Benefits of Walnuts: ಪ್ರತಿದಿನ ನೆನೆಸಿದ ವಾಲ್ನಟ್ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆ
ವಾಲ್ನಟ್ ಬೀಜಗಳು ನಮ್ಮ ಮೆದುಳಿನ ಆರೋಗ್ಯದ ಮೇಲೆ ಸಕಾರಾತ್ಮಕ ಪ್ರಭಾವ ಬೀರುತ್ತವೆ. ಇವುಗಳಲ್ಲಿ ಒಮೆಗಾ 3 ಫ್ಯಾಟಿ ಆಸಿಡ್ ಪ್ರಮಾಣ ಹೇರಳವಾಗಿದ್ದು, ಮೆದುಳಿನ ಕಾರ್ಯ ಚಟುವಟಿಕೆಯನ್ನು ಅಭಿವೃದ್ಧಿಪಡಿಸುತ್ತದೆ. ಪ್ರತಿದಿನ ಒಂದೊಂದು ವಾಲ್ನಟ್ ಬೀಜವನ್ನು ನೆನೆಸಿ ತಿನ್ನುವುದರಿಂದ ನಮ್ಮ ಮಾನಸಿಕ ಅರಿವು, ನೆನಪಿನ ಶಕ್ತಿ ಮತ್ತು ಬುದ್ಧಿವಂತಿಕೆ ಸಹ ಹೆಚ್ಚಾಗುತ್ತದೆ.
ವಾಲ್ನಟ್ ಬೀಜಗಳು ಆರೋಗ್ಯಕರ ಕೊಬ್ಬು ಹಾಗೂ ಆಂಟಿ ಆಕ್ಸಿಡೆಂಟ್ ಅಂಶಗಳನ್ನು ಒಳಗೊಂಡಿದ್ದು, ಇದು ನಮ್ಮ ದೇಹದ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಬಲ್ಲ ಸಾಮರ್ಥ್ಯ ಹೊಂದಿದೆ. ನಮ್ಮ ರಕ್ತದ ಒತ್ತಡವನ್ನು ಆರೋಗ್ಯಕರವಾಗಿ ನಿರ್ವಹಿಸುವುದರ ಜೊತೆಗೆ ನಮ್ಮ ಹೃದಯ ರಕ್ತನಾಳದ ಕಾಯಿಲೆಯನ್ನು ದೂರ ಮಾಡಿ ಹೃದಯಕ್ಕೆ ಯಾವುದೇ ತೊಂದರೆ ಉಂಟಾಗದಂತೆ ನೋಡಿಕೊಳ್ಳುತ್ತದೆ.
ನೆನೆಸಿದ ವಾಲ್ನಟ್ ಬೀಜಗಳು ಫೈಟಿಕ್ ಆಮ್ಲವನ್ನು ಕಡಿಮೆಗೊಳಿಸುವ ಗುಣವನ್ನು ಹೊಂದಿವೆ. ಹೀಗಾಗಿ ನಾವು ಸೇವಿಸಿದ ಆಹಾರ ನಮ್ಮ ದೇಹದಲ್ಲಿ ಚೆನ್ನಾಗಿ ಜೀರ್ಣವಾಗುತ್ತದೆ. ಇದರ ಜೊತೆಗೆ ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಪಟ್ಟಂತೆ ಮಲಬದ್ಧತೆ, ಅಜೀರ್ಣತೆ ಹಾಗೂ ಹೊಟ್ಟೆಯುಬ್ಬರ ಸಮಸ್ಯೆ ಇರುವುದಿಲ್ಲ. ಕರುಳಿನ ಆರೋಗ್ಯವನ್ನು ಸಹ ಇದು ಉತ್ತಮಪಡಿಸುತ್ತದೆ.
ನಮ್ಮ ದೇಹದ ತೂಕವನ್ನು ನಿರ್ವಹಣೆ ಮಾಡುವಲ್ಲಿ ವಾಲ್ನಟ್ ಬೀಜಗಳು ಸಹಕಾರಿಯಾಗಿದೆ. ಇವುಗಳಲ್ಲಿ ಹೆಚ್ಚಿನ ಪ್ರಮಾಣದ ನಾರು ಹಾಗೂ ಪ್ರೋಟಿನ್ ಅಂಶವನ್ನು ಒಳಗೊಂಡಿದೆ. ಇವು ಹೊಟ್ಟೆ ತುಂಬಿದ ಅನುಭವ ಉಂಟು ಮಾಡುತ್ತದೆ. ಇದರ ಜೊತೆಗೆ ಕ್ಯಾಲೋರಿಗಳನ್ನು ಕಡಿಮೆ ಮಾಡುತ್ತವೆ. ಇದರಿಂದ ನಮ್ಮ ದೇಹದ ತೂಕ ಹೆಚ್ಚಾಗಲು ಬಿಡುವುದಿಲ್ಲ. ಹೀಗಾಗಿ ತೂಕ ನಿರ್ವಹಣೆಗೆ ವಾಲ್ನಟ್ ಸಹಕಾರಿಯಾಗಿದೆ.
ನಮ್ಮ ಸೌಂದರ್ಯವನ್ನು ಹೆಚ್ಚಿಸುವಲ್ಲಿ ವಾಲ್ನಟ್ ಬೀಜಗಳು ಪ್ರಮುಖ ಪಾತ್ರ ವಹಿಸುತ್ತವೆ. ಇವುಗಳಲ್ಲಿ ವಿಟಮಿನ್ B5 ಮತ್ತು ವಿಟಮಿನ್ E ಪ್ರಮಾಣ ಅಧಿಕವಾಗಿದ್ದು, ಆರೋಗ್ಯಕರ ತ್ವಚೆಗೆ ಇವುಗಳು ಅಗತ್ಯವಾಗಿವೆ. ಈ ಪೌಷ್ಟಿಕ ಸತ್ವಗಳು ನಮ್ಮ ದೇಹದ ಉರಿಯೂತವನ್ನು ಕಡಿಮೆ ಮಾಡುವುದರ ಜೊತೆಗೆ ಚರ್ಮದ ಒಣಗುವಿಕೆಯಿಂದ ಮುಕ್ತಿ ನೀಡುತ್ತವೆ. ವಯಸ್ಸಾಗುವಿಕೆ ಪ್ರಕ್ರಿಯೆಯಿಂದ ನಮ್ಮನ್ನು ಕಾಪಾಡುತ್ತದೆ ಮತ್ತು ಕಾಂತಿಯುತ ಚರ್ಮ ನಮ್ಮದಾಗುತ್ತದೆ.