Benefits Of Bananas: ದಿನಕ್ಕೆ ಎರಡು ಬಾಳೆಹಣ್ಣು ತಿಂದ್ರೆ ಏನಾಗುತ್ತೆ ಗೊತ್ತಾ?

Sat, 01 Jun 2024-11:09 am,

ದಿನಕ್ಕೆ ಎರಡು ಬಾಳೆಹಣ್ಣು ಸೇವಿಸಿದರೆ ಕರುಳಿನ ಕಾರ್ಯ & ಜೀರ್ಣಕ್ರಿಯೆ ಆರೋಗ್ಯ ಸುಧಾರಣೆಯಾಗುತ್ತದೆ. ಬಾಳೆಹಣ್ಣಿನಲ್ಲಿ ಕರಗುವ & ಕರಗದ ನಾರಿನಾಂಶವಿದ್ದು, ಇದು ಜೀರ್ಣಕ್ರಿಯೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ಕರಗುವ ನಾರಿನಾಂಶವು ನೀರನ್ನು ಹೀರಿಕೊಂಡು ಜೀರ್ಣಕ್ರಿಯೆ ವ್ಯವಸ್ಥೆಯಲ್ಲಿ ಸಾಗುತ್ತದೆ, ಲೋಳೆಯ ಅಂಶವನ್ನು ಉತ್ಪತ್ತಿ ಮಾಡಿ ಮಲವನ್ನು ಸರಾಗವಾಗಿ ಹೊರ ಹೋಗಲು ಸಹಕರಿಸುತ್ತದೆ. ಇದರಿಂದ ಮಲಬದ್ಧತೆ ಸಮಸ್ಯೆಯಿಂದ ಮುಕ್ತಿ ದೊರೆಯುತ್ತದೆ. ಕರಗದಿರುವ ನಾರಿನಾಂಶವು ಕರುಳಿನಲ್ಲಿ ಮಲದ ವೇಗವನ್ನು ಹೆಚ್ಚು ಮಾಡುತ್ತದೆ. ಇದರಿಂದ ಹೊಟ್ಟೆಯುಬ್ಬರ ಕಡಿಮೆಯಾಗುವುದರ ಜೊತೆಗೆ ದೇಹದಿಂದ ಕಲ್ಮಷ ಹೊರ ಹೋಗುತ್ತದೆ. 

ಇಂದು ಅನೇಕರಿಗೆ ಹೃದಯದ ಸಮಸ್ಯೆ ಕಾಡುತ್ತಿದ್ದು, ಇದರಿಂದ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಂಡರೆ ಇದರ ಅಪಾಯ ಕಡಿಮೆ ಮಾಡಬಹುದು. ಪೊಟಾಶಿಯಂ ಸಮೃದ್ಧವಾಗಿರುವ ಬಾಳೆಹಣ್ಣನ್ನು ಸೇವಿಸಿದರೆ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಎಲೆಕ್ಟ್ರೋಲೈಟ್ಸ್ ಆಗಿರುವ ಬಾಳೆಹಣ್ಣು ರಕ್ತದೊತ್ತಡ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪೊಟಾಶಿಯಂ ಸರಿಯಾದ ಪ್ರಮಾಣದಲ್ಲಿದ್ದರೆ ರಕ್ತನಾಳಗಳಿಗೆ ಆಗುವ ಹಾನಿ ಕಡಿಮೆಯಾಗುತ್ತದೆ. ಬಾಳೆಹಣ್ಣಿನಲ್ಲಿರುವ ನಾರಿನಾಂಶ ಮತ್ತು ಆ್ಯಂಟಿ-ಆಖ್ಸಿಡೆಂಟ್ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ನಾರಿನಾಂಶವು ಸಹಕಾರಿ. ದಿನಕ್ಕೆ ಎರಡು ಬಾಳೆಹಣ್ಣು ಸೇವಿಸಿದರೆ ಹೃದಯದ ಆರೋಗ್ಯ ಕಾಪಾಡಬಹುದು ಮತ್ತು ರಕ್ತದೊತ್ತಡವನ್ನು ನಿಭಾಯಿಸಬಹುದು.

ಸೋಂಕು ಮತ್ತು ಅನಾರೋಗ್ಯದ ವಿರುದ್ಧ ಹೋರಾಡಲು ರೋಗನಿರೋಧಕ ಶಕ್ತಿ ಅಗತ್ಯ. ಬಾಳೆಹಣ್ಣಿನಲ್ಲಿರುವ ಪೋಷಕಾಂಶಗಳು ದೇಹದಲ್ಲಿನ ಪ್ರತಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ. ಬಾಳೆಹಣ್ಣಿನಲ್ಲಿರುವ ವಿಟಮಿನ್ C ಪ್ರತಿರೋಧಕ ಶಕ್ತಿ ವೃದ್ಧಿಸಲು ಸಹಕಾರಿ. ಈ ವಿಟಮಿನ್ ಆ್ಯಂಟಿ-ಆಕ್ಸಿಡೆಂಟ್ ರೀತಿ ಕೆಲಸ ಮಾಡಿ, ಹಾನಿಕಾರಕ ಫ್ರೀ ರಾಡಿಕಲ್‌ನಿಂದ ರಕ್ಷಣೆ ನೀಡುತ್ತದೆ. ಪ್ರತಿರೋಧಕ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುವ ಬಿಳಿ ರಕ್ತಕಣಗಳ ಕಾರ್ಯವನ್ನು ಸರಿಪಡಿಸುವುದು. ಬಾಳೆಹಣ್ಣಿನಲ್ಲಿರುವ ವಿಟಮಿನ್ B೬ ಮತ್ತು ಸತುವಿನ ಅಂಶವು ಪ್ರತಿರೋಧಕ ವ್ಯವಸ್ಥೆಗೆ ಸಹಕಾರಿ.  

