Health Tips: ಒಂದು ದಿನಕ್ಕೆ ಎಷ್ಟು ಬಾಳೆಹಣ್ಣು ತಿನ್ನಬೇಕು, ಈ ರೋಗಿಗಳು ತಿನ್ನಲೇಬಾರದು!
ಬಾಳೆಹಣ್ಣುಗಳು ನಮ್ಮ ದೇಹಕ್ಕೆ ಬೇಕಾದ ಅನೇಕ ಪೋಷಕಾಂಶಗಳನ್ನು ಒಳಗೊಂಡಿರುತ್ತವೆ. ಒಂದು ಮಧ್ಯಮ ಗಾತ್ರದ ಬಾಳೆಹಣ್ಣು 27 ಗ್ರಾಂ ಕಾರ್ಬೋಹೈಡ್ರೇಟ್, 3 ಗ್ರಾಂ ಫೈಬರ್ ಮತ್ತು 14 ಗ್ರಾಂ ನೈಸರ್ಗಿಕ ಸಕ್ಕರೆಯನ್ನು ಹೊಂದಿರುತ್ತದೆ. ಇದರಿಂದ ನಮಗೆ 105 ಕ್ಯಾಲೋರಿ ದೊರೆಯುತ್ತದೆ. ಹೀಗಾಗಿಯೇ ಅನೇಕ ಜನರು ಊಟದ ನಡುವೆ ಹಸಿವನ್ನು ಹೋಗಲಾಡಿಸಲು ಹೆಚ್ಚು ಬಾಳೆಹಣ್ಣುಗಳನ್ನು ತಿನ್ನುತ್ತಾರೆ.
ಯಾವುದೇ ಆಹಾರವಾಗಲಿ ಮಿತವಾಗಿ ಸೇವಿಸಬೇಕು. ಇಲ್ಲವಾದಲ್ಲಿ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಬಾಳೆಹಣ್ಣು ತುಂಬಾ ರುಚಿಯಾಗಿರುವುದರಿಂದ & ಬೆಲೆ ಕಡಿಮೆ ಇರುವುದರಿಂದ ಒಂದೇ ದಿನಕ್ಕೆ ಸಿಕ್ಕಾಪಟ್ಟೆ ಬಾಳೆಹಣ್ಣು ತಿನ್ನುವವರು ಸಹ ಇದ್ದಾರೆ. ಆದರೆ ಆ ರೀತಿ ಮಾಡದೆ ಮಿತಿವಾಗಿ ಸೇವಿಸಬೇಕು. ಹಾಗಾದ್ರೆ ದಿನಕ್ಕೆ ಎಷ್ಟು ಬಾಳೆಹಣ್ಣು ತಿನ್ನಬೇಕು? ಎಂಬ ಪ್ರಶ್ನೆ ಹಲವರಲ್ಲಿ ಮೂಡುತ್ತದೆ. ಆ ಪ್ರಶ್ನೆಗೆ ಉತ್ತರ ಇಲ್ಲಿದೆ.
ಆರೋಗ್ಯ ತಜ್ಞರ ಪ್ರಕಾರ ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲದ ಆರೋಗ್ಯವಂತ ವ್ಯಕ್ತಿ ದಿನಕ್ಕೆ ಗರಿಷ್ಠ ಎರಡು ದೊಡ್ಡ ಬಾಳೆಹಣ್ಣುಗಳನ್ನು ತಿನ್ನಬಹುದು ಅಥವಾ 3 ಮಧ್ಯಮ ಗಾತ್ರದ ಬಾಳೆಹಣ್ಣುಗಳು ಹಾಗೂ 5 ಸಣ್ಣ ಬಾಳೆಹಣ್ಣುಗಳನ್ನು ತಿನ್ನಬಹುದು. ಮಧುಮೇಹ ಇರುವವರು ಯಾವುದೇ ಕಾರಣಕ್ಕೂ ಬಾಳೆಹಣ್ಣು ತಿನ್ನಲೇಬಾರದು. ಏಕೆಂದರೆ ಬಾಳೆಹಣ್ಣಿನಲ್ಲಿರುವ ಅಪಾರ ಪ್ರಮಾಣದ ಕಾರ್ಬೋಹೈಡ್ರೇಟ್‌ಗಳು ಗ್ಲೂಕೋಸ್ ಆಗಿ ಪರಿವರ್ತನೆಗೊಂಡು ರಕ್ತದಲ್ಲಿ ತಕ್ಷಣವೇ ಬೆರೆತುಹೋಗುತ್ತದೆ. ಈ ಕಾರಣದಿಂದ ಸಕ್ಕರೆಯ ಪ್ರಮಾಣವು ಗಮನಾರ್ಹವಾಗಿ ಹೆಚ್ಚಾಗುತ್ತದೆ. ಇದರಿಂದ ಸಮಸ್ಯೆಗಳು ಉಂಟಾಗುತ್ತವೆ. ಹೀಗಾಗಿ ಮಧುಮೇಹ ಇರುವವರು ಬಾಳೆಹಣ್ಣು ತಿನ್ನಬಾರದು.
