`ಮಾನಸಿಕವಾಗಿ ಹೆಣಗಾಡುತ್ತಿದ್ದೇನೆ..` ಕ್ರಿಕೆಟ್ ಲೋಕಕ್ಕೆ ನಿವೃತ್ತಿ ಘೋಷಿಸಿದ ವಿಶ್ವಕಪ್ ವಿಜೇತ ಸ್ಟಾರ್ ಎಡಗೈ ಸ್ಪಿನ್ನರ್
ಇಂಗ್ಲೆಂಡ್’ನ ಎಡಗೈ ಸ್ಪಿನ್ನರ್ ಅಲೆಕ್ಸ್ ಹಾರ್ಟ್ಲಿ ‘2023 ಹಂಡ್ರೆಡ್’ ಕ್ರಿಕೆಟ್ ಪಂದ್ಯಾವಳಿ ಮುಕ್ತಾಯದ ಬಳಿಕ ವೃತ್ತಿಪರ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲಿದ್ದಾರೆ. 32 ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನಾಡಿದ ಅಲೆಕ್ಸ್ 2016 ರಲ್ಲಿ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು
2017 ರ ಐಸಿಸಿ ಮಹಿಳಾ ವಿಶ್ವಕಪ್’ನಲ್ಲಿ ಇಂಗ್ಲೆಂಡ್ ಟ್ರೋಫಿ ಗೆದ್ದಿದ್ದು, ಆ ತಂಡದಲ್ಲಿ ಅಲೆಕ್ಸ್ ಗಮನಾರ್ಹವಾಗಿ ಆಟವಾಡಿದ್ದರು.
ಈ ವರ್ಷದ ಆರಂಭದಲ್ಲಿ ಹಾರ್ಟ್ಲಿ ಅವರು ಪ್ರಾದೇಶಿಕ ಕ್ರಿಕೆಟ್’ನಲ್ಲಿ ಥಂಡರ್ ತಂಡದ ಪರವಾಗಿ ಆಡಿದ್ದರು. ಈ ಸಂದರ್ಭದಲ್ಲಿ, "ಮಾನಸಿಕವಾಗಿ ಹೆಣಗಾಡುತ್ತಿದ್ದೇನೆ" ಎಂದು ಹೇಳಿಕೊಂಡು ಆಟದಿಂದ ವಿರಾಮ ತೆಗೆದುಕೊಂಡಿದ್ದರು. ಕ್ರಮೇಣ ಅವರು ಬೌಲಿಂಗ್ ಮತ್ತು ಆಟದಲ್ಲಿನ ಆಸಕ್ತಿಯನ್ನು ಕಳೆದುಕೊಂಡರು ಎನ್ನಲಾಗಿದೆ. ಇದಾದ ಬಳಿಕ 2023 ಹಂಡ್ರೆಡ್ ಪಂದ್ಯಾವಳಿಯಲ್ಲಿ ಫಾರ್ ವೆಲ್ಷ್ ಫೈರ್ ಪರ ಪುನರಾಗಮನ ಮಾಡಿದರು. ಇಲ್ಲಿ 3 ಪಂದ್ಯಗಳನ್ನಾಡಿ, 2 ವಿಕೆಟ್ ಕಬಳಿಸಿದ್ದರು.
ಓವಲ್’ನಲ್ಲಿ ಶನಿವಾರ ನಡೆಯಲಿರುವ ಎಲಿಮಿನೇಟರ್ ಪಂದ್ಯ ಅಥವಾ ಲಾರ್ಡ್ಸ್’ನಲ್ಲಿ ಭಾನುವಾರ ನಡೆಯಲಿರುವ ಫೈನಲ್ ಹಾರ್ಟ್ಲಿಯ ಅಂತಿಮ ಪಂದ್ಯವಾಗಬಹುದು ಎಂದು ಹೇಳಲಾಗುತ್ತಿದೆ.
ಇನ್ನು ಟ್ವಿಟ್ಟರ್’ನಲ್ಲಿ ಇಂಗ್ಲೆಂಡ್ ಕ್ರಿಕೆಟ್ ಈ ಬಗ್ಗೆ ಬರೆದುಕೊಂಡಿದ್ದು, "ಅಲೆಕ್ಸ್ ಹಾರ್ಟ್ಲಿ ವೃತ್ತಿಪರ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲಿದ್ದಾರೆ. ಹಾರ್ಟ್ಲಿ ಇಂಗ್ಲೆಂಡ್ ಪರ 32 ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು 2017 ರಲ್ಲಿ ವಿಶ್ವಕಪ್ ವಿಜೇತರಾಗಿದ್ದರು. ಆಲ್ ದಿ ಬೆಸ್ಟ್, ಅಲೆಕ್ಸ್!" ಎಂದು ಹೇಳಿದೆ.
ಹಾರ್ಟ್ಲಿ 2016 ಮತ್ತು 2019 ರ ನಡುವೆ 28 ಏಕದಿನ ಅಂತರಾಷ್ಟ್ರೀಯ (ODI) ಮತ್ತು ನಾಲ್ಕು ಟ್ವೆಂಟಿ 20 ಇಂಟರ್ನ್ಯಾಷನಲ್‌ಗಳಲ್ಲಿ (T20Is) ಇಂಗ್ಲೆಂಡ್ ಅನ್ನು ಪ್ರತಿನಿಧಿಸಿದ್ದಾರೆ. 2017 ರ ವಿಶ್ವಕಪ್ ವಿಜಯವು ಅವರ ಅಂತರರಾಷ್ಟ್ರೀಯ ವೃತ್ತಿಜೀವನದ ಮಹಾ ಸಾಧನೆಯಾಗಿದೆ. ಲಾರ್ಡ್ಸ್‌ನಲ್ಲಿ ನಡೆದ ಫೈನಲ್’ನಲ್ಲಿ ಹರ್ಮನ್‌ಪ್ರೀತ್ ಕೌರ್ ಅವರ ನಿರ್ಣಾಯಕ ವಿಕೆಟ್ ಸೇರಿದಂತೆ ಹತ್ತು ವಿಕೆಟ್’ಗಳನ್ನು ಪಡೆದಿದ್ದಾರೆ ಅಲೆಕ್ಸ್.