FASTag : ಒಂದೇ ದಿನ 100 ಕೋಟಿಗೂ ಅಧಿಕ ಟೋಲ್ ಸಂಗ್ರಹ
ಫೆಬ್ರವರಿ 25 ರಂದು ಟೋಲ್ ಪ್ಲಾಜಾ ಮೂಲಕ ಒಟ್ಟು 64.5 ಲಕ್ಷಕ್ಕೂ ಹೆಚ್ಚು ವಾಹನಗಳು ಹಾದುಹೋಗಿವೆ ಎಂದು NHAIತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕ ತಿಳಿಸಿದೆ. ಅಂದರೆ ಈ ವಾಹನಗಳ ಮೂಲಕ ಸಂಗ್ರಹಿಸಲಾದ ಹಣ 103.94 ಕೋಟಿ ರೂ ಆಗಿದೆ.
ಟೋಲ್ ಕಟ್ಟುವ ಸಲುವಾಗಿ ಟೋಲ್ ಪ್ಲಾಜಾದಲ್ಲಿ ವಾಹನಗಳನ್ನು ನಿಲ್ಲಿಸುವ ಕಾರಣ, ವ್ಯರ್ಥವಾಗುವ ಇಂಧನ ಮತ್ತು ಸಮಯವನ್ನು ಉಳಿಸುವ ಉದ್ದೇಶದಿಂದ ಸರ್ಕಾರ ಫ್ಯಾಸ್ಟಾಗನ್ನು ಕಡ್ಡಾಯಗೊಳಿಸಿತ್ತು. ಫೆಬ್ರವರಿ 16 ರ ಮೊದಲು, ಸುಮಾರು 80 ಪ್ರತಿಶತ ವಾಹನಗಳು ಫಾಸ್ಟ್ಯಾಗ್ ಮೂಲಕ ಟೋಲ್ ಪಾವತಿಸುತ್ತಿದ್ದವು. ಉಳಿದ 20 ಪ್ರತಿಶತ ಜನರು ಕೂಡಾ ಅದೇ ರೀತಿಯಲ್ಲಿ ಟೋಲ್ ಪಾವತಿಸಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಫಾಸ್ಟ್ಯಾಗ್ ಕಡ್ಡಾಯಗೊಳಿಸಿ ಆದೇಶ ಜಾರಿಗೊಳಿಸಿತ್ತು.
ಪ್ರತಿ ವಾಹನದಲ್ಲೂ ಫಾಸ್ಟ್ಯಾಗ್ ಹಾಕಿಸುವ ಸಲುವಾಗಿ ಮಾರ್ಚ್ 1 ರವರೆಗೆ ಎನ್‌ಎಚ್‌ಎಐ ಉಚಿತ ಫಾಸ್ಟ್ಯಾಗ್ ನೀಡುತ್ತಿದೆ. ಇದಕ್ಕಾಗಿ, ವಾಹನದ ಆರ್‌ಸಿ, ವಾಹನದ ಮಾಲೀಕರ ಫೋಟೋ ಮತ್ತು ಸರ್ಕಾರಿ ದಾಖಲೆಗಳನ್ನು ಒದಗಿಸಬೇಕಾಗುತ್ತದೆ.
ಇತ್ತೀಚೆಗೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಫಾಸ್ಟ್ಯಾಗ್ ಖಾತೆಯಲ್ಲಿ ಕನಿಷ್ಠ ಮೊತ್ತವನ್ನು ಉಳಿಸಬೇಕೆಂಬ ನೀತಿಯನ್ನು ತೆಗೆದುಹಾಕಲು ನಿರ್ಧರಿಸಿತು. ಫಾಸ್ಟಾಗ್‌ನ ವ್ಯಾಪ್ತಿಯನ್ನು ತ್ವರಿತಗತಿಯಲ್ಲಿ ಹೆಚ್ಚಿಸುವ ಉದ್ದೇಶವನ್ನು ಎನ್‌ಎಚ್‌ಎಐ ಹೊಂದಿದೆ.