ಪುನೀತ್ ರಾಜ್‌ಕುಮಾರ್ ʻರಾಜಕೀಯʼ ದಿಂದ ದೂರವೇ ಉಳಿದುಬಿಡಲು ಇತ್ತು ಈ ಒಂದು ಕಾರಣ !
ಪುನೀತ್ ರಾಜ್‌ಕುಮಾರ್ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದರು. ಆದರೂ ಪುನೀತ್ ರಾಜಕೀಯಕ್ಕೆ ಬರಲಿಲ್ಲ ಯಾಕೆ ಎಂಬ ಪ್ರಶ್ನೆ ಅನೇಕರಲ್ಲಿದೆ. ಇದಕ್ಕೆ ಉತ್ತರ ಇಲ್ಲಿದೆ ನೋಡಿ....
ಪುನೀತ್ ಶಿಕ್ಷಣ ಹಕ್ಕು (RTE), ಸರ್ವಶಿಕ್ಷಾ ಅಭಿಯಾನ, ನಂದಿನಿ ಹಾಲು, ಚುನಾವಣಾ ಫ್ರಾಂಚೈಸ್ (ಮತ ಚಲಾಯಿಸುವ ಹಕ್ಕು) ಇತರ ಸಾಮಾಜಿಕ ಉಪಕ್ರಮಗಳ ರಾಯಭಾರಿ ಆಗಿದ್ದರು. ಸರ್ಕಾರದ ಯೋಜನೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರು.
ಇದಕ್ಕಗಿ ಒಂದು ರೂಪಾಯಿ ಹಣ ಪಡೆಯದೇ ಕೆಲಸ ಮಾಡುತ್ತಿದ್ದರು. 2014 ರ ಲೋಕಸಭೆ ಮತ್ತು 2018 ರ ಅಸೆಂಬ್ಲಿ ಚುನಾವಣೆ ಸಂದರ್ಭದಲ್ಲಿ ಪುನೀತ್ ಚುನಾವಣಾ ಆಯೋಗ ರಾಯಭಾರಿಯಾಗಿದ್ದರು. ನಮತ ಹಾಕುವಂತೆ ಒತ್ತಾಯಿಸಿದರು. ಆದರೆ ರಾಜಕೀಯ ಪಕ್ಷದ ಪರ ಪ್ರಚಾರ ಮಾಡಲಿಲ್ಲ.
ಪುನೀತ್ ಅವರನ್ನು ರಾಜಕೀಯಕ್ಕೆ ತರಲು ಸಾಕಷ್ಟು ಪ್ರಯತ್ಗಳು ನಡೆದಿದ್ದವು. ಆದರೆ ಪುನೀತ್ ಮನಸ್ಸು ಬದಲಾಯಿಸಲಿಲ್ಲ ಎಂದು ಡಿಕೆ ಶಿವಕುಮಾರ್ ಒಂದೊಮ್ಮೆ ಹೇಳಿದ್ದರು. ಪುನೀತ್ ಎಲ್ಲಾ ರಾಜಕೀಯ ಪಕ್ಷಗಳ ನಾಯಕರೊಂದಿಗೆ ಸೌಹಾರ್ದ ಸಂಬಂಧವನ್ನು ಹೊಂದಿದ್ದರು. ಆದರೆ ರಾಜಕೀಯದಿಂದ ಅಂತರ ಕಾದುಕೊಂಡಿದ್ದರು.
ರಾಜ್‌ಕುಮಾರ್ ಕುಟುಂಬದಲ್ಲಿ ಗೀತಾ ಶಿವರಾಜ್‌ಕುಮಾರ್ ಒಬ್ಬರೇ ಸಕ್ರಿಯ ರಾಜಕೀಯ ಜೀವನವನ್ನು ಹೊಂದಿರುವ ಏಕೈಕ ವ್ಯಕ್ತಿ. ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರ ಪುತ್ರಿ ಗೀತಾ ಶಿವರಾಜ್‌ಕುಮಾರ್.
ಅತ್ತಿಗೆ ಗೀತಾ ಶಿವರಾಜ್‌ಕುಮಾರ್ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಸಹ ಪುನೀತ್ ಪ್ರಚಾರ ಮಾಡಲಿಲ್ಲ. ದೂರದಿಂದಲೇ ಶುಭ ಹಾರೈಸಿದರು. ಆದರೆ ಪ್ರಚಾರದಲ್ಲಿ ಭಾಗಿಯಾಗಲಿಲ್ಲ.
ಈ ವೇಳೆ ರಾಜಕೀಯದಿಂದ ಯಾಕೆ ಅಂತರ ಕಾದುಕೊಂಡಿದ್ದೇನೆ ಎಂಬ ಸಂಗತಿಯನ್ನು ಪುನೀತ್ ಬಹಿರಂಗಪಡೆಸಿದ್ದರು. ನಮ್ಮ ಅತ್ತಿಗೆ ಅವರ ನಿಲುವನ್ನು ಗೌರವಿಸುತ್ತೇನೆ. ಅದು ಅವರ ಕುಟುಂಬದ ವಿಷಯ. ನಮ್ಮ ಕುಟುಂಬಕ್ಕೂ ರಾಜಕೀಯಕ್ಕೂ ದೂರ. ಅವರಿಗೆ ಶುಭ ಹಾರೈಸುತ್ತೇನೆ ಎಂದು ಹೇಳಿದ್ದರು.
ಪುನೀತ್ ರಾಜ್‌ಕುಮಾರ್ ಮಾರ್ಚ್ 2019 ರಲ್ಲಿ ಸಾರ್ವಜನಿಕ ಹೇಳಿಕೆ ಮೂಲಕ, ತಮ್ಮನ್ನು ರಾಜಕೀಯದಿಂದ ದೂರ ಇಡುವಂತೆ ಜನರಲ್ಲಿ ಮನವಿ ಮಾಡಿದ್ದರು.
ನನಗೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ. ನಟನಾಗಿ ನಾನು ಕಲೆಯಲ್ಲಿ ಗುರುತಿಸಿಕೊಳ್ಳುತ್ತೇನೆ. ನಮ್ಮ ಕುಟುಂಬಕ್ಕೂ ರಾಜಕೀಯಕ್ಕೂ ದೂರ ಎಂದು ಪುನೀತ್ ಹೇಳಿದ್ದರು.