Chhattisgarh: ಸಚಿವರ ವಿರುದ್ಧವೇ ಚುನಾವಣೆ ಗೆದ್ದು ಮಗನ ಸಾವಿನ ಸೇಡು ತೀರಿಸಿಕೊಂಡ ಅಪ್ಪ!
ಗಲಭೆಯಲ್ಲಿ ಹತ್ಯೆಯಾಗಿದ್ದ ತನ್ನ ಮಗನ ಸಾವಿನ ವಿರುದ್ಧ ಸೇಡು ತೀರಿಸಿಕೊಳ್ಳಲು ಛತ್ತೀಸ್‌ಗಢ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ತಂದೆಗೆ ಭರ್ಜರಿ ಗೆಲುವು ಸಿಕ್ಕಿದೆ. 7 ಬಾರಿ ಚುನಾವಣೆ ಗೆದ್ದು ಸಚಿವರಾಗಿದ್ದ ಅಭ್ಯರ್ಥಿಯ ವಿರುದ್ಧವೇ ಭರ್ಜರಿ ಗೆಲುವು ಸಾಧಿಸಿರುವುದು ಅಚ್ಚರಿಯ ಸಂಗತಿಯಾಗಿದೆ.
ಇದೇ ಮೊದಲ ಬಾರಿಗೆ ಸಜಾ ವಿಧಾನಸಭಾ ಕ್ಷೇತ್ರದಿಂದ ಚುನಾವಣೆ ಎದುರಿಸಿದ್ದ ಬಿಜೆಪಿ ಅಭ್ಯರ್ಥಿ, ವೃತ್ತಿಯಲ್ಲಿ ಕೃಷಿಕರಾಗಿರುವ ಈಶ್ವರ್ ಸಾಹು, ರಾಜ್ಯ ಸಂಸದೀಯ ವ್ಯವಹಾರಗಳ ಸಚಿವ ಕಾಂಗ್ರೆಸ್ ಅಭ್ಯರ್ಥಿ ರವೀಂದ್ರ ಚೌಬೆ ವಿರುದ್ಧ 40 ಸಾವಿರಕ್ಕೂ ಅಧಿಕ ಮತಗಳಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.
2023ರ ಏಪ್ರಿಲ್ 8ರಂದು ಸಜಾ ಕ್ಷೇತ್ರದ ಗ್ರಾಮದಲ್ಲಿ 2 ಗುಂಪುಗಳ ನಡುವೆ ಮಾರಾಮಾರಿ ನಡೆದಿತ್ತು. ಈ ವೇಳೆ 2 ಸಮುದಾಯಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿತ್ತು. ಈ ಘಟನೆ ನಡೆದ 4 ದಿನಗಳ ಬಳಿಕ ಗ್ರಾಮದಲ್ಲಿ ಅಲ್ಪಸಂಖ್ಯಾತ ಸಮುದಾಯದ ಈಶ್ವರ್ ಸಾಹು ಅವರ ಮಗ ಭುವನೇಶ್ವರ ಸಾಹು ಹತ್ಯೆಯಾಗಿದ್ದರು. ಪರಿಣಾಮ ಛತ್ತೀಸ್‌ಗಢದ ಭೂಪೇಶ್ ಬಘೇಲ್ ಸರ್ಕಾರದ ವಿರುದ್ಧ ಜನಾಕ್ರೋಶ ಎದುರಾಗಿತ್ತು. ತಮ್ಮ ಮಗನ ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ಈಶ್ವರ್ ಸಾಹು ಪ್ರತಿಭಟನೆ ಕೈಗೊಂಡಿದ್ದರು.
ಛತ್ತೀಸ್‌ಗಢದ ಕಾಂಗ್ರೆಸ್ ಸರ್ಕಾರವು ಕೊಲೆಯಾದ ಭುವನೇಶ್ವರ್ ಸಾಹು ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಮತ್ತು ಸರ್ಕಾರಿ ಉದ್ಯೋಗ ನೀಡುವುದಾಗಿ ಘೋಷಿಸಿತ್ತು. ಆದರೆ ಈಶ್ವರ್ ಸಾಹು ಕುಟುಂಬ ಈ ಪರಿಹಾರ ಪಡೆಯಲು ನಿರಾಕರಿಸಿತ್ತು. ನಮಗೆ ಹಣ ಮತ್ತು ಸರ್ಕಾರಿ ಉದ್ಯೋಗದ ಬದಲು ನ್ಯಾಯ ಬೇಕು ಅಂತಾ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದಾದ ಬಳಿಕ ಬಿಜೆಪಿ ಈಶ್ವರ್ ಸಾಹುಗೆ ಟಿಕೆಟ್ ನೀಡಿತ್ತು.
ಸದ್ಯ ಈಶ್ವರ್ ಸಾಹು ಅವರು 40 ಸಾವಿರಕ್ಕೂ ಹೆಚ್ಚು ಮತಗಳ ಅಂತದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಗಲಭೆಯಲ್ಲಿ ಸಾವನ್ನಪ್ಪಿದ ತಮ್ಮ ಪುತ್ರನಿಗೆ ತಂದೆ ನ್ಯಾಯ ಕೊಡಿಸಿದ್ದಾರೆ ಅಂತಾ ಅನೇಕರು ಈಶ್ವರ್ ಸಾಹುಗೆ ಶುಭಾಶಯ ತಿಳಿಸಿದ್ದಾರೆ. ವೃತ್ತಿಯಲ್ಲಿ ಕೃಷಿಕರಾಗಿರುವ ಅವರಿಗೆ ಬಿಜೆಪಿ ಟಿಕೆಟ್ ನೀಡಿದ್ದಕ್ಕೆ ಸಹ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.