Cooking Tips: ಅಡುಗೆ ಮಾಡುವಾಗ ತಳಹಿಡಿದು ಆಹಾರದ ಸ್ವಾದ ಕೆಟ್ಟಿದ್ದರೆ, ಈ ರೀತಿ ಸರಿಪಡಿಸಿ
ಕೆಲವೊಮ್ಮೆ ಅಡುಗೆ ಮಾಡುವಾಗ ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ಸಹ ಆಹಾರ ತಳಹಿಡಿಯುವುದು ಸಾಮಾನ್ಯ ಸಂಗತಿ. ಆಹಾರ ತಳಹಿಡಿದು ಸೀದಾಗ ಸುಡುವ ವಾಸನೆಯೊಂದಿಗೆ ಆಹಾರದ ಸ್ವಾದವೇ ಹಾಳಾಗುತ್ತದೆ. ಇಂತಹ ಸಂದರ್ಭದಲ್ಲಿ ಕೆಲವು ಟಿಪ್ಸ್ ಅನುಸರಿಸುವುದರಿಂದ ನೀವು ಸುಟ್ಟ ಆಹಾರವನ್ನು ಸುಲಭವಾಗಿ ಸರಿಪಡಿಸಬಹುದು. ಅಂತಹ ಕೆಲವು ಸಲಹೆಗಳೆಂದರೆ...
ಹಾಲು: ಮೊದಲಿಗೆ ಸುಟ್ಟ ಆಹಾರವನ್ನು ಬೇರೆ ಪಾತ್ರೆಗೆ ವರ್ಗಾಯಿಸಿ ಸ್ವಲ್ಪ ಕೆನೆ ಮಿಶ್ರಿತ ಹಾಲನ್ನು ಬಳಸಿ ಸಣ್ಣ ಉರಿಯಲ್ಲಿ ಆಹಾರವನ್ನು ಬಿಸಿ ಮಾಡಿದರೆ ಸುಟ್ಟ ಆಹಾರವನ್ನು ಸರಿಪಡಿಸಬಹುದು.
ಮೊಸರು: ಆಹಾರ ಅದರಲ್ಲೂ ತರಕಾರಿಯಿಂದ ತಯಾರಿಸಿದ ಆಹಾರ ತಳ ಹಿಡಿದಾಗ ಅದು ಬಹಳಷ್ಟು ಕಹಿ ಆಗಿರುತ್ತದೆ. ಇದರ ರುಚಿಯನ್ನು ಸುಧಾರಿಸಲು ಮೊದಲಿಗೆ ಆಹಾರವನ್ನು ತಳಹಿಡಿದ ಪಾತ್ರೆಯಿಂದ ಬೇರೆ ಪಾತ್ರೆಗೆ ವರ್ಗಾಯಿಸಿ ಸ್ವಲ್ಪವೇ ಸ್ವಲ್ಪ ಮೊಸರನ್ನು ಬೆರೆಸಿ ಸಣ್ಣನೆಯ ಉರಿಯಲ್ಲಿ ಕೈಯಾಡುತ್ತಾ ಸರಿಯಾಗಿ ಮಿಶ್ರಣ ಮಾಡಿ. ಇದರಿಂದ ಆಹಾರದ ರುಚಿ ಸುಧಾರಿಸುತ್ತದೆ.
ತುಪ್ಪ: ಕೆಲವು ಆಹಾರಗಳಿಗೆ ಹಾಲು ಅಥವಾ ಮೊಸರನ್ನು ಸೇರಿಸುವುದು ಅಷ್ಟು ಸೂಕ್ತವೆನಿಸುವುದಿಲ್ಲ. ಅಂತಹ ಸಂದರ್ಭದಲ್ಲಿ ತಳಹತ್ತಿದ ಆಹಾರವನ್ನು ಬೇರೆ ಬಿಸಿ ಪಾತ್ರೆಗೆ ವರ್ಗಾಯಿಸಿ ತುಪ್ಪ ಬೆರೆಸಿ ಮಿಶ್ರಣ ಮಾಡುವ ಮೂಲಕ ನೀವು ಆಹಾರದ ರುಚಿಯನ್ನು ಸುಧಾರಿಸಬಹುದು.
ನಿಂಬೆ ರಸ: ಒಂದೊಮ್ಮೆ ಆಹಾರವು ಸ್ವಲ್ಪವೇ ಸ್ವಲ್ಪ ಸೀದಿದ್ದರೆ ಅಂತಹ ಸಂದರ್ಭದಲ್ಲಿ ನಿಂಬೆ ರಸವನ್ನು ಅಥವಾ ಟೊಮೆಟೊ, ಇಲ್ಲವೇ ವೆನಿಗರ್ ಬೆರೆಸಿ ಮಿಶ್ರಣ ಮಾಡುವುದರಿಂದ ಸುಟ್ಟ ವಾಸನೆಯನ್ನು ನಿವಾರಿಸಬಹುದು. ಜೊತೆಗೆ ಆಹಾರದ ರುಚಿಯನ್ನು ಹೆಚ್ಚಿಸಬಹುದು.
ಕೆನೆ: ಇತ್ತೀಚಿನ ದಿನಗಳಲ್ಲಿ ಡೈರಿಗಳಲ್ಲಿ ಕೆನೆ/ಕ್ರೀಂ ಸುಲಭವಾಗಿ ಲಭ್ಯವಿದೆ. ಇದಲ್ಲದೆ, ಮನೆಯಲ್ಲಿಯೂ ಹಾಲಿನ ಕೆನೆ ಇದ್ದೇ ಇರುತ್ತದೆ. ಆಹಾರವು ಸುಟ್ಟು ಹಾಳಾದಾಗ ತಳದಲ್ಲಿ ತುಂಬಾ ಸುಟ್ಟಿರುವ ಆಹಾರವನ್ನು ಬೇರ್ಪಡಿಸಿ ಮೇಲಿರು ಆಹಾರವನ್ನಷ್ಟೇ ತೆಗೆದು ಅದಕ್ಕೆ ಕೆನೆ ಮಿಕ್ಸ್ ಮಾಡಿ ಸ್ವಲ್ಪ ಬಿಸಿ ಮಾಡಿ. ಇದರಿಂದ ಆಹಾರ ವ್ಯರ್ಥವಾಗುವುದನ್ನು ತಪ್ಪಿಸಬಹುದು.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಲಹೆಯಷ್ಟೇ, ನಿಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಿ. ನಿಮಗೆ ಸೂಕ್ತವಾದ ಆಹಾರವನ್ನಷ್ಟೇ ಸೇವಿಸಿ. ತೀರಾ ಹಾಳಾದ ಆಹಾರ ಸೇವಿಸುವುದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡಬಹುದು.