಲ್ಲಿವರೆಗೆ ಬಂದಿಲ್ಲ. ಆದರೆ ಲವಂಗ ವಾಸನೆ ಪದೇ ಪದೇ ಹೀರುತ್ತಿದ್ದರೆ ಅದು ದೇಹಕ್ಕೆ ಅಪಾಯಕಾರಿಯಾಗಬಹುದು.
ಓಮಕಾಳು ಹೊಟ್ಟೆಗೆ ಹಿತಕಾರಿಯಾಗಬಹುದು. ಗೊತ್ತಿರಲಿ ಬಹುತೇಕ ಜನರಿಗೆ ಓಮಕಾಳು ಅಲರ್ಜಿ ಉಂಟು ಮಾಡುತ್ತದೆ. ಅದರ ವಾಸನೆ ಹೀರುವುದರಿಂದ ಲಾಭ ನಷ್ಟ ಏನು ಎಂದು ತರ್ಕಿಸುವ ಯಾವ ವರದಿಯೂ ಇಲ್ಲ. ಅದೇ ರೀತಿ, ಮಾಂಸಖಂಡ, ಕೀಲು ಮುಂತಾದ ಕಡೆ ನೋವುಗಳಿದ್ದರೆ ನೀಲಗಿರಿ ಎಣ್ಣೆ ಸವರಿದ್ರೆ ಉಪಶಮನ ಆಗುತ್ತದೆ. ಆದರೆ, ಅದರ ವಾಸನೆ ಹೀರಿದರೆ ದೇಹದಲ್ಲಿ ಆಮ್ಲಜನಕ ಮಟ್ಟ ಏರುತ್ತದೆ ಎನ್ನುವುದು ಎಲ್ಲೂ ರುಜುವಾತಾಗಿಲ್ಲ.
ಕರೋನಾ ಕಾಲದಲ್ಲಿ ಅನೇಕ ರೀತಿಯ ಮನೆಮದ್ದುಗಳು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ. ಆದರೆ ಯಾವುದೇ ರೀತಿಯ ಮನೆ ಮದ್ದುಗಳನ್ನು ತೆಗೆದುಕೊಳ್ಳುವ ಮೊದಲು, ನಿಮ್ಮ ವೈದ್ಯರನ್ನು ಸಂಪರ್ಕಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ತೊಂದರೆಯಾಗಬಹುದು..