ಕೇವಲ ಈ ಆರು ಸೂತ್ರ ಅನುಸರಿಸಿ ನಿಮ್ಮ ಮೆದುಳನ್ನು ಚುರುಕಾಗಿಸಿ..!
ಮೆದುಳಿನ ಆರೋಗ್ಯದ ಬಗ್ಗೆ ಹೇಳುವುದಾದರೆ ಪಟ್ಟಿಯಲ್ಲಿ ಮೊದಲು ಬರುವುದೇ ಒಮೆಗಾ 3 ಇರುವಂತಹ ಆಹಾರ. ಒಮೆಗಾ 3 ಫ್ಯಾಟಿ ಆಸಿಡ್ ಅಥವಾ ಕೊಬ್ಬಿನ ಅಂಶ ಅಧಿಕವಾಗಿರುವ ಮೀನು ಮೆದುಳಿನ ಆರೋಗ್ಯಕ್ಕೆ ಬಹಳ ಸಹಕಾರಿಯಾಗಿರುತ್ತದೆ. 2017ರಲ್ಲಿ ನಡೆದ ಅಧ್ಯಯನದ ಪ್ರಕಾರ, ಒಮೆಗಾ3 ಮೆದುಳಿನಲ್ಲಿ ರಕ್ತ ಸಂಚಲನವನ್ನು ಹೆಚ್ಚಿಸುತ್ತದೆ. ಇದರಿಂದ ಯೋಚನಾ ಶಕ್ತಿಯೂ ಹೆಚ್ಚುತ್ತದೆ.
ಡಾರ್ಕ್ ಚಾಕೊಲೇಟ್ ನಲ್ಲಿ ಕೋಕೋ ಇರುತ್ತದೆ. ಕೋಕೋ ಫ್ಲೇವೊನೈಡ್ ಅನ್ನು ಒಳಗೊಂಡಿರುತ್ತದೆ. ಇದೊಂದು ಆಂಟಿ ಆಕ್ಸಿಡೆಂಟ್ ಆಗಿದೆ. ಮೆದುಳಿನ ಆರೋಗ್ಯಕ್ಕೆ ಆಂಟಿ ಆಕ್ಸಿಡೆಂಟ್ ಅತ್ಯಗತ್ಯ. ಏಕೆಂದರೆ ದೇಹದಲ್ಲಿನ ಆಕ್ಸಿಡೇಟಿವ್ ಸ್ಟ್ರೆಸ್ ವಯಸ್ಸಾದಂತೆ ಮೆದುಳಿನ ಮೇಲೆ ಪರಿಣಾಮ ಬೀರಲು ಶುರು ಮಾಡುತ್ತದೆ. 2013 ರ ಅಧ್ಯಯನದ ಪ್ರಕಾರ, ಕೋಕೋ ಫ್ಲೇವೊನೈಡ್ ಗಳು ನರಕೋಶ ಮತ್ತು ರಕ್ತನಾಳಗಳು ಆಕ್ಟಿವ್ ಆಗಿರಲು ಸಹಕಾರಿಯಾಗುತ್ತದೆ.
ಡಾರ್ಕ್ ಚಾಕಲೇಟಿನಂತೆಯೇ ಬೆರಿ ಹಣ್ಣುಗಳು ಕೂಡಾ ಮೆದುಳಿನ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ. ಸ್ಟ್ರಾಬೆರಿ, ರಸ್ ಬೆರಿ, ಬ್ಲ್ಯಾಕ್ ಬೆರಿ, ಬ್ಲೂಬೆರಿ ಈ ಎಲ್ಲಾ ಹಣ್ಣುಗಳು ಆಂಟಿ ಆಕ್ಸಿಡೆಂಟ್ ಗುಣವನ್ನು ಹೊಂದಿದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಗುಣದಿಂದಲೇ ಈ ಹಣ್ಣುಗಳನ್ನು ಮೆದುಳಿನ ಆರೋಗ್ಯಕ್ಕೆ ಉತ್ತಮ ಎಂದು ಪರಿಗಣಿಸಲಾಗುತ್ತದೆ. ಅಲ್ಲದೆ ವಯಸ್ಸಾದಂತೆ ಕಾಣಿಸಿಕೊಳ್ಳುವ ಮೆದುಳಿನ ಕಾಯಿಲೆಗಳನ್ನು ದೂರವಿಡಲು ಕೂಡಾ ಈ ಹಣ್ಣುಗಳು ಸಹಕಾರಿಯಾಗಿವೆ.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಬಹಳ ಮುಖ್ಯ ಪಾತ್ರ ವಹಿಸುವ ಅರಶಿನ ಮೆದುಳಿನ ಆರೋಗ್ಯ ಕಾಪಾಡುವಲ್ಲಿಯೂ ಪ್ರಾಮುಖ್ಯತೆ ಪಡೆದಿದೆ. ಅರಿಶಿನದಲ್ಲಿ ಕಂಡುಬರುವ ಕರ್ಕ್ಯುಮಿನ್ ಮೆದುಳಿಗೆ ನೇರವಾಗಿ ತಲುಪುವ ಮೂಲಕ ಮೆದುಳಿನ ಕೋಶಗಳನ್ನು ಆಕ್ಟಿವ್ ಆಗಿ ಇಡುತ್ತದೆ. ಅಲ್ಲದೆ ಕರ್ಕ್ಯುಮಿನ್ ಸಿರೊಟೋನಿನ್ ಮತ್ತು ಡೋಪಮೈನ್ ನಂತಹ ಹಾರ್ಮೋನುಗಳ ಸ್ರವಿಸುವಿಕೆಯನ್ನು ಹೆಚ್ಚಿಸುತ್ತದೆ. ಇದು ಮಾನಸಿಕ ಸ್ಥಿತಿಯನ್ನು ಉತ್ತಮಗೊಳಿಸುತ್ತದೆ.
ಡ್ರೈ ಪ್ರುಟ್ ಗಳು ಮತ್ತು ಕೆಲ ಹಣ್ಣುಗಳ ಬೀಜಗಳ ಸೇವನೆ ಕೂಡಾ ಮೆದುಳಿಗೆ ಪ್ರಯೋಜನಕಾರಿ. ಅವುಗಳಲ್ಲಿರುವ ಆಂಟಿ ಆಕ್ಸಿಡೆಂಟ್ ಮತ್ತು ಒಮೆಗಾ -3 ಮೆದುಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಹಕಾರಿಯಾಗಿದೆ. ಆದ್ದರಿಂದ, ನಿಮ್ಮ ಆಹಾರದಲ್ಲಿ ಆಕ್ರೋಟ್, ಬಾದಾಮಿ, ಕುಂಬಳಕಾಯಿ ಬೀಜಗಳು ಮತ್ತು ಸೂರ್ಯಕಾಂತಿ ಬೀಜಗಳನ್ನು ಸೇರಿಸಿ.
ಬ್ರೌನ್ ರೈಸ್, ಬಾರ್ಲಿ, ಓಟ್ ಮೀಲ್, ಹೋಲ್-ಗ್ರೇನ್ ಬ್ರೆಡ್, ಹೋಲ್-ಗ್ರೇನ್ ಪಾಸ್ಟಾ ಇವು ವಿಟಮಿನ್ ಇ ಯ ಉತ್ತಮ ಮೂಲವಾಗಿದೆ. ಇದು ಮೆಮೊರಿ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಮೆದುಳಿನ ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.