Diwali Vastu: ಸುಖ-ಸಂಪತ್ತಿಗಾಗಿ ದೀಪಾವಳಿ ಪೂಜೆಯಲ್ಲಿ ಈ ವಿಷಯಗಳನ್ನು ನೆನಪಿನಲ್ಲಿಡಿ
ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದಾದ ದೀಪಾವಳಿ ಹಬ್ಬವನ್ನು ಬೆಳಕಿನ ಹಬ್ಬ, ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಹಬ್ಬ ಎಂದು ಕರೆಯಲಾಗುತ್ತದೆ. ಇದು ಮನೆಯಲ್ಲಿ ಸುಖ, ಸಂಪತ್ತನ್ನು ಆಕರ್ಷಿಸುವ ಹಬ್ಬ ಎಂತಲೂ ಕರೆಯಲಾಗುತ್ತದೆ.
ಅಜ್ಞಾನದಿಂದ ಜ್ಞಾನದೆಡೆಗೆ ಸಂಕೇತಿಸುವ ಈ ಹಬ್ಬದ ಪ್ರಮುಖ ಭಾಗವೆಂದರೆ ದೀಪಾವಳಿ ಪೂಜೆ. ದೀಪಾವಳಿ ಹಬ್ಬದಲ್ಲಿ ಜನರು ತಮ್ಮ ಮನೆಗೆ ಅದೃಷ್ಟ ಮತ್ತು ಸಮೃದ್ಧಿಯನ್ನು ಆಕರ್ಷಿಸಲು ಸಂಪತ್ತಿನ ದೇವತೆ ತಾಯಿ ಲಕ್ಷ್ಮಿ ಮತ್ತು ಗಣೇಶನನ್ನು ಪೂಜಿಸುತ್ತಾರೆ. ದೀಪಾವಳಿ ಪೂಜೆಯು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಎಂದು ಹೇಳಲಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದಂತೆ ವಾಸ್ತು ಶಾಸ್ತ್ರಕ್ಕೂ ವಿಶೇಷ ಮನ್ನಣೆ ನೀಡಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ದೀಪಾವಳಿ ಹಬ್ಬದಲ್ಲಿ ಕೆಲವು ವಿಚಾರಗಳ ಬಗ್ಗೆ ವಿಶೇಷ ಕಾಳಜಿ ವಹಿಸುವುದರಿಂದ ಅಂತಹ ಮನೆಯಲ್ಲಿ ಸುಖ-ಸಂಪತ್ತಿಗೆ ಎಂದಿಗೂ ಕೊರತೆ ಇರುವುದಿಲ್ಲ ಎಂದು ಹೇಳಲಾಗುತ್ತದೆ. ಅಂತಹ ಕೆಲವು ಅಂಶಗಳು ಯಾವುವೆಂದರೆ...
ದೀಪಾವಳಿ ಹಬ್ಬಕ್ಕೆ ಒಂದು ತಿಂಗಳ ಮುಂಚೆಯೇ ಸ್ವಚ್ಛತೆ, ತಯಾರಿ ಆರಂಭವಾಗುತ್ತದೆ. ಈ ಸಮಯದಲ್ಲಿ ನಿಮ್ಮ ಮನೆಯಲ್ಲಿ ಬಳಕೆಯಾಗದ ಯಾವುದೇ ವಸ್ತುಗಳಿದ್ದರೆ ಅದನ್ನು ಮನೆಯಿಂದ ಹೊರಹಾಕಿ. ಅದರಲ್ಲೂ ಮುಖ್ಯವಾಗಿ ಮನೆಯಲ್ಲಿ ಯಾವುದೇ ಮುಕ್ಕಾದ, ಮೀರಿದ ವಿಗ್ರಹಗಳಿದ್ದರೆ ಅದನ್ನು ದೀಪಾವಳಿಗೂ ಮೊದಲು ಯಾವುದಾದರೂ ಮರದ ಕೆಳಗೆ ಹಾಕಿ, ಇಲ್ಲವೇ ನದಿಯಲ್ಲಿ ಮುಳುಗಿಸಿ.