ಹೆಚ್ಚು ಬಾಳೆಹಣ್ಣುಗಳನ್ನು ತಿನ್ನುವುದು ಹೈಪರ್‌ಕೆಲೆಮಿಯಾಕ್ಕೆ ಕಾರಣವಾಗಬಹುದು. ಇದು ದೇಹದಲ್ಲಿ ಹೆಚ್ಚು ಪೊಟ್ಯಾಶಿಯಂ ಇದ್ದಾಗ ಸಂಭವಿಸುವ ಸ್ಥಿತಿಯಾಗಿದೆ. ಇದು ಹೃದಯಾಘಾತ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ದಿನಕ್ಕೆ 18 ಗ್ರಾಂಗಿಂತ ಹೆಚ್ಚು ಪೊಟ್ಯಾಶಿಯಂ ಸೇವಿಸುವುದರಿಂದ ಹೈಪರ್‌ಕೆಲೆಮಿಯಾ ಉಂಟಾಗುತ್ತದೆ ಅಂತಾ ಸಂಶೋಧನೆ ಸೂಚಿಸುತ್ತದೆ. ಇನ್ನು ಬಾಳೆಹಣ್ಣಿನಲ್ಲಿ ಪಿಷ್ಟವೂ ಅಧಿಕವಾಗಿದ್ದು, ಇದು ದಂತಕ್ಷಯಕ್ಕೆ ಕಾರಣವಾಗಬಹುದು. ಬಾಳೆಹಣ್ಣುಗಳು ಅಲರ್ಜಿಯ ಪ್ರತಿಕ್ರಿಯೆಗಳಾದ ಗಂಟಲಿನ ತುರಿಕೆ, ಅಜೀರ್ಣ, ಸೆಳೆತ, ಅತಿಸಾರ, ವಾಂತಿ, ಊದಿಕೊಂಡ ತುಟಿಗಳು ಹಾಗೂ ಉಬ್ಬಸಕ್ಕೆ ಕಾರಣವಾಗಬಹುದು. ಹೀಗಾಗಿ ಆರೋಗ್ಯಕರ, ಸಮತೋಲಿತ ಆಹಾರದ ಭಾಗವಾಗಿ ಬಾಳೆಹಣ್ಣುಗಳನ್ನು ಮಿತವಾಗಿ ತಿನ್ನಬೇಕು.
ಮಿತವಾಗಿ ಬಾಳೆಹಣ್ಣು ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನ ಪಡೆಯಬಹುದು. ಈ ಹಣ್ಣು ಪೌಷ್ಠಿಕಾಂಶಗಳು & ರುಚಿಯಿಂದ ಬಹುತೇಕ ಜನರ ನೆಚ್ಚಿನ ಹಣ್ಣಾಗಿದೆ. ಈ ಹಣ್ಣು ಪೊಟ್ಯಾಶಿಯಂನ ಉತ್ತಮ ಮೂಲವಾಗಿದೆ. ಸರಿಯಾದ ಸ್ನಾಯುವಿನ ಕಾರ್ಯನಿರ್ವಹಣೆಗೆ ಮತ್ತು ಆರೋಗ್ಯಕರ ರಕ್ತದೊತ್ತಡದ ಮಟ್ಟ ಕಾಪಾಡಿಕೊಳ್ಳಲು ಇದು ಸಹಕಾರಿ. ಬಾಳೆಹಣ್ಣಿನಲ್ಲಿ ಹೆಚ್ಚಾಗಿ ನಾರಿನಂಶವೂ ಇದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದು ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದ್ದು, ಸ್ವತಂತ್ರ ರಾಡಿಕಲ್ಗಳಿಂದ ಉಂಟಾಗುವ ಹಾನಿಯಿಂದ ದೇಹವನ್ನು ರಕ್ಷಿಸುತ್ತದೆ. ಬಾಳೆಹಣ್ಣಿನಲ್ಲಿ ಟ್ರಿಪ್ಟೊಫಾನ್ ಎಂಬ ಅಮೈನೋ ಆಮ್ಲವೂ ಇದೆ. ಇದು ಮನಸ್ಥಿತಿಯನ್ನು ಸುಧಾರಿಸಲು ಮತ್ತು ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ.