Health Tips: ಸೀಮೆ ಬದನೆಕಾಯಿ ಸೇವನೆಯ ಆರೋಗ್ಯಕರ ಪ್ರಯೋಜನಗಳು
ಸೀಮೆಬದನೆಕಾಯಿಯಲ್ಲಿರುವ ಫೈಟೊಕೆಮಿಕಲ್‌ಗಳು ರಕ್ತದ ಹರಿವನ್ನು ಸುಧಾರಿಸುವುದಲ್ಲದೇ, ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದ್ದು, ಕೊಲೆಸ್ಟ್ರಾಲ್ ಮಟ್ಟ ಮತ್ತು ಉರಿಯೂತ ಕಡಿಮೆ ಮಾಡಲು ಹಾಗೂ ಹೃದ್ರೋಗ ಮತ್ತು ಕ್ಯಾನ್ಸರ್‌ನಂತಹ ಕಾಯಿಲೆಗಳ ಅಪಾಯ ಕಡಿಮೆ ಮಾಡಲು ಸಹಕಾರಿ.
ಸೀಮೆಬದನೆಕಾಯಿ ಯಕೃತ್ತಿನಲ್ಲಿ ಕೊಬ್ಬಿನ ಶೇಖರಣೆಯ ವಿರುದ್ಧ ರಕ್ಷಿಸುವ ಸಂಯುಕ್ತಗಳನ್ನು ಹೊಂದಿದೆ. ಇದು ಪಿತ್ತಜನಕಾಂಗದಲ್ಲಿ ಕೊಬ್ಬಿನಾಮ್ಲ ಕಡಿಮೆ ಮಾಡಲು ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಲು ಸಹಕಾರಿಯಾಗಿದೆ. ಅಲ್ಲದೆ ದೇಹದ ಚಯಾಪಚಯ ಮತ್ತು ಕೊಬ್ಬನ್ನು ಸಂಸ್ಕರಿಸುವ ಸಾಮರ್ಥ್ಯ ಸುಧಾರಿಸಲು ಸಹಾಯ ಮಾಡುತ್ತದೆ.
ಫೈಬರ್ ಸಮೃದ್ಧವಾಗಿರುವ ಸೀಮೆಬದನೆಕಾಯಿಯಲ್ಲಿ ಕಾರ್ಬೋಹೈಡ್ರೇಟ್‌ಗಳಲ್ಲಿ ಕಡಿಮೆ ಇರುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದರಲ್ಲಿರುವ ಫೈಬರ್‌ನ ಅಂಶವು ಕಡಿಮೆ ತಿಂದರೂ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಜೊತೆಗೆ ನಿಮ್ಮ ದೇಹದ ಕಾರ್ಬೋಹೈಡ್ರೇಟ್‌ಗಳ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ.
ಸೀಮೆಬದನೆಕಾಯಿ ಆಂಟಿ-ಆಕ್ಸಿಡೆಂಟ್ ಅಂಶಗಳಿಂದ ಸಮೃದ್ಧವಾಗಿದ್ದು, ಸಪೋನಿನ್ ಮತ್ತು ಫ್ಲೇವನಾಯ್ಡ್‌ಗಳನ್ನು ಹೊಂದಿದೆ. ಇವುಗಳು ಫ್ರೀ ರಾಡಿಕಲ್ ಅಂಶಗಳ ವಿರುದ್ಧ ಹೋರಾಡಿ ಕ್ಯಾನ್ಸರ್ ಸಮಸ್ಯೆಯ ವಿರುದ್ಧ ರಕ್ಷಣೆ ನೀಡುತ್ತವೆ. ಸೀಮೆ ಬದನೆಕಾಯಿಯ ಒಳ ಹಾಗೂ ಮೇಲ್ಭಾಗದ ಸಿಪ್ಪೆಯಲ್ಲಿ ಮಾರಕ ಕ್ಯಾನ್ಸರ್ ವಿರುದ್ಧ ಹೋರಾಡುವ ಆಂಟಿ-ಆಕ್ಸಿಡೆಂಟ್ ಅಂಶಗಳು ಹೇರಳವಾಗಿವೆ. ಹೀಗಾಗಿ ಇದು ಚರ್ಮದ ಕ್ಯಾನ್ಸರ್ ವಿರುದ್ಧ ರಕ್ಷಣಾತ್ಮಕ ಪ್ರಭಾವ ಬೀರುತ್ತದೆ.
ಗರ್ಭಿಣಿಯಾಗಿರುವ ಅಥವಾ ಗರ್ಭಿಣಿಯಾಗಲು ಪ್ರಯತ್ನಿಸುವ ಮಹಿಳೆಯರಿಗೆ ಫೋಲೇಟ್ ಅತ್ಯಗತ್ಯ ಪೋಷಕಾಂಶವಾಗಿದೆ. ವಿಟಮಿನ್ B9 ಎಂದಲೂ ಕರೆಯಲ್ಪಡುವ ಫೋಲೇಟ್ ಭ್ರೂಣದ ಮೆದುಳು ಮತ್ತು ಬೆನ್ನುಹುರಿಯ ಬೆಳವಣಿಗೆಯಲ್ಲಿ ಪ್ರಮುಖವಾಗಿದೆ. ಫೋಲೇಟ್ ಮಗುವಿನ ಅಕಾಲಿಕ ಜನನವನ್ನು ತಡೆಯಲು ಸಹಾಯ ಮಾಡುತ್ತದೆ. ಹೀಗಾಗಿ ಸೀಮೆ ಬದನೆಯನ್ನು ಗರ್ಭಿಣಿಯರು ನಿಯಮಿತವಾಗಿ ಸೇವನೆ ಮಾಡಬೇಕು.