Dolo 650: ಸಣ್ಣಪುಟ್ಟ ಕಾಯಿಲೆಗಳಿಗೆ ʼಡೋಲೋ 650ʼ ಮಾತ್ರೆಗಳನ್ನ ನುಂಗುವ ಮುನ್ನ ಎಚ್ಚರ.. ಎಚ್ಚರ..!
ಶೀತ, ಕೆಮ್ಮು, ಜ್ವರ, ತಲೆನೋವು, ಆಸಿಡಿಟಿ, ಮಲಬದ್ಧತೆ, ಮೈ-ಕೈ ನೋವು ಹೀಗೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಜನರು ಮಾತ್ರೆಗಳನ್ನು ಸೇವಿಸುತ್ತಾರೆ. ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಭಾರತೀಯ ಬ್ರಾಂಡ್ ಡೋಲೋ 650 ದೇಶದ ಅತ್ಯಂತ ಜನಪ್ರಿಯ ಔಷಧಿಯಾಗಿ ಹೊರಹೊಮ್ಮಿತ್ತು.
ಡೋಲೋ 650 ದೇಶದಲ್ಲೇ ಅತಿಹೆಚ್ಚು ಮಾರಾಟವಾಗುವ ಔಷಧಿ ಎನಿಸಿಕೊಂಡಿದೆ. ಡೊಲೊ 650 ಒಂದರಿಂದಲೇ ಕಂಪನಿ 5.7 ಶತಕೋಟಿ ರೂ.ಗಳ ಆದಾಯ ಗಳಿಸಿದೆ ಎಂದು ವರದಿಯಾಗಿದೆ. ಡೋಲೋ 650 ಮಾತ್ರೆ ಹೆಚ್ಚಾಗಿ ಸೇವಿಸುವ ಮುನ್ನ ಪ್ರತಿಯೊಬ್ಬರೂ ಎಚ್ಚರವಹಿಸಬೇಕು.
ಹೌದು, ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಡೋಲೋ 650 ಮಾತ್ರೆ ಸೇವನೆ ಮಾಡುವುದು ಆರೋಗ್ಯಕ್ಕೆ ಬಹಳ ಅಪಾಯಕಾರಿ. ಕೊರೊನಾ ರೋಗ ಕಾಣಿಸಿಕೊಂಡವರಿಗೂ ವೈದ್ಯರು ಸಹ ಪ್ಯಾರಾಸಿಟಮಾಲ್ ಔಷಧಿಯಾದ ಡೋಲೋ 650 ಮಾತ್ರೆ ಸೇವಿಸಲು ಸೂಚಿಸಿದ್ದರು. ಹೀಗಾಗಿಯೇ ಜನರು ಸಾಂಕ್ರಮಿಕ ರೋಗದ ಸಂದರ್ಭದಲ್ಲಿ ತಮ್ಮ ಮನೆಯಲ್ಲಿ ಮುಂಜಾಗೃತಾ ಕ್ರಮವಾಗಿ ಪ್ರಾಥಮಿಕ ಚಿಕಿತ್ಸೆ ಎನ್ನುವಂತೆ ಡೋಲೋ 650 ಮಾತ್ರೆಯನ್ನು ತಂದು ಇಟ್ಟುಕೊಂಡಿದ್ದರು.
ಶೀತ, ನೆಗಡಿ, ತಲೆನೋವು & ಜ್ವರ ಕಾಣಿಸಿಕೊಂಡರೆ ಜನರು ಇಂದಿಗೂ ಸಹ ಡೋಲೋ 650 ಮಾತ್ರೆ ತೆಗೆದುಕೊಳ್ಳುವ ಮೂಲಕ ರೋಗ ಗುಣಪಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಹೀಗೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಡೋಲೋ ಮಾತ್ರೆ ಸೇವನೆ ಮಾಡುವುದು ಬಹಳ ಅಪಾಯಕಾರಿಯಾಗಿ ಪರಿಣಮಿಸಿದೆ.
ತಜ್ಞರ ಪ್ರಕಾರ, ಔಷಧಿಗಳ ಮಿತಿಮೀರಿದ ಬಳಕೆಯು ನಿರ್ದಿಷ್ಟ ಅಂಗಗಳ ಮೇಲೆ ಮತ್ತು ನಮ್ಮ ಒಟ್ಟಾರೆ ಆರೋಗ್ಯದ ಮೇಲೆ ಗಂಭೀರ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು. ಅದೇ ರೀತಿ ಡೋಲೋ 650 ಮಾತ್ರೆ ಸೇವನೆಯಿಂದ ನೀವು ಗಂಭೀರ ಆರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.
ಡೋಲೋ 650 ಮಾತ್ರೆಗಳ ಅತಿಯಾದ ಸೇವನೆಯಿಂದ ವಾಕರಿಕೆ, ವಾಂತಿ, ಮಲಬದ್ಧತೆ, ತಲೆತಿರುಗುವಿಕೆ ಅಥವಾ ಅರೆನಿದ್ರಾವಸ್ಥೆ ಸಂಭವಿಸಬಹುದು. ದೀರ್ಘಕಾಲದವರೆಗೆ ಇವುಗಳನ್ನು ಸೇವಿಸಿದರೆ ದಣಿವು, ಉಸಿರಾಟದ ತೊಂದರೆ, ರಕ್ತಹೀನತೆ ಮತ್ತು ಮೂತ್ರಪಿಂಡಳಿಗೆ ಸಮಸ್ಯೆ ಉಂಟಾಗಬಹುದು. ಅಧಿಕ ರಕ್ತದೊತ್ತಡ ಹೊಂದಿದವರಾಗಿದ್ದರೆ ಹೃದ್ರೋಗ ಮತ್ತು ಪಾರ್ಶ್ವವಾಯುವಿಗೂ ಕಾರಣವಾಗುತ್ತದೆ ಎನ್ನಲಾಗಿದೆ. ಹೀಗಾಗಿ ವೈದ್ಯರ ಸಲಹೆ ಮೇರೆಗೆ ಈ ಮಾತ್ರೆಯನ್ನು ಬಳಸುವುದು ಸೂಕ್ತ..