ಸಚಿನ್ ತೆಂಡೂಲ್ಕರ್’ಗೂ ಮೊದಲು ODIನಲ್ಲಿ ದ್ವಿಶತಕ ಸಿಡಿಸಿದ ಬ್ಯಾಟ್ಸ್’ಮನ್ ಇವರೇ… ಪುರುಷ ಅಲ್ಲ ಮಹಿಳೆ!
ಸಚಿನ್ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ದ್ವಿಶತಕ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಅಲ್ಲ. ಅವರು ಈ ಸಾಧನೆ ಮಾಡುವ ಸುಮಾರು 12 ವರ್ಷಗಳ ಮೊದಲು, ಮಹಿಳಾ ಬ್ಯಾಟ್ಸ್‌ಮನ್ ಏಕದಿನದಲ್ಲಿ ದ್ವಿಶತಕ ಗಳಿಸಿದ ಸಾಧನೆಯನ್ನು ಸಾಧಿಸಿದ್ದರು.
ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟಿಗ ಬೆಲಿಂಡಾ ಜೇನ್ ಕ್ಲಾರ್ಕ್ 16 ಡಿಸೆಂಬರ್ 1997 ರಂದು ಡೆನ್ಮಾರ್ಕ್ ವಿರುದ್ಧದ ಮಹಿಳಾ ವಿಶ್ವಕಪ್ ಪಂದ್ಯದಲ್ಲಿ 229 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ಇದು ಏಕದಿನದಲ್ಲಿ ಬ್ಯಾಟ್ಸ್‌ಮನ್ ಗಳಿಸಿದ ಮೊದಲ ದ್ವಿಶತಕವಾಗಿದೆ.
ಮುಂಬೈನಲ್ಲಿ ನಡೆದ ಡೆನ್ಮಾರ್ಕ್ ಮಹಿಳಾ ತಂಡದ ವಿರುದ್ಧದ ಈ ಪಂದ್ಯದಲ್ಲಿ ಕ್ಲಾರ್ಕ್ 155 ಎಸೆತಗಳಲ್ಲಿ 22 ಬೌಂಡರಿಗಳ ನೆರವಿನಿಂದ ಅಜೇಯ 229 ರನ್ ಗಳಿಸಿದ್ದರು. ಬೆಲಿಂಡಾ ಅವರ ಈ ಇನ್ನಿಂಗ್ಸ್’ನಿಂದಾಗಿ ಆಸ್ಟ್ರೇಲಿಯಾ ಮಹಿಳಾ ತಂಡವು 50 ಓವರ್‌ಗಳಲ್ಲಿ 3 ವಿಕೆಟ್‌ಗೆ 412 ರನ್ ಗಳಿಸಿ ನಂತರ 363 ರನ್’ಗಳ ಬೃಹತ್ ಅಂತರದಿಂದ ಪಂದ್ಯವನ್ನು ಗೆದ್ದುಕೊಂಡಿತು.
ಅವರ ದಾಖಲೆಯ ಒಂದು ದಶಕದ ನಂತರ, ಸಚಿನ್ 2010 ರಲ್ಲಿ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ತಮ್ಮ ಮೊದಲ ದ್ವಿಶತಕವನ್ನು ಗಳಿಸಿದರು. ಇದು ಪುರುಷರ ODI ನಲ್ಲಿ ಬ್ಯಾಟ್ಸ್‌ಮನ್ ಗಳಿಸಿದ ಮೊದಲ ದ್ವಿಶತಕ. ಸಚಿನ್ ಗ್ವಾಲಿಯರ್ ಏಕದಿನ ಪಂದ್ಯದಲ್ಲಿ 147 ಎಸೆತಗಳನ್ನು ಎದುರಿಸಿ, 25 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ಸಹಾಯದಿಂದ ಅಜೇಯ 200 ರನ್ ಗಳಿಸಿದ್ದರು. ಈ ಪಂದ್ಯದಲ್ಲಿ ಭಾರತ ತಂಡ 153 ರನ್‌ಗಳ ಜಯ ಸಾಧಿಸಿತ್ತು.
ಕುತೂಹಲಕಾರಿ ಸಂಗತಿಯೆಂದರೆ ಬೆಲಿಂಡಾ ಅವರ ಅಜೇಯ 229 ರನ್ ದಾಖಲೆಯನ್ನು 2013ರ ತನಕ ODI ನಲ್ಲಿ ಯಾವೊಬ್ಬ ಬ್ಯಾಟ್ಸ್’ಮನ್ ಕೂಡ ಬ್ರೇಕ್ ಮಾಡಿರಲಿಲ್ಲ. ಆದರೆ, 13 ನವೆಂಬರ್ 2014 ರಂದು, ರೋಹಿತ್ ಶರ್ಮಾ ಕೋಲ್ಕತ್ತಾದಲ್ಲಿ ಶ್ರೀಲಂಕಾ ವಿರುದ್ಧ 264 ರನ್ ಗಳಿಸುವ ಮೂಲಕ ಈ ದಾಖಲೆಯನ್ನು ಮುರಿದಿದ್ದರು.
ಬೆಲಿಂಡಾ ಆಸ್ಟ್ರೇಲಿಯಾದ ಶ್ರೇಷ್ಠ ಮಹಿಳಾ ಕ್ರಿಕೆಟಿಗರಲ್ಲಿ ಒಬ್ಬರು. ಆಸ್ಟ್ರೇಲಿಯಾ ತಂಡದ ನಾಯಕರೂ ಆಗಿದ್ದ ಈ ಬಲಗೈ ಬ್ಯಾಟ್ಸ್‌ಮನ್, ಟೆಸ್ಟ್ ಮತ್ತು ODIಗಳಲ್ಲಿ 45+ ಸರಾಸರಿಯಲ್ಲಿ ರನ್ ಗಳಿಸಿದ್ದರು.