ಡ್ರೆಸ್ಸಿಂಗ್ ರೂಂನಲ್ಲೇ ಓದಿಕೊಂಡು ʼಡಾಕ್ಟರ್ʼ ಪದವಿ ಪಡಿತಿದ್ದಾನೆ ಟೀಂ ಇಂಡಿಯಾದ ಈ ಆಟಗಾರ! ಐಪಿಎಲ್ ಹರಾಜಲ್ಲಿ 23.75 ಕೋಟಿಗೆ ಬಿಕರಿಯಾಗಿದ್ದ ಯುವ ಕ್ರಿಕೆಟಿಗನೀತ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮೆಗಾ ಹರಾಜಿನಲ್ಲಿ ವೆಂಕಟೇಶ್ ಅಯ್ಯರ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ ಬೃಹತ್ ಬೆಲೆಗೆ ಖರೀದಿಸಿದೆ. ಅಯ್ಯರ್ ಅವರನ್ನು ಹರಾಜಿನಲ್ಲಿ 23.75 ಕೋಟಿ ರೂ. ಬೆಲೆ ಕೆಕೆಆರ್ ತಮ್ಮ ತಂಡದಲ್ಲೇ ಉಳಿಸಿಕೊಂಡಿತ್ತು. ಇದೀಗ ಈ ಆಲ್ ರೌಂಡರ್ ಮಹತ್ವದ ವಿಷಯವೊಂದನ್ನು ರಿವೀಲ್ ಮಾಡಿದ್ದಾರೆ.
ವೆಂಕಟೇಶ್ ಅಯ್ಯರ್ ಪ್ರಸ್ತುತ ಪಿಎಚ್‌ಡಿ ಪದವಿ ಪಡೆಯಲು ಅಧ್ಯಯನ ಮಾಡುತ್ತಿದ್ದಾರೆ. ಕ್ರಿಕೆಟ್ ಆಡುವಾಗ ತಮ್ಮ ಅಧ್ಯಯನವನ್ನು ಮುಂದುವರಿಸಲು ತಮ್ಮ ಸಹ ಆಟಗಾರರಿಗೆ ಸಲಹೆ ಕೂಡ ನೀಡಿದ್ದಾರೆ ಎಂದು ಹೇಳಿದ್ದಾರೆ. ಮಧ್ಯಪ್ರದೇಶದ ಈ ಆಟಗಾರ ಡಾಕ್ಟರೇಟ್ ಪದವಿ ಪಡೆಯಲಿದ್ದಾರಂತೆ. ಹೀಗಾಗಿ ಇನ್ಮುಂದೆ ಇವರ ಹೆಸರು ಡಾ.ವೆಂಕಟೇಶ ಅಯ್ಯರ್ ಆಗಲಿದೆ.
"ನಾನು ಒಂದೇ ಸಮಯದಲ್ಲಿ ಎರಡು ಕೆಲಸಗಳನ್ನು ಮಾಡಲು ಸಾಧ್ಯವಾದರೆ, ಖಂಡಿತವಾಗಿಯೂ ಅದನ್ನು ಮಾಡುತ್ತೇನೆ" ಎಂದು ಅಯ್ಯರ್ ದಿ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಮಾತನಾಡುವಾಗ ತಿಳಿಸಿದ್ದಾರೆ. "ಅಧ್ಯಯನವು ಕ್ಷೇತ್ರದಲ್ಲಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಕ್ರಿಕೆಟಿಗರು ಕೇವಲ ಕ್ರಿಕೆಟ್ ಜ್ಞಾನವನ್ನು ಮಾತ್ರವಲ್ಲದೆ ಸಾಮಾನ್ಯ ಜ್ಞಾನವನ್ನೂ ಕಲಿಯಬೇಕೆಂದು ನಾನು ಬಯಸುತ್ತೇನೆ. ನಿಮ್ಮ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ನೀವು ಪೂರ್ಣಗೊಳಿಸಬಹುದಾದರೆ, ಅದನ್ನು ಖಂಡಿತವಾಗಿ ಮಾಡಬೇಕು. ನಾನು ಪ್ರಸ್ತುತ ನನ್ನ ಪಿಎಚ್‌ಡಿ (ಹಣಕಾಸು) ಮಾಡುತ್ತಿದ್ದೇನೆ. ಮುಂದಿನ ಸಲ ಡಾ.ವೆಂಕಟೇಶ ಅಯ್ಯರ್ ಅಂತ ಸಂದರ್ಶನ ಮಾಡ್ತೀನಿ" ಎಂದು ಹೇಳಿದ್ದಾರೆ.
"ನಾವು ಬದುಕಿರುವವರೆಗೂ ಕಲಿಕೆ ನಮ್ಮೊಂದಿಗೆ ಇರುತ್ತದೆ. ನಾವು 60 ವರ್ಷ ವಯಸ್ಸಿನವರೆಗೂ ಆಡಲು ಸಾಧ್ಯವಿಲ್ಲ. ಕ್ರಿಕೆಟ್ ಅಲ್ಪಾವಧಿಗೆ ಮಾತ್ರ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ಅದರ ನಂತರ, ನೀವು ನಿಮ್ಮ ಜೀವನದಲ್ಲಿ ಏನನ್ನಾದರೂ ಮಾಡಲು ಬಯಸಿದರೆ, ಆಗ ಅಧ್ಯಯನ ಅಗತ್ಯ. ಅಧ್ಯಯನದ ಕಾರಣದಿಂದ ನಾನು ಕೆಲ ಕಾಲ ಕ್ರಿಕೆಟ್‌ನಿಂದ ದೂರ ಉಳಿದಿದ್ದೇನೆ'' ಎಂದರು.
2021ರಲ್ಲಿ ವೆಂಕಟೇಶ್ ಅವರ ಮೂಲ ಬೆಲೆ 20 ಲಕ್ಷಕ್ಕೆ ಖರೀದಿಸಲಾಯಿತು. ಪಂದ್ಯಾವಳಿಯ ಎರಡನೇ ಹಂತದಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಅಯ್ಯರ್, ಮುಂದಿನ ಸೀಸನ್ ನಲ್ಲಿ 8 ಕೋಟಿ ರೂ. ಬೆಲೆಗೆ ಬಿಕರಿಯಾದರು. ಆದರೆ ಈ ಬಾರಿ ಬರೋಬ್ಬರಿ 23.75 ಕೋಟಿಗೆ ಕೆಕೆಆರ್ ಪಾಲಾಗಿದ್ದಾರೆ.