ದೀಪಾವಳಿ ಹಬ್ಬದಲ್ಲಿ ಅಲಂಕಾರಕ್ಕಾಗಿ ಕೆಂಪು, ಹಸಿರು, ನೇರಳೆ, ಕೆನೆ ಮತ್ತು ಹಳದಿ ಬಣ್ಣವನ್ನು ಬಳಸಲು ಶಿಫಾರಸು ಮಾಡಲಾಗುತ್ತದೆ.
ದೀಪಾವಳಿ ಹಬ್ಬದಲ್ಲಿ ಬೇರೆ ಹಬ್ಬಗಳಂತೆ ತಳಿರು-ತೋರಣಗಳನ್ನು ಕಟ್ಟಲು ಮರೆಯಬೇಡಿ. ಇದರೊಂದಿಗೆ, ಲಕ್ಷ್ಮಿ ದೇವಿಯ ನೆಚ್ಚಿನ ಸಂಕೇತವಾಗಿರುವ ಸ್ವಸ್ತಿಕ ಚಿಹ್ನೆಯನ್ನು ಪೂಜಾ ಸ್ಥಳದಲ್ಲಿ ಬಳಸಿ.
ದೀಪಾವಳಿ ಹಬ್ಬದಲ್ಲಿ ಪೂಜೆ ಮಾಡುವಾಗ ಸರಿಯಾದ ದಿಕ್ಕಿನಲ್ಲಿ ಪೂಜೆ ಮಾಡುವುದು ತುಂಬಾ ಅಗತ್ಯ. ದೀಪಾವಳಿ ಹಬ್ಬದ ಪೂಜೆಯೂ ಮನೆಯ ಶಕ್ತಿಯ ಮೇಲೆ ಪರಿಣಾಮ ಬೀರುವುದರಿಂದ ಈ ಸಂದರ್ಭದಲ್ಲಿ ಈಶಾನ್ಯ ದಿಕ್ಕಿನಲ್ಲಿ ಪೂಜೆ ಮಾಡುವುದು ಅತ್ಯಂತ ಮಂಗಳಕರ ಎಂದು ಹೇಳಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಈಶಾನ್ಯ ದಿಕ್ಕನ್ನು ದೇವರ ದಿಕ್ಕು ಎಂತಲೂ ಹೇಳಲಾಗುತ್ತದೆ.
ಈಶಾನ್ಯ ದಿಕ್ಕನ್ನು ಹೊರತುಪಡಿಸಿ ಆಗ್ನೇಯ ದಿಕ್ಕಿನಲ್ಲೂ ಕೂಡ ಪೂಜೆಗೆ ಅನುಕೂಲಕರವಾಗಿರುತ್ತದೆ ಎಂದು ಪರಿಗಣಿಸಲಾಗಿದೆ. ಪೂರ್ವ ದಿಕ್ಕಿಗೆ ಅಭಿಮುಖವಾಗಿ ಪೂಜೆ ಮಾಡುವುದು ಕೂಡ ಶುಭಕರ ಎನ್ನಲಾಗುವುದು.
ದೀಪಾವಳಿ ಹಬ್ಬದಲ್ಲಿ ಮುಸ್ಸಂಜೆಯಲ್ಲಿ ಮಣ್ಣಿನ ದೀಪವನ್ನು ಹಚ್ಚಲು ಮರೆಯಬೇಡಿ. ಇದು ಲಕ್ಷ್ಮಿ ಆಗಮನದ ಸಮಯವಾಗಿರುವುದರಿಂದ ಸಂಜೆ ವೇಳೆ ಮನೆ ಮುಂದೆ ಮಣ್ಣಿನ ದೀಪ ಹಚ್ಚುವುದರಿಂದ ಅಂತಹ ಮನೆಗೆ ಲಕ್ಷ್ಮಿ ಪ್ರವೇಶಿಸುತ್ತಾಳೆ ಎಂದು ನಂಬಲಾಗಿದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.