Ford-Mahindra : ದಿಗ್ಗಜ ಕಂಪನಿಗಳ ನಡುವೆ ಬ್ರೇಕ್ ಅಪ್
ಅಕ್ಟೋಬರ್ 2019 ರಲ್ಲಿ, ಎರಡೂ ಕಂಪನಿಗಳು ಜಂಟಿ ಉದ್ಯಮದ ಬಗ್ಗೆ ಘೋಷಿಸಿತ್ತು. ಉಭಯ ಕಂಪನಿಗಳ ನಡುವಿನ ಒಪ್ಪಂದದ ಪ್ರಕಾರ, ಕಂಪನಿಗಳು 31 ಡಿಸೆಂಬರ್ 2020 ರೊಳಗೆ ಜಂಟಿ ಉದ್ಯಮಕ್ಕೆ ಅಂತಿಮ ರೂಪ ನೀಡಬೇಕಾಗಿತ್ತು. ಆದರೆ ಕರೋನಾ ಸಾಂಕ್ರಮಣದ ಪರಿಣಾಮವಾಗಿ ಕಳೆದ 15 ತಿಂಗಳಲ್ಲಿ ಕಂಪನಿಯ ವ್ಯವಹಾರಗಳಲ್ಲಿ ಸಾಕಷ್ಟು ಬದಲಾವಣೆಗಲಾಗಿವೆ ಎಂದು ಫೋರ್ಡ್ ತಿಳಿಸಿದೆ. ಜಾಗತಿಕ ಆರ್ಥಿಕ ಪರಿಸ್ಥಿತಿಗಳು ಮತ್ತು ವ್ಯವಹಾರ 2019ರ ಅಕ್ಟೋಬರ್ ನಲ್ಲಿ ಇದ್ದಂತೆ ಇಲ್ಲ. ಹಾಗಾಗಿ ಯೋಜನೆಗೆ ಅಂತಿಮ ರೂಪ ನೀಡುವ ಬದಲು, ಒಪ್ಪಂದವನ್ನು ಕೊನೆಗೊಳಿಸಲು ನಿರ್ಧರಿಸಲಾಗಿದೆ ಎಂದು ಫೋರ್ಡ್ ವಕ್ತಾರ ಟಿ.ಆರ್. ರೀಡ್, ತಿಳಿಸಿದ್ದಾರೆ.
ಭಾರತದಲ್ಲಿ ಫೋರ್ಡ್ ನ ಪ್ರತ್ಯೇಕ ವ್ಯವಹಾರವು ಮೊದಲಿನಂತೆ ಮುಂದುವರಿಯುತ್ತದೆ ಇದರಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ ಎಂದು ಫೋರ್ಡ್ ವಕ್ತಾರ ಟಿಆರ್ ರೀಡ್ ಸ್ಪಷ್ಟಪಡಿಸಿದ್ದಾರೆ. ಉತ್ಪಾದನಾ ಒಪ್ಪಂದದ ಪ್ರಕಾರ ಮಹೀಂದ್ರಾ ಫೋರ್ಡ್ ಕಾರುಗಳನ್ನು ತಯಾರಿಸುವುದನ್ನು ಮುಂದುವರಿಸಲಿದೆ ಎಂದು ಫೋರ್ಡ್ ಹೇಳಿದೆ.
ಫೋರ್ಡ್ ಮತ್ತು ಮಹೀಂದ್ರಾ ವಾಹನಗಳ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಮಾರಾಟ ಮಾಡಲು ಜಂಟಿ ಉದ್ಯಮವನ್ನು ರೂಪಿಸಲಾಗುವುದು ಎಂದು ಅಕ್ಟೋಬರ್ 2019 ರಲ್ಲಿ ಒಪ್ಪಂದದ ನಂತರ, ಉಭಯ ಕಂಪನಿಗಳು ಹೇಳಿತ್ತು. ಮಧ್ಯಮ ಗಾತ್ರದ ಎಸ್ಯುವಿ ಸೇರಿದಂತೆ ಮೂರು ಯುಟಿಲಿಟಿ ವಾಹನಗಳನ್ನು ಲಾಂಚ್ ಮಾಡುವ ಉದ್ದೇಶವನ್ನು ಕಂಪನಿಗಳು ಹೊಂದಿತ್ತು. ಕಂಪನಿಯು ಎಲೆಕ್ಟ್ರಿಕ್ ವಾಹನಗಳತ್ತ ಗಮನ ಹರಿಸುವುದಾಗಿ ಮಹೀಂದ್ರಾ ಘೋಷಿಸಿತ್ತು.
ಈ ನಿರ್ಧಾರವು ತನ್ನ ಉತ್ಪನ್ನ ಯೋಜನೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಮಹೀಂದ್ರಾ ಮತ್ತು ಮಹೀಂದ್ರಾ ಬಿಎಸ್‌ಇಗೆ ನೀಡಿದ ಮಾಹಿತಿಯಲ್ಲಿ ತಿಳಿಸಿದೆ. ಉದ್ದೇಶಿತ ಜಂಟಿ ಉದ್ಯಮದಲ್ಲಿ ಶೇ 51:49 ರಷ್ಟು ಪಾಲನ್ನು ಹೊಂದಿರಬೇಕಿತ್ತು. ಸಿಸಿಐ ಇದಕ್ಕೆ ಈಗಾಗಲೇ ಅನುಮೋದನೆ ನೀಡಿತ್ತು. ಗುಜರಾಜ್ ಮತ್ತು ತಮಿಳುನಾಡು ಸರ್ಕಾದಿಂದ ಹಸಿರು ನಿಶಾನೆ ಪಡೆಯಬೇಕಾಗಿತ್ತು. ಆದರೆ ಕರೋನಾ ಕಾರಣದಿಂದ ಇದು ವಿಳಂಬವಾಯಿತು.