5 ರಿಯಾಲಿಟಿ ಶೋ, ದ್ವಿಭಾಷಾ ಸೀರಿಯಲ್ ಸ್ಟಾರ್ ಬಿಗ್ ಬಾಸ್ ಚಂದನ್ ಕೊಟ್ರು ಸರ್ಪ್ರೈಸ್
ಕಿರುತೆರೆಯಲ್ಲಿ ಲಕ್ಷ್ಮಿ ಬಾರಮ್ಮ ಸೀರಿಯಲ್ ನಲ್ಲಿ ಚಂದನ್ ಪಾತ್ರಧಾರಿಯಾಗಿ ಮನೆಮಾತಾಗಿದ್ದ ಚಂದನ್ ಕುಮಾರ್ ಇಂದು ತಮ್ಮ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.
ಬಿಗ್ ಬಾಸ್ ಸೇರಿದಂತೆ 5 ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದ ಚಂದನ್ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ 6 ಧಾರಾವಾಹಿಗಳಲ್ಲಿ ನಟಿಸಿ ಮಿಂಚುತ್ತಿರುವ ನಟ. ಕಿರುತೆರೆಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಾಯಕ.
ಬಿಗ್ ಬಾಸ್ ರನ್ನರ್ ಅಪ್ ಆಗಿ ಬಂದ ನಂತರ ಇದುವರೆಗೂ 09 ಚಿತ್ರಗಳಲ್ಲಿ ಅಭಿನಯಿಸಿರುವ ನಟ ಚಂದನ್ ಇದೀಗ ತಮ್ಮ ಹತ್ತನೇ ಚಿತ್ರಕ್ಕೆ ಅಭಿಮಾನಿಗಳಿಗೆ ಉಡುಗೊರೆಯೊಂದನ್ನು ನೀಡಿದ್ದಾರೆ.
ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ರನ್ನರ್ ಅಪ್ ಆಗಿ ಖ್ಯಾತಿ ಗಳಿಸಿರುವ ಚಂದನ್ ತಮ್ಮ ಹತ್ತನೇ ಚಿತ್ರವನ್ನೂ ತಾವೇ ನಿರ್ಮಿಸಿ ಅಭಿನಯಿಸುತ್ತಿದ್ದು, ಇದಕ್ಕೆ ಆ್ಯಕ್ಷನ್ ಕಟ್ ಕೂಡ ಅವರೇ ಹೇಳಿದ್ದಾರೆ.
ಹೌದು, ನಟ ಚಂದನ್ ಕುಮಾರ್ ಎವರೆಸ್ಟ್ ಪಿಚ್ಚರ್ಸ್ ಬ್ಯಾನರ್ ನಡಿಯಲ್ಲಿ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದು, ಈ ಚಿತ್ರವನ್ನು ತಾವೇ ನಿರ್ದೇಶಿಸುತ್ತಿದ್ದಾರೆ. ಅಷ್ಟೇ ಅಲ್ಲ, ಈ ಸಿನಿಮಾದ ಹೀರೋ ಕೂಡ ಅವರೇ.
ಈಗಾಗ್ಲೇ ಶೂಟಿಂಗ್ ಶುರು ಮಾಡಿರೋ ಇನ್ನೂ ಹೆಸರಿಡಿದ ಈ ಚಿತ್ರದಲ್ಲಿ ಕನ್ನಡ ಚಿತ್ರರಂಗದ ದೊಡ್ಡ ತಾರಾಬಳಗವಿದೆ. ಜೆಸ್ಸಿ ಗಿಫ್ಟ್ ಸಂಗೀತ, ವೇಣುಗೋಪಾಲ್ ಛಾಯಾಗ್ರಹಣ ಈ ಚಿತ್ರಕ್ಕಿದೆ.
ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಚಂದನ್ ಕುಮಾರ್ ಸಣ್ಣ ವೀಡಿಯೋ ಮೂಲಕ ಈ ಸಿಹಿ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ನಟ ಚಂದನ್ ಲಕ್ಷ್ಮಿ ಬಾರಮ್ಮ ಸೀರಿಯಲ್ ನಲ್ಲಿ ತಮ್ಮ ಸಂಗಾತಿ ಪಾತ್ರದಲ್ಲಿ ಅಭಿನಯಿಸಿದ್ದ ಲಕ್ಷ್ಮಿ ಪಾತ್ರಧಾರಿ ಕವಿತಾ ಅವರನ್ನೇ ಮದುವೆಯಾಗಿದ್ದು, ಈ ದಂಪತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.