Health Tips: ಚಳಿಗಾಲದಲ್ಲಿ ಕೀಲುನೋವನ್ನು ನಿವಾರಿಸಲು ಈ ಆಹಾರಗಳು ಸೇವಿಸಿರಿ
ಸಾಲ್ಮನ್, ಬಂಗುಡೆಯಂತಹ ಕೊಬ್ಬಿನ ಮೀನು ಪ್ರಭೇದಗಳು ಸಮೃದ್ಧ ಪ್ರಮಾಣದಲ್ಲಿ ಒಮೆಗಾ-೩ ಕೊಬ್ಬಿನಾಮ್ಲಗಳು, ವಿಟಮಿನ್ ಡಿ ಹೊಂದಿರುತ್ತವೆ. ಇದು ಉರಿಯೂತ ವಿರೋಧಿ ಗುಣಲಕ್ಷಣವನ್ನು ಹೊಂದಿದ್ದು, ಕೀಲುಗಳ ನೋವು ನಿವಾರಿಸಲು ನೆರವಾಗುತ್ತದೆ. ಹೀಗಾಗಿ ಈ ಆಹಾರಗಳನ್ನು ನಿಮ್ಮ ಡಯೆಟ್‌ನಲ್ಲಿ ಸೇರಿಸಿಕೊಳ್ಳಬಹುದು.
ಬೆಳ್ಳುಳ್ಳಿ, ಈರುಳ್ಳಿಯಂತಹ ಬೇರು ಮೂಲದ ತರಕಾರಿಗಳು ಡಯಾಲಿಲ್ ಡೈಸಲ್ಫೈಡ್ ಅನ್ನು ಹೊಂದಿರುತ್ತವೆ. ಇದು ಉರಿಯೂತ ವಿರೋಧಿ ಸಂಯುಕ್ತವಾಗಿದ್ದು, ಊರಿಯೂತದ ವಿರುದ್ಧ ಹೋರಾಡಲು, ನೋವನ್ನು ನಿವಾರಿಸಲು ಹಾಗೂ ಒಟ್ಟಾರೆ ಕೀಲುಗಳ ಆರೋಗ್ಯವನ್ನು ಸುಧಾರಿಸಲು ನೆರವಾಗುತ್ತದೆ ಎನ್ನಲಾಗುತ್ತದೆ.
ಶುಂಠಿ ಕೂಡ ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ತಾಜಾ ಅಥವಾ ಒಣಗಿದ ರೂಪದಲ್ಲಿ ಶುಂಠಿಯ ನಿಯಮಿತ ಸೇವನೆಯಿಂದ ಕೀಲುಗಳ ಉರಿಯೂತವನ್ನು ಪರಿಹರಿಸಿಕೊಳ್ಳಬಹುದು. ನಿಮ್ಮ ದೈನಂದಿನ ಚಹಾ, ಸಾರು ಅಥವಾ ಇತರ ಖಾದ್ಯಗಳಲ್ಲಿ ಶುಂಠಿಯನ್ನು ಸೇರಿಸಬಹುದು ಅಥವಾ ಒಂದು ಕಪ್ ಬೆಚ್ಚಗಿನ ನೀರಿನಲ್ಲಿ ಸೇರಿಸಿ ಜೇನುತುಪ್ಪವನ್ನು ಬೆರೆಸಿ ಕುಡಿಯಬಹುದು.
ಒಣಬೀಜಗಳು ಅಥವಾ ಡ್ರೈಫ್ರೂಟ್ಸ್ ಆರೋಗ್ಯಕರ ಕೊಬ್ಬು, ಒಮೆಗಾ-೩ ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿವೆ. ಬಾದಾಮಿ, ವಾಲ್ನಟ್, ಅಗಸೆ ಬೀಜಗಳಂತಹ ಬೀಜಗಳನ್ನು ಸಣ್ಣ ಪ್ರಮಾಣದಲ್ಲಿ ನಿಯಮಿತವಾಗಿ ಸೇವಿಸುವುದರಿಂದ ಕೀಲುಗಳ ಉರಿಯೂತದಿಂದ ಪರಿಹಾರ ಕಂಡುಕೊಳ್ಳಬಹುದು.
ಸೇಬು ಹಣ್ಣುಗಳು, ಸ್ಟ್ರಾಬೆರ್ರಿಯಂತಹ ಹಣ್ಣುಗಳು ಆಂಟಿ-ಆಕ್ಸಿಡೆಂಟ್ ಗುಣಗಳಿಂದ ಸಮೃದ್ಧವಾಗಿರುತ್ತವೆ. ಇವುಗಳು ದೇಹವು ಹಾನಿಕಾರಕ ಫ್ರೀ ರಾಡಿಕಲ್‌ಗಳನ್ನು ತೊಡೆದುಹಾಕಲು, ಉರಿಯೂತ ತಗ್ಗಿಸಲು ಸಹಾಯ ಮಾಡುತ್ತದೆ. ಆಂಥೋಸಯಾನಿನ್‌ಗಳಲ್ಲಿ ಸಮೃದ್ಧವಾಗಿರುವ ಚರ್ರಿಗಳ ಸೇವನೆಯೂ ಕೀಲು, ಸ್ನಾಯುಗಳ ಊತವನ್ನು ಕಡಿಮೆ ಮಾಡಲು ಸಹಾಯಕವಾಗಿವೆ.
ಆಲಿವ್ ಎಣ್ಣೆ ಅನ್‌ಸ್ಯಾಚುರೇಡೆಟ್, ಆರೋಗ್ಯಕರ ಕೊಬ್ಬು ಹಾಗೂ ಒಮೆಗಾ-೩ ಮೂಲವಾಗಿದೆ. ಆಲಿವ್ ಎಣ್ಣೆಯು ಒಲಿಯೊಕಾಂಥಲ್ ಅನ್ನು ಕೂಡ ಹೊಂದಿದೆ. ಇದು ಉರಿಯೂತದಿಂದ ಪರಿಹಾರವನ್ನು ನೀಡುತ್ತದೆ. ಹೀಗಾಗಿ ನಿಮ್ಮ ದೈನಂದಿನ ಅಡುಗೆಯಲ್ಲಿ ಆಲಿವ್ ಎಣ್ಣೆಯನ್ನು ಸೇರಿಸಬಹುದು.