Happy Birthday Sonu Nigam: 10ನೇ ವಯಸ್ಸಿನಲ್ಲಿ ಸ್ಟೇಜ್ ಶೋಗಳಲ್ಲಿ ಹಾಡುತ್ತಿದ್ದ ಈತ ಇಂದು ಬಾಲಿವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಗಾಯಕ!
ಭಾರತೀಯ ಖ್ಯಾತ ಹಿನ್ನಲೆ ಗಾಯಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಸೋನು ನಿಗಮ್ 30 ಜುಲೈ 1973ರಲ್ಲಿ ಹರಿಯಾಣದ ಫರಿದಾಬಾದ್ ನಲ್ಲಿ ಜನಿಸಿದರು. ಇವರ ತಂದೆ ಆಗಮ್ ಕುಮಾರ್ ನಿಗಮ್, ತಾಯಿ ಶೋಭಾ ನಿಗಮ್.
ಸೋನು ನಿಗಮ್ ಅವರ ತಂದೆ ಆಗಮ್ ಕುಮಾರ್ ನಿಗಮ್ ಕೂಡ ಸಂಗೀತಗಾರರೇ. ಸುಮಾರು ನಾಲ್ಕನೇ ವಯಸ್ಸಿನಿಂದ ಹಾಡಲು ಆರಂಭಿಸಿದ್ದ ಸೋನು ನಿಗಮ್ 10ನೇ ವಯಸ್ಸಿನಿಂದಲೂ ತಂದೆಯೊಂದಿಗೆ ಹಲವು ಸ್ಟೇಜ್ ಶೋಗಳು, ಪಾರ್ಟಿಗಳು ಮತ್ತು ಮದುವೆ ಸಮಾರಂಭಗಳಲ್ಲಿ ಹಾಡಿದ್ದಾರೆ.
ದೆಹಲಿಯಲ್ಲಿ ಉಸ್ತಾದ್ ಮಹಾ ಕಂಜರ್ ನವೀದ್ ಅವರಿಂದ ಶಾಸ್ತ್ರೀಯ ಸಂಗೀತದ ತರಬೇತಿ ಪಡೆಯುತ್ತಿದ್ದ ಸೋನು ನಿಗಮ್ ತಮ್ಮ 18ನೇ ವಯಸ್ಸಿನಲ್ಲಿ ಹಿನ್ನಲೆ ಗಾಯಕರಾಗುವ ಇಚ್ಛೆ ವ್ಯಕ್ತಪಡಿಸಿದ್ದರಿಂದ ಅವರ ತಂದೆ ಮಗನನ್ನು ಮುಂಬೈಕೆ ಕರೆತರುತ್ತಾರೆ.
ಹಲವಾರು ಪ್ರಾದೇಶಿಕ ಮತ್ತು ರಾಷ್ಟ್ರೀಯ ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸಿದ ಬಳಿಕ ಹಿನ್ನಲೆ ಗಾಯಕರಾಗಬೇಕೆಂಬ ಆಸೆ ಹೊತ್ತು ಮುಂಬೈಗೆ ಬಂದ ಸೋನು ನಿಗಮ್, ಪೌರಾಣಿಕ ಶಾಸ್ತ್ರೀಯ ಸಂಗೀತ ಮಾಂತ್ರಿಕ ಉಸ್ತಾದ್ ಗುಲಾಮ್ ಮುಸ್ತಫಾ ಖಾನ್ ಅವರ ಗರಡಿಯಲ್ಲಿ ಪಳಗಿದವರು.
ಸೋನು ನಿಗಮ್ ಅವರಿಗೆ 1990ರಲ್ಲಿ 'ಜನಂ' ಚಿತ್ರದಲ್ಲಿ ಹಿನ್ನಲೆ ಗಾಯನಕ್ಕೆ ಮೊದಲ ಅವಕಾಶ ಸಿಕ್ಕಿತಾದರೂ, ಈ ಚಿತ್ರ ರಿಲೀಸ್ ಆಗಲೇಇಲ್ಲ.
ಟಿ-ಸೀರೀಸ್ ಮಾಲೀಕ ಗುಲ್ಶನ್ ಕುಮಾರ್ 'ಬೇವಾಫಾ ಸನಮ್'ನಲ್ಲಿ 'ಅಚ್ಛಾ ಸಿಲಾ ದಿಯಾ ಟ್ಯೂನ್' ಹಾಡಲು ಅವಕಾಶ ನೀಡಿದರು. ಈ ಗೀತೆ ಸೂಪರ್ ಹಿಟ್ ಆಯಿತು.
ಆದಾಗ್ಯೂ, ಸುಮಾರು ಐದು ವರ್ಷಗಳ ಕಾಲ ಮುಂಬೈನಲ್ಲಿ ಕಷ್ಟದ ದಿನಗಳನ್ನು ಅನುಭವಿಸಿದ ಸೋನು ನಿಗಮ್ ಅವರಿಗೆ ಸ್ಟೇಜ್ ಶೋಗಳೇ ಅವರ ಆದಾಯದ ಪ್ರಮುಖ ಮೂಲವಾಗಿತ್ತು.
1997ರಲ್ಲಿ ತೆರೆಕಂಡ 'ಬಾರ್ಡರ್' ಚಿತ್ರದಲ್ಲಿ 'ಸಂದೇಸೆ ಆತೆ ಹೇ' ಎಂಬ ಸೂಪರ್ ಹಿಟ್ ಗೀತೆಯ ಮೂಲಕ ಜನಪ್ರಿಯತೆ ಗಳಿಸಿದ ಸೋನು ನಿಗಮ್ ಬ್ಯಾಕ್ ಟು ಬ್ಯಾಕ್ ಹಿಟ್ ಗೀತೆಯ ಮೂಲಕ ಇಂದು ಭಾರತದಾದ್ಯಂತ ಮನೆ ಮಾತಾಗಿದ್ದಾರೆ.
ಸೋನು ನಿಗಮ್ ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಪಾಪ್ ರಾಕ್, ಶಾಸ್ತ್ರೀಯ ಗಾಯನ, ಅರೆ-ಶಾಸ್ತ್ರೀಯ ಗಾಯನ, ಗಜಲ್ಸ್ ಗಾಯನ, ಹಿನ್ನೆಲೆ ಗಾಯನಸೇರಿದಂತೆ ಸುಮಾರು 2,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.
ದೇಶದ ಟಾಪ್ ಗಾಯಕರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಸೋನು ನಿಗಮ್ ದೇಶ-ವಿದೇಶಗಳಲ್ಲಿ ನಡೆಸುವ ಸಂಗೀತ ಕಚೇರಿಗಳಿಗೆ 10 ರಿಂದ 15ಲಕ್ಷ ರೂ. ಸಂಭಾವನೆ ಪಡೆಯುತ್ತಾರೆ. ಮೂಲಗಳಿಂದ ಲಭ್ಯವಿರುವ ಮಾಹಿತಿಯ ಪ್ರಕಾರ, ಇವರು ಒಂದು ಹಾಡಿಗೆ ಸುಮಾರು 5 ಕೋಟಿ ರೂ.ಗಳಷ್ಟು ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗುತ್ತದೆ.