Bike Craze: ಭಾರತದಲ್ಲಿ ಸಂಪೂರ್ಣವಾಗಿ ಬುಕ್ ಆದ ಹಾರ್ಲೆ ಡೇವಿಡ್ಸನ್ ಬೈಕ್‌ಗಳು..!

Wed, 04 Aug 2021-4:08 pm,

ಈ ವರ್ಷದ ಏಪ್ರಿಲ್‌ನಲ್ಲಿ 10 ರಿಂದ 35 ಲಕ್ಷ ರೂ.(ಎಕ್ಸ್ ಶೋರೂಂ ಬೆಲೆ) ಬೆಲೆಯ 13 ಹಾರ್ಲೆ- ಡೇವಿಡ್ಸನ್ ಬೈಕ್ ಮಾದರಿಗಳಿಗೆ ಬುಕ್ಕಿಂಗ್ ಪ್ರಕ್ರಿಯೆಯು ಪ್ರಾರಂಭವಾಯಿತು. ಆ ವೇಳೆ ಹೀರೋ ಮೋಟೋಕಾರ್ಪ್ 2021ರ ಮಾದರಿ ಶ್ರೇಣಿಯ ಬೆಲೆಗಳನ್ನು ಘೋಷಿಸಿತ್ತು. ಅಕ್ಟೋಬರ್ 2020ರಲ್ಲಿ ಹೀರೋ ಮೋಟೋಕಾರ್ಪ್ ಮತ್ತು ಹಾರ್ಲೆ ಡೇವಿಡ್ಸನ್ ಭಾರತೀಯ ಮಾರುಕಟ್ಟೆಯಲ್ಲಿ ಬೈಕ್ ಪೂರೈಸಲು ಪಾಲುದಾರಿಕೆ ಘೋಷಿಸಿದ್ದವು.

ಹಾರ್ಲೆ-ಡೇವಿಡ್ಸನ್ ಭಾರತದಲ್ಲಿ ತನ್ನ ಕಾರ್ಯಾಚರಣೆ ನಿಲ್ಲಿಸಿದ ಬಳಿಕ ವಿಶ್ವದ ಅತಿದೊಡ್ಡ ಮೋಟಾರ್ ಬೈಕ್ ಮತ್ತು ಸ್ಕೂಟರ್ ಉತ್ಪಾದಕರಾದ ಹೀರೋ ಮೋಟೋಕಾರ್ಪ್, ದೇಶದಲ್ಲಿ ಹಾರ್ಲೆ-ಡೇವಿಡ್ಸನ್ ಮೋಟಾರ್ ಬೈಕ್‌, ಬಿಡಿಭಾಗಗಳು ಮತ್ತು ಸರಕುಗಳ ವಿತರಣೆಯ ಹಕ್ಕುಗಳನ್ನು ಸ್ವಾಧೀನಪಡಿಸಿಕೊಂಡಿತು. ಇಲ್ಲಿಯವರೆಗೆ ಹೀರೋ ಮೋಟೋಕಾರ್ಪ್ 12 ಹಾರ್ಲೆ-ಡೇವಿಡ್ಸನ್ ಡೀಲರ್‌ಗಳನ್ನು ಹೊಂದಿದೆ ಮತ್ತು ಭಾರತದಲ್ಲಿ ತನ್ನ ಗ್ರಾಹಕರ ಟಚ್ ಪಾಯಿಂಟ್‌ಗಳನ್ನು ಹೆಚ್ಚಿಸಿದೆ.

ಹೀರೊ ಮೊಟೊಕಾರ್ಪ್ ಈಗಾಗಲೇ ಭಾರತದಲ್ಲಿ ಹಾರ್ಲೆ-ಡೇವಿಡ್ಸನ್ ಬ್ರಾಂಡ್ ಅಡಿಯಲ್ಲಿ ಮಾರಾಟ ಮಾಡಲು ವ್ಯಾಪಕ ಶ್ರೇಣಿಯ ಪ್ರೀಮಿಯಂ ಮೋಟಾರ್ ಬೈಕ್‌ಗಳನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆಯಲ್ಲಿದೆ. ಉದ್ಯಮ ಮೂಲದ ಪ್ರಕಾರ, ಕಂಪನಿಯು ಈಗಾಗಲೇ 100 ಕ್ಕೂ ಹೆಚ್ಚು ಮೋಟಾರ್ ಬೈಕ್‌ಗಳಿಗೆ ಬುಕಿಂಗ್ ಪಡೆದುಕೊಂಡಿದೆ. ಇದರಲ್ಲಿ ಮುಂಬರುವ ಪ್ಯಾನ್ ಅಮೇರಿಕಾ 1250 ಅಡ್ವೆಂಚರ್ ಬೈಕ್‌ಗಳು ಸೇರಿವೆ. ಇತರ ಮಾದರಿಗಳಲ್ಲಿ ಸಾಫ್ಟೈಲ್, ಫ್ಯಾಟ್ ಬಾಬ್ ಮತ್ತು ಸ್ಟ್ರೀಟ್ ಬಾಬ್ ಬೈಕ್‌ಗಳೂ ಸೇರಿವೆ ಎಂದು ಹೇಳಲಾಗಿದೆ.  

ಭಾರತೀಯ ಮಾರುಕಟ್ಟೆಯಲ್ಲಿ ಹಾರ್ಲೆ-ಡೇವಿಡ್ಸನ್ ಬೈಕ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ‘ನಾವು ಶೀಘ್ರವೇ ದೇಶದಲ್ಲಿ ಪ್ಯಾನ್ ಅಮೆರಿಕ 1250 ಅಡ್ವೆಂಚರ್ ಬೈಕ್ ನ ಚಿಲ್ಲರೆ ಮಾರಾಟದ ಕುರಿತು ಘೋಷಣೆ ಮಾಡಲಿದ್ದೇವೆ. ಆ ಸಂದರ್ಭದಲ್ಲಿ ನಾವು ಹೆಚ್ಚಿನ ವಿವರಗಳನ್ನು ತಿಳಿಸುತ್ತೇವೆ’ ಅಂತಾ ಹೀರೋ ಮೋಟೋಕಾರ್ಪ್ ಹೇಳಿದೆ.

ಹೀರೊ ಮೊಟೊಕಾರ್ಪ್ ನ ಹಾರ್ಲೆ-ಡೇವಿಡ್ಸನ್ ಜೊತೆಗಿನ ಒಪ್ಪಂದವು ಪ್ರೀಮಿಯಂ ಬೈಕ್ ವಿಭಾಗದಲ್ಲಿ ಹಿಡಿತ ಸಾಧಿಸಲು ಅವರಿಗೆ ಸಹಾಯ ಮಾಡುತ್ತದೆ. ಪ್ರಸ್ತುತ ಬಜೆಟ್ ಬೈಕ್ ವಿಭಾಗದಲ್ಲಿ (100-110 ಸಿಸಿ) ಹೀರೋ ಮೋಟೋಕಾರ್ಪ್ ಮುಂಚೂಣಿಯಲ್ಲಿದೆ. ಇದರ ಹೊರತಾಗಿ ಕಂಪನಿಯು ತಮ್ಮ ಬಜೆಟ್ ಮತ್ತು ಪ್ರೀಮಿಯಂ ವಿಭಾಗಗಳಿಗಾಗಿ ಎಲೆಕ್ಟ್ರಿಕ್ ಬೈಕ್‌ಗಳನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆಯಲ್ಲಿದೆ.

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link