ನಿಯಮಿತವಾಗಿ ಬಾಳೆಹಣ್ಣು ಸೇವಿಸಿದರೆ ಮೆದುಳಿನ ಆರೋಗ್ಯವನ್ನು ಕಾಪಾಡಬಹುದು. ಬಾಳೆಹಣ್ಣಿನಲ್ಲಿ ವಿಟಮಿನ್ B೬ ಸಮೃದ್ಧವಾಗಿದೆ. ಇದು ಸಂತೋಷದ ಹಾರ್ಮೋನ್ ಸೆರೊಟೊನಿನ್ ಮತ್ತು ಡೊಪಮೈನ್ ಬಿಡುಗಡೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಿಂದ ಮನಸ್ಥಿತಿ ಸುಧಾರಣೆ, ಸುಖ ನಿದ್ರೆ ಮತ್ತು ಅರಿವಿನ ಕಾರ್ಯವು ಸುಧಾರಣೆಯಾಗುತ್ತದೆ. ಬಾಳೆಹಣ್ಣಿನಲ್ಲಿರುವ ಡೊಪಮೈನ್ ಮತ್ತು ಕ್ಯಾಟಚಿನ್ ಆ್ಯಂಟಿ-ಆಕ್ಸಿಡೆಂಟ್‌ಗಳು ಆಕ್ಸಿಡೇಟಿವ್ ಒತ್ತಡ ಕಡಿಮೆ ಮಾಡುತ್ತವೆ. ಇದು ವಯಸ್ಸಾದವರಲ್ಲಿ ಕಂಡುಬರುವ ಅರಿವಿನ ಸಮಸ್ಯೆಗಳನ್ನು ದೂರ ಮಾಡುತ್ತದೆ. ಬಾಳೆಹಣ್ಣಿನಲ್ಲಿರುವ ಮೆಗ್ನಿಶಿಯಂ ಅಂಶವು ರಕ್ತಸಂಚಾರವನ್ನು ಸುಗಮಗೊಳಿಸಿ ರಕ್ತನಾಳಗಳನ್ನು ಆರಾಮವಾಗಿಸುವುದು. ಇದರಿಂದ ಮೆದುಳಿಗೆ ಸರಿಯಾಗಿ ಆಮ್ಲಜನಕವು ಸರಬರಾಜಾಗಿ ಮೆದುಳಿನ ಕಾರ್ಯವು ಸುಧಾರಿಸುತ್ತದೆ.   

ಬಾಳೆಹಣ್ಣು ಸೇವನೆ ಮಾಡಿದರೆ ಸುಲಭವಾಗಿ ತೂಕ ನಷ್ಟ ಮಾಡಿಕೊಳ್ಳಬಹುದು. ಕರಗುವ & ಕರಗದ ನಾರಿನಾಂಶಗಳಿಂದ ಸಮೃದ್ಧವಾಗಿರುವ ಬಾಳೆಹಣ್ಣು ಜೀರ್ಣಕ್ರಿಯೆಗೆ ಸಹಕರಿಸಿ, ಹೊಟ್ಟೆ ತುಂಬಲು ನೆರವಾಗುತ್ತದೆ. ಕರಗುವ ನಾರಿನಾಂಶವು ಲೋಳೆಯಂತಹ ಅಂಶವನ್ನು ನಿರ್ಮಾಣ ಮಾಡಿ ಹೊಟ್ಟೆ ಖಾಲಿಯಾಗುವುದನ್ನು ನಿಧಾನವಾಗಿಸುವುದು. ಇದರಿಂದ ದೀರ್ಘಕಾಲ ಹೊಟ್ಟೆ ತುಂಬಿದಂತೆ ಇರುವುದು ಮತ್ತು ಅನಾರೋಗ್ಯಕರ ಆಹಾರ ಸೇವನೆ ತಪ್ಪಿಸುತ್ತದೆ. ಹಸಿ ಬಾಳೆಹಣ್ಣು ಸೇವಿಸಿದರೆ ಹಸಿವು ಉಂಟು ಮಾಡುವ ಹಾರ್ಮೋನ್ ನಿಯಂತ್ರಿಸುತ್ತದೆ. ಇದರಿಂದ ಕ್ಯಾಲರಿ ಸೇವನೆಯು ಕಡಿಮೆಯಾಗುತ್ತದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link